ಇನ್ನೊಂದು ಹುಡುಗಿ ಜೊತೆ ಹೃತಿಕ್ ಲಿಂಕಪ್ !

ಅದ್ಯಾಕೋ ಹೃತಿಕ್ ರೋಷನ್ ಈಗ ವೃತ್ತಿ ಜೀವನಕ್ಕಿಂತ ಬೇರೆ ವಿಷಯಗಳಿಗೇ ಹೆಚ್ಚು ಸುದ್ದಿಯಾಗುತ್ತಿದ್ದಾನೆ. ಕಂಗನಾ ರಣಾವತ್ ಕೆಲವು ಸಮಯದ ಹಿಂದೆ ತನಗೂ ಹಾಗೂ ಹೃತಿಕ್ ನಡುವೆ ಸಂಬಂಧ ಇತ್ತು ಎಂದು ಹೇಳಿ ವಿವಾದವೆಬ್ಬಿಸಿದ್ದಳು. ನಂತರ ಅವರಿಬ್ಬರ ನಡುವೆ ಭಾರೀ ಕೆಸರೆರೆಚಾಟವಾಗಿ ನಂತರ ಪರಸ್ಪರ ದೂರು ಕೊಡುವವರೆಗೆ ಅದು ಮುಂದುವರಿದಿತ್ತು. ಅದು ಇನ್ನೇನು ತಣ್ಣಗಾಗುತ್ತದೆ ಎನ್ನುವಾಗಲೇ ಇನ್ನೊಬ್ಬಳು ಬೆಡಗಿ ಜೊತೆ ಹೃತಿಕ್ ಆಪ್ತವಾಗಿದ್ದ ಎನ್ನುವ ಸುದ್ದಿ ಈಗ ವೈರಲ್ ಆಗಿದೆ. ಕಳೆದ ವಾರವಷ್ಟೇ ಬಿಡುಗಡೆಯಾದ ಕನ್ನಡ ಚಿತ್ರ `ರೋಗ್’ ನಾಯಕಿ ಆಂಜೆಲಾ ಕ್ರಿಸ್ಲಿಂಕಿಯೇ ಆ ಹುಡುಗಿ.

ಆಂಜೆಲಾ ಕ್ರಿಸ್ಲಿಂಕಿ ಈ ಹಿಂದೆ ಹೃತಿಕ್ ಜೊತೆ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ದಳು. ಇತ್ತೀಚೆಗೆ ಪತ್ರಿಕೆಯೊಂದರ ಸಂದರ್ಶನದಲ್ಲಿ ಆಂಜೆಲಾ, ಹೃತಿಕ್ ಜೊತೆಗಿನ ಬಾಂಧವ್ಯದ ಬಗ್ಗೆ ಹೇಳಿಕೊಂಡಿದ್ದಳು. “ಹೃತಿಕ್ ರೋಷನ್ ಜೊತೆ ಮೊದಲ ಬಾರಿಗೆ ಜಾಹಿರಾತೊಂದಕ್ಕಾಗಿ ಕೆಲಸ ಮಾಡುವಾಗ ನನಗೆ ಅವರ ಮೇಲೆ ಕ್ರಶ್ ಆಗಿತ್ತು. ಅವರು ಕೆಲಸದಲ್ಲಿ ನನಗೆ ತುಂಬಾ ಪೆÇ್ರೀತ್ಸಾಹ ನೀಡುತ್ತಿದ್ದರು. ನನಗೆ ನಟನೆಯ ಬಗ್ಗೆ ಟಿಪ್ಸ್ ನೀಡುತ್ತಿದ್ದರು. ನಾನು ಹೃತಿಕ್ ಅವರಲ್ಲಿ ಒಬ್ಬ ಗುರು ಹಾಗೂ ಗೆಳೆಯನನ್ನು ಕಂಡುಕೊಂಡಿದ್ದೇನೆ” ಅಂತ ಹೇಳಿದ್ದಾಳೆ. ಮತ್ತೂ ಮುಂದುವರಿದು “ಅವರು ನನ್ನನ್ನು ಮರೆತುಬಿಟ್ಟಿರ್ತಾರೆ ಅಂತ ಅಂದುಕೊಂಡಿದ್ದೆ. ಅವರೊಬ್ಬ ಸ್ಟಾರ್, ಸಾಕಷ್ಟು ಮಾಡೆಲ್‍ಗಳ ಜೊತೆ ಜಾಹಿರಾತು ಚಿತ್ರೀಕರಣ ಮಾಡಿರ್ತಾರೆ. ಆದ್ರೆ ಅವರು ನನಗೆ ಕರೆ ಮಾಡಿ ನಮ್ಮ ಎಲ್ಲಾ ಸಂಭಾಷಣೆಯನ್ನೂ ನೆನಪಿಸಿಕೊಂಡರು. ಅಲ್ಲದೆ ನನ್ನ ಕಣ್ಣಿನ ಬಣ್ಣ ಒರಿಜಿನಲ್ಲಾ? ಅಂತ ತಮಾಷೆ ಮಾಡಿದ್ರು. ನಾನು ದಕ್ಷಿಣದಲ್ಲಿ ಚಿತ್ರವೊಂದನ್ನು ಒಪ್ಪಿಕೊಂಡಾಗ ಅದರ ನಿರ್ದೇಶಕರ ಬಗ್ಗೆ ವಿಚಾರಿಸಿ ನಾನು ಈ ಸಿನಿಮಾದಿಂದ ದೊಡ್ಡ ಮಟ್ಟಕ್ಕೆ ಹೋಗ್ತೀನಿ ಎಂದಿದ್ದರು. ನಾನು ಅವರನ್ನು ಗುರುವಿನಂತೆ ನೋಡ್ತೀನಿ. ನನ್ನ `ರೋಗ್’ ಸಿನಿಮಾದ ಟ್ರೇಲರ್ ಮತ್ತು ಫಸ್ಟ್ ಲುಕ್ ಅವರಿಗೆ ತೋರಿಸಿದ್ದೆ. ಅವರು ಅದನ್ನು ತುಂಬಾ ಇಷ್ಟಪಟ್ಟಿದ್ದರು” ಎಂದೆಲ್ಲಾ ಆಂಜೆಲಾ ಸಂದರ್ಶನದಲ್ಲಿ ಹೇಳಿದ್ದಾಳೆ.

