ಅಭಿನವ್ ಬಿಂದ್ರಾ ಚಿತ್ರದಲ್ಲಿ ಪುತ್ರ ಹರ್ಷವರ್ಧನ್ ಜೊತೆ ಅನಿಲ್

ಈ ನಡುವೆ ಬಯೋಪಿಕ್ ಚಿತ್ರಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ವೃತ್ತಿಪರ ಶೂಟರ್ ಹಾಗೂ ಒಲಂಪಿಕ್ ಪದಕ ವಿಜೇತ ಅಭಿನವ್ ಬಿಂದ್ರಾ ಜೀವನಾಧರಿತ ಸಿನಿಮಾ ಶೀಘ್ರ ಸೆಟ್ಟೇರುವ ತಯಾರಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ಅನಿಲ್ ಕಪೂರ್ ಪುತ್ರ ಹರ್ಷವರ್ಧನ್ ಅಭಿನವ್ ಬಿಂದ್ರಾ ಆಗಿ ನಟಿಸುವುದು ಹೆಚ್ಚೂ ಕಡಿಮೆ ಪಕ್ಕಾ ಆಗಿದೆ. ವಿಶೇಷವೆಂದರೆ ಅನಿಲ್ ಕಪೂರ್ ಕೂಡಾ ಈ ಸಿನಿಮಾದಲ್ಲಿ ಮಗನ ಜೊತೆ ನಟಿಸಲಿದ್ದಾರೆ.

ಈ ಹೊಸ ಚಿತ್ರದ ಬಗ್ಗೆ ಮಾಧ್ಯಮದವರು ಅನಿಲ್ ಕಪೂರ್ ಕೇಳಿದಾಗ ಅವರು ಈ ವಿಷಯವನ್ನು ಅಲ್ಲಗಳೆದಿಲ್ಲ ಬದಲಾಗಿ “ಈ ಸಿನಿಮಾ ಬಗ್ಗೆ ಮಾತನಾಡಲು ಕಾಲ ಪಕ್ವವಾಗಿಲ್ಲ. ಎಲ್ಲವೂ ಅಂತಿಮಗೊಂಡ ನಂತರ ತಿಳಿಸುತ್ತೇನೆ” ಎಂದಿದ್ದಾರೆ. ಅದಲ್ಲದೇ “ದೇವರು ಬಯಸಿದರೆ ನಾವಿಬ್ಬರು ಒಟ್ಟಿಗೆ ನಟಿಸುತ್ತೇವೆ. ಮಗನೊಂದಿಗೆ ಕೆಲಸ ಮಾಡಲು ನಾನು ಎಕ್ಸೈಟಿನಿಂದ ಕಾಯುತ್ತಿದ್ದೇನೆ” ಎನ್ನುತ್ತಾರೆ ಸೀನಿಯರ್ ಕಪೂರ್. ಅಭಿನವ್ ಬಿಂದ್ರಾರ ಸಾಧನೆಯೊಂದಿಗೆ ಈ ಸಿನಿಮಾದಲ್ಲಿ ತಂದೆ-ಮಗನ  ನವಿರಾದ ಸಂಬಂಧವೂ ಹೈಲೈಟಾಗಲಿದೆಯಂತೆ.

ಹರ್ಷವರ್ಧನ್ ಅಭಿನಯದ ಮೊದಲ ಚಿತ್ರ `ಮಿರ್ಜಿಯಾ’ ಜನಮನ ಗೆಲ್ಲುವಲ್ಲಿ ವಿಫಲವಾಗಿತ್ತು. ಹಾಗಾಗಿ ಬಿಂದ್ರಾ ಬಯೋಪಿಕ್ ಮೇಲೆ ಆತನ ಸಿನಿಜರ್ನಿ ಗಟ್ಟಿಗೊಳ್ಳಬೇಕಾಗಿದೆ.