ತಾಲೂಕು ಮಟ್ಟದ ಅಂಬೇಡ್ಕರ್ ಭವನ ಮೊತ್ತ ರೂ ಎರಡೂವರೆ ಕೋಟಿಗೇರಿಸಿದ ಆಂಜನೇಯ

ಕಾರ್ಯಕ್ರಮದಲ್ಲಿ ಸಚಿವ ಆಂಜನೇಯ ಮಾತಾಡಿದರು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಪರಿಶಿಷ್ಟ ಜಾತಿ-ಪಂಗಡಕ್ಕೆ ಕೇಂದ್ರದ ನರೇಂದ್ರ ಮೋದಿ ಸರಕಾರ ಎಲ್ಲ ರಾಜ್ಯಗಳಿಗೆ ಸೇರಿ 34 ಸಾವಿರ ಕೋಟಿ ರೂಪಾಯಿ ಹಣ ಮೀಸಲಾಗಿಸಿದ್ದರೆ, ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೇವಲ ಈ ರಾಜ್ಯದ ಪರಿಶಿಷ್ಟ ವರ್ಗದ ಜನರ ಅಭಿವೃದ್ದಿಗಾಗಿ ಬರೋಬ್ಬರಿ 20 ಸಾವಿರ ಕೋಟಿ ರೂಪಾಯಿ ಹಣಕಾಸು ಮೀಸಲಿಟ್ಟಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಇಲಾಖಾ ಸಚಿವ ಎಚ್ ಆಂಜನೇಯ ಹೇಳಿದರು.

ರಾಜ್ಯ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಬಂಟ್ವಾಳ ತಾಲೂಕು ಕೇಂದ್ರದಲ್ಲಿ ನಿರ್ಮಾಣಗೊಳ್ಳುವ ಅಂಬೇಡ್ಕರ್ ಭವನಕ್ಕೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ರಾಜ್ಯ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಸ್ವತಃ ಕೇಂದ್ರ ಸರಕಾರವೇ ರಾಜ್ಯಕ್ಕೆ ಶಹಭಾಷಗಿರಿ ನೀಡಿದೆ ಎಂದರು.

ಹಲವು ವಿರೋಧಗಳ ನಡುವೆಯೂ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಮಹತ್ತರ ಉದ್ದೇಶದಿಂದ ರಾಜ್ಯ ಸರಕಾರ ಕೈಗೊಂಡ ಜಾತಿ ಸಮೀಕ್ಷೆಯ ವರದಿಯನ್ನು ಸರಕಾರ ಮುಂದಿನ ಬಜೆಟ್‍ನಲ್ಲಿ ಅನುಷ್ಠಾನಗೊಳಿಸಿಕೊಳ್ಳಲಿಕ್ಕಿದೆ ಎಂದ ಸಚಿವ ಆಂಜನೇಯ, ಅಂಬೇಡ್ಕರ್ ಭವನಗಳು ಅತ್ಯಂತ ಕಡಿಮೆ ವೆಚ್ಚದಲ್ಲಿ ಸಮಾಜದ ಎಲ್ಲ ಬಡ ಹಾಗೂ ಮಧ್ಯಮ ವರ್ಗದ ಜನರ ಸದುಯೋಗಕ್ಕಾಗಿ ದೊರೆಯುವಂತಾಗಬೇಕು. ನಿತ್ಯ ನಿರಂತರವಾಗಿ ಅಂಬೇಡ್ಕರ್ ಭವನಗಳು ಕಾರ್ಯ ಚಟುವಟಿಕೆಯಿಂದ ಕೂಡಿರಬೇಕು. ಆಗ ಮಾತ್ರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಆಸೆ ಈಡೇರಿದಂತಾಗುತ್ತದೆ ಎಂದರು. ತಾಲೂಕು ಮಟ್ಟದ ಅಂಬೇಡ್ಕರ್ ಭವನಕ್ಕೆ ಈಗಾಗಲೇ ಸರಕಾರ ಒಂದೂವರೆ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಇದನ್ನು ಇನ್ನಷ್ಟು ಹೆಚ್ಚಿಸಬೇಕೆಂಬ ಜಿಲ್ಲಾ ಉಸ್ತುವಾರಿ ಸಚಿವರ ಮನವಿ ಮೇರೆಗೆ ಸ್ಥಳದಲ್ಲಿಯೇ ಸಚಿವರು ಈ ಮೊತ್ತವನ್ನು ಎರಡೂವರೆ ಕೋಟಿಗೇರಿಸಿ ಘೋಷಣೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಮಾತನಾಡಿ ಅಹಿಂದ ಚಳುವಳಿ ಮೂಲಕ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ವರ್ಗಗಳ ಅಭಿವೃದ್ದಿಗೆ ಮಹತ್ತರ ಕೊಡುಗೆಗಳನ್ನು ನೀಡುತ್ತಾ ಅಭಿವೃದ್ಧಿಯ ಹರಿಕಾರರಾಗಿ ಹೆಜ್ಜೆ ಹಾಕುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಹಾರ ಸಚಿವ ಯು ಟಿ ಖಾದರ್ ಮಾತನಾಡಿ, “ರಾಜ್ಯದಲ್ಲಿ ಮತ್ತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೇರುವುದು ಗ್ಯಾರಂಟಿ. ಕೆಲಸ ಮಾಡಿದವರನ್ನು ಈ ರಾಜ್ಯದ ಜನ ಎಂದೂ ಕೈಬಿಟ್ಟಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.