ಬ್ರಾಹ್ಮಣರ ಅವಮಾನಿಸಿದ ಝೀ ಟೀವಿ ವಿರುದ್ಧ ಆಕ್ರೋಶ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಡ್ರಾಮಾ ಜೂನಿಯರ್-2′ ಕಾರ್ಯಕ್ರಮದಲ್ಲಿ ಇಡೀ ಬ್ರಾಹ್ಮಣ ಸಮುದಾಯವನ್ನೇ ಅವಹೇಳನ ಮಾಡಲಾಗಿದೆ. ಪುರೋಹಿತರು ಮತ್ತು ಬ್ರಾಹ್ಮಣರಿಗೆ ಅವಹೇಳನ ಮಾಡಿರುವುದನ್ನು ಬ್ರಾಹ್ಮಣರ ಸಂಘ ಖಂಡಿಸಿದೆ.

ಮಾಧ್ಯಮದೊಂದಿಗೆ ಈ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಕಾಟಿಪಳ್ಳ ಕೃಷ್ಣಾಪುರ ಬ್ರಾಹ್ಮಣರ ಸಂಘ ಮತ್ತು ಬ್ರಾಹ್ಮಣ ಸಂಘ ಬಾಳ ಕಳವಾರು ಪದಾಧಿಕಾರಿಗಳು, ಬ್ರಾಹ್ಮಣರನ್ನು ಅವಹೇಳನಕಾರಿಯಾಗಿ ಬಿಂಬಿಸಿದ ಝೀ ವಾಹಿನಿ ಮುಂದಿನ ಸಂಚಿಕೆಯಲ್ಲಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

“ಝೀ ವಾಹಿನಿಯಲ್ಲಿ ಪ್ರಸಾರವಾದ ಸಂಚಿಕೆಯಲ್ಲಿ ಬ್ರಾಹ್ಮಣರಿಗೆ ಮಾನಹಾನಿಕಾರವಾದ ರೀತಿಯಲ್ಲಿ, ಸಮಾಜದಲ್ಲಿ ಸಾರ್ವಜನಿಕರಿಗೆ ಬ್ರಾಹ್ಮಣರ ಬಗ್ಗೆ ಕೀಳರಿಮೆ ಮೂಡುವ ರೀತಿಯಲ್ಲಿ ಮತ್ತು ಕೀಳು ಭಾವನೆಯಿಂದ ನೋಡುವಂತಾಗಲಿ ಎಂಬ ದುರುದ್ದೇಶದಿಂದ ಒಳಸಂಚಿನಿಂದ ಪ್ರಸಾರ ಮಾಡಲಾಗಿದೆ. ಇದು ಸಂವಿಧಾನ ಬಾಹಿರ. ಇಲ್ಲಿ ಮಾಧ್ಯಮ ಮೌಲ್ಯಕ್ಕೆ ವಿರುದ್ಧವಾಗಿ ವರ್ತಿಸಿದೆ. ಮುಗ್ಧ ಮಕ್ಕಳನ್ನು ಬಳಸಿಕೊಂಡು ಬ್ರಾಹ್ಮಣರ ತೇಜೋವಧೆ ಮಾಡಿರುವುದು ಖಂಡನೀಯ” ಎಂದು ಬಾಳ ಕಳವಾರು ಬ್ರಾಹ್ಮಣ ಸಂಘ ಗೌರವಾಧ್ಯಕ್ಷ ಬಿ ಉದಯಶಂಕರ ಅಸಮಾಧಾನ ವ್ಯಕ್ತಪಡಿಸಿದರು.

“ಚಾಣಕ್ಯನಿಂದ ವಿದ್ಯಾರಣ್ಯರವರೆಗೆ ಗುರುಸ್ಥಾನದಲ್ಲಿ ನಿಂತು ಹಿಂದೂ ಧರ್ಮ ಸಾಮ್ರಾಜ್ಯ ಸ್ಥಾಪನೆಗೆ ಸಹಕರಿಸಿದ ಸಮಾಜ ನಮ್ಮದು. ಸನಾತನ ಧರ್ಮ, ಭಾಷೆ, ಸಂಸ್ಕೃತಿ ಉಳಿಯುವಲ್ಲಿ ಬ್ರಾಹ್ಮಣರ ಕೊಡುಗೆ ಅಪಾರ. ಮುಂದಿನ ಸಂಚಿಕೆಯಲ್ಲಿ ಝೀ ವಾಹಿನಿ ಬೇಷರತ್ ಕ್ಷಮೆ ಯಾಚಿಸದೇ ಇದ್ದಲ್ಲಿ ವಾಹಿನಿ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದರು.