ಬೆಂಗಳೂರು ಮಲ್ಟಿಪ್ಲೆಕ್ಸಿನಲ್ಲಿ ಕನ್ನಡ ಚಿತ್ರ ಪ್ರದರ್ಶನ ವೇಳೆ ಎಸಿ ಬಂದ್

ಪ್ರೇಕ್ಷಕರ ಆಕ್ರೋಶ

ಬೆಂಗಳೂರು : ನಗರದ ಎಲಿಮೆಂಟ್ಸ್ ಮಾಲನಲ್ಲಿರುವ ರಿಗಾಲಿಯ ಪಿವಿಆರ್ ಮಲ್ಟಿಪ್ಲೆಕ್ಸಿನಲ್ಲಿ ಕಳೆದ ಶುಕ್ರವಾರ ರಾತ್ರಿ ಪುನೀತ್ ರಾಜಕುಮಾರ್ ಅಭಿನಯದ `ರಾಜಕುಮಾರ’ ಚಿತ್ರದ ಪ್ರದರ್ಶನ ನಡೆಯುತ್ತಿದ್ದ ವೇಳೆ  ಹವಾನಿಯಂತ್ರಣ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ  ಚಾಲೂ ಮಾಡಿರಲಿಲ್ಲವೆಂಬ ಆರೋಪ ಕೇಳಿಬಂದಿದೆ.  ಚಿತ್ರ ಪ್ರದರ್ಶನ ಆರಂಭಗೊಂಡು ಸುಮಾರು ಅರ್ಧ

ಗಂಟೆಯಾದರೂ ಹವಾನಿಯಂತ್ರಣ ವ್ಯವಸ್ಥೆ ಕಾರ್ಯಾಚರಿಸುತ್ತಿಲ್ಲವೆಂದು ತಿಳಿದ ವೀಕ್ಷಕರು ಪ್ರತಿಭಟಿಸಿದ್ದು ಆಗ ಅಲ್ಲಿನ ಸಿಬ್ಬಂದಿ ತಾವು ಕನ್ನಡ ಚಿತ್ರ ಪ್ರದರ್ಶನದ ವೇಳೆ ಸಾಮಾನ್ಯವಾಗಿ ಎಸಿ ಸ್ವಿಚ್-ಆನ್ ಮಾಡುವುದಿಲ್ಲವೆಂದು ಹೇಳಿದ್ದರೆನ್ನಲಾಗಿದೆ.

ಈ ವಿಚಾರ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಪಿವಿಆರ್ ಸಿನೆಮಾಸ್ ಕನ್ನಡ ಚಿತ್ರಗಳ ಬದಲು ಇತರ ಭಾಷೆಗಳ ಚಿತ್ರಗಳಿಗೆ ಆದ್ಯತೆ ನೀಡುತ್ತಿದೆಯೆಂಬ ಆರೋಪ ಈ ಹಿಂದಿನಿಂದಲೂ ಇದೆ.

ಸಾ ರಾ ಗೋವಿಂದು ಅಧ್ಯಕ್ಷತೆಯ ಕನ್ನಡ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪಿವಿಆರ್ ಸಿನೆಮಾಸ್ ಬಳಿ ಸ್ಪಷ್ಟೀಕರಣ ಕೇಳಿದ್ದು ಎಸಿಯನ್ನು ಉದ್ದೇಶಪೂರ್ವಕವಾಗಿ ಆಫ್ ಮಾಡಲಾಗಿರಲಿಲ್ಲ, ಬದಲಾಗಿ ತಾಂತ್ರಿಕ ಸಮಸ್ಯೆಯಿಂದ ಹೀಗಾಗಿತ್ತು ಎಂದು ಪಿವಿಆರ್ ಸಿನೆಮಾಸ್ ಸಬೂಬು ನೀಡಿದೆಯೆನ್ನಲಾಗಿದೆ.