ಅಣ್ಣನಿಗೆ ನಮ್ಮವರು ಇಷ್ಟವಿಲ್ಲ

ಲಿಮಿಟ್ಟಿನಲ್ಲಿ ಕುಟುಂಬದವರೆಲ್ಲರೂ

ಸೇರಿಕೊಂಡು ಪಾರ್ಟಿ ಮಾಡಿ ಎಂಜಾಯ್ ಮಾಡುವುದರಲ್ಲಿ ಆಬ್ಜೆಕ್ಟ್ ಮಾಡುವುದು ಏನಿದೆ ? 

ಪ್ರ : ನನ್ನ ಮದುವೆಯಾಗಿ ಐದು ವರ್ಷಗಳಾದವು. ನನ್ನ ತಂದೆಯೇ ನೋಡಿದ ವರ ಇವರು. ಆದರೂ ನನ್ನ ಅಣ್ಣನಿಗೆ ನಮ್ಮವರು ಇಷ್ಟವಿಲ್ಲ. ನನ್ನ ಮದುವೆಯಾಗುವಾಗ ಅಣ್ಣ ವಿದೇಶದಲ್ಲಿದ್ದ. ಅಲ್ಲಿಂದ ಬಂದ ನಂತರ ನಮ್ಮವರನ್ನು ಮತ್ತು ಅವರ ಕುಟುಂಬದವರನ್ನು ನೋಡಿದ ಅಣ್ಣ ಇಂತಹ ಫ್ಯಾಮಿಲಿಗೆ ನನ್ನನ್ನು ಮದುವೆ ಮಾಡಿಕೊಟ್ಟಿದ್ದಕ್ಕೆ ಅಪ್ಪನನ್ನು ತರಾಟೆಗೆ ತೆಗೆದುಕೊಂಡಿದ್ದ. ನಮ್ಮ ತಂದೆಯ ಮನೆಯವರು ಸಂಪ್ರದಾಯಸ್ಥರು. ಕಟ್ಟಾ ಸಸ್ಯಾಹಾರಿಗಳು. ಅಣ್ಣ ವಿದೇಶದಲ್ಲಿದ್ದರೂ ಅವನೆಂದೂ ಡ್ರಿಂಕ್ಸ್ ಮುಟ್ಟಿದವನಲ್ಲ. ಆದರೆ ನನ್ನ ಗಂಡನ ಮನೆಯವರೆಲ್ಲರೂ ತುಂಬಾ ಲಿಬರಲ್. ಮನೆಯಲ್ಲಿ ಸಸ್ಯಾಹಾರ ಮಾತ್ರ ತಯಾರಿಸಿದರೂ ಹೊಟೇಲಿಗೆ ಹೋದರೆ ಅವರೆಲ್ಲ ನಾನ್-ವೆಜ್ ಸಹ ತೆಗೆದುಕೊಳ್ಳುತ್ತಾರೆ. ಆಗಾಗ ಪಾರ್ಟಿ ಏರ್ಪಡಿಸಿ ಡ್ರಿಂಕ್ಸ್, ಡ್ಯಾನ್ಸ್‍ನೊಂದಿಗೆ ಮೋಜುಮಸ್ತಿ ಮಾಡುತ್ತಾರೆ. ನನಗೆ ಮೊದಮೊದಲು ಈ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟವಾದರೂ ಈಗ ಪರವಾಗಿಲ್ಲ. ಆದರೆ ನನ್ನ ಅಣ್ಣ ಮಾತ್ರ ನನ್ನ ಕುಟುಂಬವನ್ನು ವ್ಯಂಗ್ಯ ಮಾಡುತ್ತಿರುತ್ತಾನೆ. ನಮ್ಮ ಮನೆಗೂ ಅವನು ಬರುವುದಿಲ್ಲ. ನನ್ನೆದುರು ನಮ್ಮವರ ಬಗ್ಗೆ ಲಘುವಾಗಿ ಮಾತಾಡುತ್ತಾನೆ. ನಾವೇ ಅಲ್ಲಿಗೆ ಹೋದರೂ ನನ್ನ ಗಂಡನ ಹತ್ತಿರ ಮಾತೂ ಆಡುವುದಿಲ್ಲ. ನನಗೂ ಎಲ್ಲ ಹುಡುಗಿಯರಿಗೆ ಇದ್ದ ಹಾಗೆ ನನ್ನ ಗಂಡನನ್ನು ನನ್ನ ತವರಿನವರು ಆದರಿಸಲಿ ಎನ್ನುವ ಆಸೆ. ಅಣ್ಣನ ಈ ಗುಣದಿಂದಾಗಿ ನಮ್ಮವರೂ ಅಸಮಾಧಾನಗೊಂಡಿದ್ದಾರೆ. ನಾನೀಗ ಏನು ಮಾಡಲಿ?