ಆಂಜೆಲಾ ಹೇಳಿದ ಮಾತುಗಳನ್ನ ಕೇಳಿದರೆ ಆಕೆ ಹಾಗೂ ಹೃತಿಕ್ ನಡುವೆ ವಿಶೇಷ ಬಾಂಧವ್ಯವಿದೆ ಎಂಬಂತಿದ್ದು, ಆಕೆಯನ್ನು `ಕೈಟ್ಸ್’ ಚಿತ್ರದ ನಾಯಕಿ ಬಾರ್ಬಾರಾ ಮೋರಿಯೊಂದಿಗೆ ಹೋಲಿಸಿ ಲೇಖನ ಪ್ರಕಟವಾಗಿತ್ತು. ಈ ಹಿಂದೆ ಬಾರ್ಬಾರಾ ಹಾಗೂ ಹೃತಿಕ್ ಮಧ್ಯೆ ಸಂಬಂಧ ಇತ್ತು ಎಂಬ ವಂದಂತಿಗಳು ಹರಿದಾಡಿತ್ತು.

ಪತ್ರಿಕೆ ಓದಿದ ಹೃತಿಕ್, ಅದರ ಸ್ಕ್ರೀನ್‍ಶಾಟ್ ತೆಗೆದು “ಮೈ ಡಿಯರ್ ಲೇಡಿ, ಯಾರಮ್ಮಾ ನೀನು? ಯಾಕೆ ಸುಳ್ಳು ಹೇಳ್ತಿದ್ಯಾ” ಅಂತ ಟ್ವೀಟ್ ಮಾಡಿದ್ದಾನೆ.

ಅದಕ್ಕೆ ಪ್ರತಿಕ್ರಿಯಿಸಿದ ಆಂಜೆಲಾ “ನನಗೆ ನಿಮ್ಮ ಬಗ್ಗೆ ತುಂಬಾ ಗೌರವವಿದೆ. ನಿಮ್ಮ ಜೊತೆ ಎರಡು ಜಾಹೀರಾತುಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ನಾನು ಅದೃಷ್ಟವಂತೆ. ನೀವು ನನಗೆ ಸ್ಪೂರ್ತಿ ಎಂದು ಮಾತ್ರ ಹೇಳಿದ್ದೆ. ಅದನ್ನೇ ಅವರು ಅಪಾರ್ಥ ಬರುವ ರೀತಿಯಲ್ಲಿ ಹೆಡ್ಡಿಂಗ್ ಬರೆದಿದ್ದಾರೆ” ಎಂದು ಇಷ್ಟೆಲ್ಲಾ ರಾದ್ಧಾಂತವಾಗಿದ್ದಕ್ಕೆ `ಸಾರಿ’ ಕೇಳಿದ್ದಾಳೆ. ಇದರಿಂದ ಸಮಾಧಾನಗೊಂಡ ಹೃತಿಕ್ `ಯೆಸ್, ಮಿಸ್ಲೀಡಿಂಗ್ ಹೆಡ್ಲೈನ್. ವಿವರಣೆ ನೀಡಿದ್ದು ಒಳ್ಳೆಯದಾಯ್ತು. ನಿನ್ನ ವೃತ್ತಿ ಜೀವನಕ್ಕೆ ಆಲ್ ದಿ ಬೆಸ್ಟ್’ ಎಂದು ಹೇಳಿ ಆ ವಿವಾದಕ್ಕೆ ತೆರೆ ಎಳೆದಿದ್ದಾನೆ.

ಮಾಜೀ ಪತ್ನಿ ಸುಸೇನ್ ಜೊತೆ ಸಂಬಂಧ ಪುನಃ ಕುದುರುತ್ತಿರುವ ಈ ಸಂದರ್ಭದಲ್ಲಿ ಹೃತಿಕ್ ಎಲ್ಲಾ ರೂಮರುಗಳನ್ನೂ ಅಲ್ಲಿಯೇ ತಣ್ಣಗಾಗಿಸಲು ಬಯಸಿದ್ದಾನೆ ಎನ್ನುತ್ತವೆ ಅವನ ಆಪ್ತಮೂಲ.