ಸರ್ಕಾರಿ ಶಾಲೆಗಳಲ್ಲಿ ಎಲ್ಕೇಜಿ, ಯುಕೇಜಿ : ಅಂಗನವಾಡಿ ಕಾರ್ಯಕರ್ತರಿಂದ ವಿರೋಧ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಸರ್ಕಾರಿ ಶಾಲೆಗಳಲ್ಲಿ ಎಲ್ಕೇಜಿ, ಯುಕೇಜಿ ಪ್ರಾರಂಭಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಅಂಗನವಾಡಿ ಶಿಕ್ಷಕರ ಸಂಘವು ಪ್ರತಿಭಟನೆ ಹಮ್ಮಿಕೊಂಡಿತ್ತು. ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಸುಮಾರು 200ಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು. ನಂತರ ಪ್ರತಿಭಟನಾಕಾರರು ಹೆಚ್ಚುವರಿ ಉಪ ಆಯಕ್ತರಾದ ಅನುರಾಧಾರಿಗೆ ಮನವಿಯೊಂದನ್ನು ಸಲ್ಲಿಸಿದರು.

ಪ್ರಾಥಮಿಕ ಪೂರ್ವ ತರಗತಿಗಳನ್ನು ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಿದರೆ ಅಂಗನವಾಡಿ ಮಕ್ಕಳು ಈ ಶಾಲೆಗಳಿಗೆ ವರ್ಗಾವಣೆಗೊಳ್ಳುತ್ತಾರೆ. ಪರಿಣಾಮ ನಾವು ಉದ್ಯೋಗವಿಲ್ಲದೆ ಅಲೆದಾಡುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ, ಮಾತ್ರವಲ್ಲ ಮಕ್ಕಳೆಲ್ಲಾ ಎಲ್ಕೇಜಿ ಯಕೇಜಿಗೆ ಸೇರಿದರೆ ಅಂಗನವಾಡಿಗೆ ಮಕ್ಕಳೇ ಇಲ್ಲದಂತಾಗುವುದು. ಪರಿಣಾಮ ಮುಂದೊಂದು ದಿನ ಎಲ್ಲಾ ಅಂಗನವಾಡಿಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗುವುದರಲ್ಲಿ ಸಂಶಯವಿಲ್ಲ ಎಂದು ಅಂಗನವಾಡಿ ಕಾರ್ಯಕರ್ತರು ಅಹವಾಲು ತೋಡಿಕೊಂಡಿದ್ದಾರೆ.

ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಎಲ್ಕೇಜಿ, ಯುಕೇಜಿ ಪ್ರಾರಂಭಿಸುವ ಬದಲು ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ನಡೆಸಲಿ ಎಂದು ಅಂಗನವಾಡಿ ಕಾರ್ಯಕರ್ತರು ಹೇಳಿದ್ದಾರೆ.