ಬಂಟ್ವಾಳ ಪುರಸಭಾ ತ್ಯಾಜ್ಯ ಗುತ್ತಿಗೆದಾರ ವಿರುದ್ಧ ಆಕ್ರೋಶ

ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಇಲ್ಲಿನ ಪುರಸಭಾ ನಿರ್ಣಯವನ್ನು ಮೀರಿ ತ್ಯಾಜ್ಯ ಸಂಗ್ರಹ ಗುತ್ತಿಗೆದಾರರು ಅಧಿಕ ಸುಂಕ ವಸೂಲಿ ಮಾಡುತ್ತಿದ್ದು, ಪುರಸಭೆಯ ನಿಯಂತ್ರಣಕ್ಕೆ ಬಾರದ ಗುತ್ತಿಗೆದಾರರ ವಿರುದ್ಧ ಕೇಸು ದಾಖಲಿಸಿ ಎಂದು ಬಂಟ್ವಾಳ ಪುರಸಭಾ ವಿಪಕ್ಷ ಸದಸ್ಯ ಬಿ ದೇವದಾಸ ಶೆಟ್ಟಿ ಆಗ್ರಹಿಸಿದರು.

ಮಂಗಳವಾರ ಪುರಸಭಾಧ್ಯಕ್ಷ ಪಿ ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ಪುರಸಭಾ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ದೇವದಾಸ ಶೆಟ್ಟಿ, “ಮನೆ ಮನೆ ಕಸ ಸಂಗ್ರಹಕ್ಕೆ ಪುರಸಭೆ 30 ರೂಪಾಯಿ ದರ ನಿಗದಿಪಡಿಸಿ ನಿರ್ಣಯ ಕೈಗೊಂಡಿದ್ದರೂ ತ್ಯಾಜ್ಯ ಸಂಗ್ರಹ ಗುತ್ತಿಗೆದಾರ ಮಂಗಳೂರಿನ ಅಬ್ದುಲ್ ಸಲಾಂ ಎಂಬಾತ ಪುರಸಭೆ ಹೆಸರಿನಲ್ಲಿ ರಶೀದಿ ಮುದ್ರಿಸಿ ಪ್ರತೀ ಮನೆಯಿಂದ 50 ರೂಪಾಯಿ ಹೆಚ್ಚುವರಿ ಸುಂಕ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ” ಎಂದು ಸಭೆಯಲ್ಲಿ ರಶೀದಿ ಹಾಜರುಪಡಿಸಿದರು.

ಈ ಸಂದರ್ಭ ಉತ್ತರಿಸಿದ ಮುಖ್ಯಾಧಿಕಾರಿ ರೇಖಾ ಜೆ ಶೆಟ್ಟಿ, ಎಮ್ಮೆಕೆರೆ ಸಲಾಂ ಅವರು ಪುರಸಭಾ ಟೆಂಡರುದಾರರಾಗಿದ್ದು, ಅವರು ರಶೀದಿ ಮುದ್ರಿಸಿ ಹಂಚಿದ್ದರಲ್ಲಿ ತಪ್ಪೇನೂ ಇಲ್ಲ ಎಂದು ಗುತ್ತಿಗೆದಾರರನ್ನು ಸಮರ್ಥಿಸಿಕೊಂಡರಲ್ಲದೆ ಹೆಚ್ಚುವರಿ ಶುಲ್ಕ ವಸೂಲಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇದು ವಿಪಕ್ಷ ಸದಸ್ಯರನ್ನು ಮತ್ತಷ್ಟು ಕೆರಳಿಸಿತು. ಸಂದರ್ಭ ಆಡಳಿತ ಪಕ್ಷ-ವಿಪಕ್ಷ ಸದಸ್ಯರ ಮಧ್ಯೆ ಕೆಲ ಕಾಲ ವಾಕ್ಸಮರ ನಡೆಯಿತು.

ಕಳೆದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪುರಸಭಾ ವ್ಯಾಪ್ತಿಯ ಎಷ್ಟು ಅನಧಿಕೃತ ಹಾಗೂ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ವಿಪಕ್ಷ ಸದಸ್ಯ ದೇವದಾಸ ಶೆಟ್ಟಿ ಪ್ರಶ್ನಿಸಿದಾಗ ಕಕ್ಕಾಬಿಕ್ಕಿಯಾದ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಪುರಸಭಾ ವ್ಯಾಪ್ತಿಯಲ್ಲಿ ನೂರಾರು ಸಂಖ್ಯೆಯಲ್ಲಿ ಅನಧಿಕೃತ ಹಾಗೂ ಅಕ್ರಮ ಕಟ್ಟಡಗಳಿದ್ದು, ಅವುಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಕನಿಷ್ಠ 3-4 ತಿಂಗಳಾದರೂ ಬೇಕಾಗಬಹುದು ಎಂದು ಸಮಜಾಯಿಸಿ ನೀಡಿ ಕೈ ತೊಳೆದುಕೊಂಡರು. ಈ ವೇಳೆ ಮಾತು ಮುಂದುವರಿಸಿದ ದೇವದಾಸ ಶೆಟ್ಟಿ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ನಿರ್ಣಯದ ಹೊರತಾಗಿಯೂ ಮತ್ತೆ ರೇಖಾ ಶೆಟ್ಟಿ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಏಳೇ ದಿನದಲ್ಲಿ ಮತ್ತೆ ಅಕ್ರಮ ಕದ ನಂಬ್ರ ನೀಡಿದ ಬಗ್ಗೆ ಪ್ರಶ್ನಿಸಿದರು. ಇದು ಪುರಸಭಾಡಳಿತದ ಅಣತಿ ಮೇರೆಗೆ ನೀಡಲಾಗಿದೆ ಎಂದು ಮುಖ್ಯಾಧಿಕಾರಿ ಮತ್ತೆ ಹಾರಿಕೆಯ ಉತ್ತರ ನೀಡಿದರು.

 ಸಭೆಗೆ ನುಗ್ಗಿದ

ಅನ್ಯ ವ್ಯಕ್ತಿ : ಗೊಂದಲ

ಪುರಸಭಾ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ ಏಕಾಏಕಿ ಸಭಾಂಗಣದೊಳಗೆ ನುಗ್ಗಿ ಬಂದ ಮೆಸ್ಕಾಂ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯ ವಿಚಾರ ನನಗ್ಯಾಕೆ ತಿಳಿಸಿಲ್ಲ ಎಂದು ಪುರಸಭಾ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ವಿಲಕ್ಷಣ ಘಟನೆಗೂ ಸಭೆ ಸಾಕ್ಷಿಯಾಯಿತು. ಈ ವೇಳೆ ಸಭಾ ಸಮಯ ಸಭಾಂಗಣದೊಳಕ್ಕೆ ಬರುವಂತಿಲ್ಲ ಹೊರ ಹೋಗಿ ಎಂದು ಸದಸ್ಯ ಪ್ರವೀಣ್ ಬಿ ಅವರು ವೆಂಕಪ್ಪ ಪೂಜಾರಿ ಅವರಿಗೆ ಸಲಹೆ ನೀಡಿದರು. ತ್ಯಾಜ್ಯ ಹಾಗೂ ಅಕ್ರಮ ಕಟ್ಟಡಗಳ ಬಗ್ಗೆ ಗಂಭೀರ ಚರ್ಚೆಗೆ ಒಗ್ಗಿಕೊಂಡಿದ್ದ ಸಭೆಯಲ್ಲಿ ಈ ಘಟನೆ ಒಂದು ಬ್ರೇಕ್ ತ್ರೂ ನೀಡಿದ್ದು, ಸಭೆಯ ಬಿಸಿಯನ್ನು ತಗ್ಗಿಸಿತು.