: ನೀವೇನೂ ನಿಮ್ಮ ತವರಿನವರ ಇಷ್ಟಕ್ಕೆ ವಿರುದ್ಧವಾಗಿ ಓಡಿಹೋಗಿ ಲವ್‍ಮ್ಯಾರೇಜ್ ಆಗಿದ್ದೂ ಅಲ್ಲ. ಹಾಗಿರುವಾಗ ನಿಮ್ಮ ಅಣ್ಣ ಈ ರೀತಿ ವರ್ತಿಸುವುದು ನಿಜಕ್ಕೂ ಸಲ್ಲ. ಅವನ ಉದ್ದೇಶವೇನು? ನೀವು ನಿಮ್ಮ ಗಂಡನನ್ನು ಬಿಟ್ಟು ತವರಿಗೆ ಬಂದು ಕೂರಲೆಂದೇ? ಅಷ್ಟೊಂದು ಕಟ್ಟಾ ಸಂಪ್ರದಾಯಸ್ಥರಾಗಿದ್ದರೆ ಮದುವೆ ಮಾಡಿಕೊಡುವಾಗಲೇ ವಿಚಾರಿಸಿಕೊಳ್ಳಬೇಕಿತ್ತು. ಈಗ ನಿಮ್ಮ ಗಂಡನನ್ನು ಅವಮಾನಿಸುವುದರಲ್ಲಿ ಅರ್ಥವಿಲ್ಲ. ಸಂಪ್ರದಾಯವೆನ್ನುವುದು ಅವರವರ ಭಾವನೆಗೆ ಬಿಟ್ಟ ವಿಚಾರ. ಆಹಾರ ಪದ್ಧತಿಯೂ ಅಷ್ಟೇ. ತಮ್ಮ ಇಷ್ಟವನ್ನು ಇನ್ನೊಬ್ಬರ ಮೇಲೆ ಹೇರುವುದು ಸರಿಯಲ್ಲ. ಒಂದು ವೇಳೆ ನಿಮಗೆ ನಾನ್-ವೆಜ್ ಇಷ್ಟವಿಲ್ಲದಿದ್ದರೂ ತಿನ್ನುವಂತೆ ನಿಮ್ಮನ್ನು ಗಂಡ ಮತ್ತು ಅವರ ಮನೆಯವರು ಪೀಡಿಸಿದರೆ ಅದು ತಪ್ಪು. ಲಿಮಿಟ್ಟಿನಲ್ಲಿ ಕುಟುಂಬದವರೆಲ್ಲರೂ ಸೇರಿಕೊಂಡು ಪಾರ್ಟಿ ಮಾಡಿ ಎಂಜಾಯ್ ಮಾಡುವುದರಲ್ಲಿ ಆಬ್ಜೆಕ್ಟ್ ಮಾಡುವುದು ಏನಿದೆ? ಬದಲಾಗಿ ಎಲ್ಲರೂ ಜೊತೆಯಲ್ಲಿ ಸಂತೋಷ ಪಡುವುದನ್ನು ಸ್ವಾಗತಿಸಬೇಕು. ನೀವು ಆ ಕುಟುಂಬದವರ ಜೊತೆಗೆ ಸಂತೋಷದಲ್ಲಿಯೇ ಇರುವಾಗ ಅಣ್ಣನಿಗ್ಯಾಕೆ ಅಸಮಾಧಾನ? ನೀವು ಅವನ ಜೊತೆ ಸ್ವಲ್ಪ ಖಡಕ್ಕಾಗಿಯೇ ಮಾತಾಡಿ. ನಿಮ್ಮ ಪತಿಗೆ ಎಲ್ಲಿ ಬೆಲೆ ಇಲ್ಲವೋ ಅಂತಹ ಕಡೆ ನೀವೂ ಬರುವುದಿಲ್ಲ ಅಂತ ನಿಮ್ಮ ಮನಸ್ಸಿಗೆ ಸ್ವಲ್ಪ ಬೇಸರವಾದರೂ ಅಲ್ಲಿಗೆ ಹೋಗುವುದನ್ನು ಸ್ವಲ್ಪ ದಿನ ಅವಾಯ್ಡ್ ಮಾಡಿ. ನಿಮ್ಮ ತಂದೆಯ ಜೊತೆಯೂ ನಿಮಗೆ ಈ  ವಿಷಯದಲ್ಲಿ ಅಣ್ಣನ ಬಗ್ಗೆ ಬೇಸರವಿದೆ ಅಂತ ನೇರವಾಗಿಯೇ ಹೇಳಿ. ಅಣ್ಣನಿಗೆ ತನ್ನ ತಪ್ಪಿನ ಅರಿವಾಗಬಹುದು.