ಒಳಚರಂಡಿ ಅವ್ಯವಸ್ಥೆ : ಗ್ರಾ ಪಂ ವಿರುದ್ಧ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿಗೆ ಸಮೀಪದ ಪಡುಪಣಂಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಡುತೋಟ ಎಂಬಲ್ಲಿ ಒಳಚರಂಡಿ ವ್ಯವಸ್ಥೆ ಅವ್ಯವಸ್ಥೆಗಳ ಆಗರವಾಗಿದ್ದು, ರಸ್ತೆಯಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಡುಪಣಂಬೂರು ವ್ಯಾಪ್ತಿಯ ಅರಮನೆಯಿಂದ ಚಿತ್ರಾಪಿಗೆ ಸಂಪರ್ಕ ಕಲ್ಪಿಸುವ ಪಡುತೋಟ ರಸ್ತೆ ಒಳಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ನಿಲ್ಲುತ್ತಿದೆ. ರಸ್ತೆ ಬದಿಯಲ್ಲಿರುವ ಕೆಲ ಮನೆಗಳ ಮಾಲಿಕರು ಚರಂಡಿಯನ್ನು ಮುಚ್ಚಿದ್ದು, ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಪಾದಚಾರಿಗಳಿಗೆ ಸಂಚರಿಸಲು ಅನಾನುಕೂಲವಾಗಿದೆ.

ಪಂಚಾಯತಿ ವ್ಯಾಪ್ತಿಯ ಗೌರಿಶಂಕರ ದೇವಸ್ಥಾನದ ಹಿಂದಿನ ರಸ್ತೆಯು ಅರ್ಧಂಬರ್ದ ಕಾಂಕ್ರೀಟೀಕರಣ ನಡೆಸಿದ್ದು, ವಾಹನಗಳು ಹೋಗಲಾರದ ಮಟ್ಟಕ್ಕೆ ಇಳಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೂಡಲೇ ಪಂಚಾಯತಿ ಅಧ್ಯಕ್ಷರು ಪಂಚಾಯತಿ ವ್ಯಾಪ್ತಿಯ ಒಳಚರಂಡಿಯನ್ನು ದುರಸ್ತಿಪಡಿಸುವುದಲ್ಲದೆ ಮೂಲ ಭೂತ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.