ರಂಗನ್ ವರದಿ ಜಾರಿಗೊಳಿಸದಂತೆ ಅಂಕೋಲಾ ಪ ಪಂ ನಿರ್ಣಯ

ನಮ್ಮ ಪ್ರತಿನಿಧಿ ವರದಿ

ಅಂಕೋಲಾ : ಅಭಿವೃದ್ಧಿಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸದಂತೆ ಆಗ್ರಹಿಸಿ ತಾಲೂಕು ಪಂಚಾಯತ ಸರ್ವಾನುಮತದ ನಿರ್ಣಯ ಸ್ವೀಕರಿಸಿದೆ.

ಬುಧವಾರ ತಾ ಪಂ ಅಧ್ಯಕ್ಷೆ ಸುಜಾತಾ ಗಾಂವಕರ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯು ಈ ವರದಿಯ ವಿರುದ್ಧ ನಿರ್ಣಯ ಸ್ವೀಕಾರ ಮಾಡಿತು.

ಸಭೆ ಆರಂಭವಾಗುತ್ತಿದ್ದಂತೆಯೇ ಈ ಬಗ್ಗೆ ಸ್ವತಃ ಅಧ್ಯಕ್ಷೆ ಸುಜಾತಾ ಗಾಂವಕರ್ ವಿಷಯ ಪ್ರಸ್ತಾಪಿಸಿ ಕಸ್ತೂರಿರಂಗನ್ ವರದಿಯ ಜಾರಿಯ ಬಗ್ಗೆ ತಮ್ಮ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ಈ ವರದಿ ಜಾರಿಯಾದರೆ ಅಂಕೋಲಾ ತಾಲೂಕಿನ 43 ಹಳ್ಳಿಗಳಿಗೆ ತೀವ್ರ ತೊಂದರೆಯಾಗಲಿದೆ. ಈ ಎಲ್ಲ ಹಳ್ಳಿಗಳ ಅಭಿವೃದ್ಧಿ ಕುಂಠಿತವಾಗಲಿದೆ. ಯಾವುದೇ ಅಭಿವೃದ್ದಿ ಮಾಡಲು ಸಾಧ್ಯವಾಗದು. ಹೀಗಾಗಿ ಈ ವರದಿ ಜಾರಿಯಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ತಡವಾಗಿದೆ. ಆದರೂ ತಾ ಪಂ.ನಿಂದ ಕಸ್ತೂರಿರಂಗನ್ ವರದಿ ವಿರುದ್ಧ ನಿರ್ಣಯ ಸ್ವೀಕರಿಸಿ ಸರ್ಕಾರಕ್ಕೆ ಕಳಿಸೋಣ” ಎಂದರು. ಎಲ್ಲ ಸದಸ್ಯರು ಇದಕ್ಕೆ ಒಪ್ಪಿಗೆ ಸೂಚಿಸಿದರು.

ತಾ ಪಂ ಕಾರ್ಯನಿರ್ವಹಣಾಧಿಕಾರಿ ಎಂ ವಿ ಮಹಾಲೆ ಮಾತನಾಡಿ, “ಈ ವರದಿ ಅಡಿಯಲ್ಲಿ ಬರುವ ಹಳ್ಳಿಗಳನ್ನು ಪ್ರತಿನಿಧಿಸುವ ಎಲ್ಲ ಗ್ರಾ ಪಂ.ಗಳಿಗೂ ಕಸ್ತೂರಿರಂಗನ್ ವರದಿ ವಿರುದ್ಧ ನಿರ್ಣಯ ಸ್ವೀಕರಿಸುವಂತೆ ಪತ್ರ ಬರೆಯಲಾಗಿದೆ. ಸರ್ಕಾರ ಈ ವರದಿ ಜಾರಿಯಾಗದಂತೆ ನೋಡಿಕೊಳ್ಳಬೇಕು. ನಮ್ಮ ಎಲ್ಲ ಹಂತದ ಜನಪ್ರತಿನಿಧಿಗಳು ಈ ಬಗ್ಗೆ ಒಮ್ಮತದ ಪ್ರಯತ್ನ ಮಾಡಬೇಕು” ಎಂದು ಒತ್ತಾಯಿಸಿದರು.