ಮೊಟ್ಟೆ ದರ ಏರಿಕೆಯಿಂದ ಉ ಕನ್ನಡ ಅಂಗನವಾಡಿ ನಿರ್ವಹಣೆಗೆ ಸಮಸ್ಯೆ

 ನಮ್ಮ ಪ್ರತಿನಿಧಿ ವರದಿ

ಶಿರಸಿ : ಮಕ್ಕಳ ಅಪೌಷ್ಟಿಕತೆ ನಿರ್ಮೂಲನೆ ಉದ್ದೇಶದಿಂದ ಅಂಗನವಾಡಿ ಮಕ್ಕಳಿಗಾಗಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಮೊಟ್ಟೆ ಭಾಗ್ಯ ಯೋಜನೆಯು ಮೊಟ್ಟೆ ದರ ಏರಿಕೆಯ ಹೊಡೆತಕ್ಕೆ ಸಿಲುಕಿದೆ. ಸರ್ಕಾರವು ದರ ಏರಿಸುವ ಭರವಸೆ ನೀಡಿದ್ದರೂ ಇನ್ನೂ ಅಧಿಕೃತ ಆದೇಶ ಬಾರದೇ ಅಂಗನವಾಡಿ ನಡೆಸುವವರಿಗೂ ಸಮಸ್ಯೆಯಾಗಿದೆ.

ಒಂದೇ ಮೊಟ್ಟೆಯನ್ನು ಇಬ್ಬರು ಮಕ್ಕಳಿಗೆ ಹಂಚುವ ಸ್ಥಿತಿ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಅಂಗನವಾಡಿಗಳಲ್ಲಿ ನಿರ್ಮಾಣವಾಗಿದೆ. ಸರಕಾರ ಪ್ರತಿ ಮೊಟ್ಟೆಗೆ ನವೆಂಬರ್ ತಿಂಗಳಿನಿಂದ 6 ರೂ.ನಂತೆ ನಿಗದಿ ಮಾಡಿದೆ. ಆದರೆ ನವೆಂಬರ್ ತಿಂಗಳ ಮಧ್ಯವಾರದವರೆಗೂ ಅಂಗನವಾಡಿ ನೌಕರರು ಖರೀದಿಸಿದ ಮೊಟ್ಟೆಯ ಖರ್ಚಿನ ಹಣವನ್ನು ಕಾರ್ಯಕರ್ತೆಯರ ಖಾತೆಗೆ ಜಮೆ ಮಾಡಿಲ್ಲ. ಹಿರಿಯ ಅಧಿಕಾರಿಗಳಲ್ಲಿ ಕೇಳಿದರೆ ಜಮಾ ಮಾಡಿದ್ದಾಗಿ ಸಬೂಬು ಹೇಳುತ್ತಾರೆ. ಇದೂ ಸಾಲದೆಂಬಂತೆ ಮೊಟ್ಟೆಯ ದರ ಮಾರುಕಟ್ಟೆಯಲ್ಲಿ 7 ರೂ.ಗೆ ಜಿಗಿದಿದ್ದರೂ ಸರಕಾರ 6 ರೂ.ಗಿಂತ ಹೆಚ್ಚು ಮೊತ್ತ ನೀಡುತ್ತಿಲ್ಲ. ಅಂಗನವಾಡಿ ಸಿಬ್ಬಂದಿಗೆ ಈ ಪರಿಸ್ಥಿತಿಯನ್ನು ನಿಭಾಯಿಸಲು ಕಷ್ಟವಾಗಿ ಇಬ್ಬರು ಮಕ್ಕಳಿಗೆ ಒಂದು ಮೊಟ್ಟೆಯಂತೆ ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತಿದೆಯೆಂಬ ಆಕ್ಷೇಪ ಕೇಳಿಬಂದಿದೆ.

ಅಂಗನವಾಡಿ ಕೇಂದ್ರದಲ್ಲಿ ಮೊಟ್ಟೆ ತಿನ್ನುವ ಮಕ್ಕಳ ಸಂಖ್ಯೆಗನುಗುಣವಾಗಿ ಹಾಗೂ ಸರ್ಕಾರದಿಂದ ನೀಡುವ ಅನುದಾನಕ್ಕೆ ಸರಿಹೊಂದುವಂತೆ ಮೊಟ್ಟೆ ವಿತರಣೆ ಮಾಡುತ್ತವೆ. ಹಾಗೆ ನೀಡುವಾಗ ಪ್ರತೀ ಮಗುವಿಗೆ ವಾರದಲ್ಲಿ 2 ಮೊಟ್ಟೆಯ ಬದಲು ಒಂದೂವರೆ ಮೊಟ್ಟೆ ಮಾತ್ರ ಬರುತ್ತದೆ. ಮಾರುಕಟ್ಟೆ ದರ ಆಧರಿಸಿ ಮೊಟ್ಟೆ ದರ ನೀಡಿದರೆ ಮಾತ್ರ ಸರಿಯಾಗಿ ಮೊಟ್ಟೆ ವಿತರಣೆ ಮಾಡಲು ಸಾಧ್ಯ ಎನ್ನುತ್ತಾರೆ ಅವರು. ಪ್ರತೀ ಮೊಟ್ಟೆಗೆ 1 ರೂ ಹೆಚ್ಚುವರಿ ನೀಡಿ ಅಂಗನವಾಡಿ ಕಾರ್ಯಕರ್ತೆಯರು ಖರೀದಿಸಬೇಕು. ಇದು ಹೊರೆಯಾಗಿದ್ದು, ಪಾಲಕರಲ್ಲಿ ಕೇಳಿದರೆ ಪ್ರಯೋಜನ ಆಗುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ಇರುವ ಮೊಟ್ಟೆಯಲ್ಲಿಯೇ ಹಂಚುವ ಕಾರ್ಯ ಮಾಡುತ್ತೇವೆ ಎಂಬ ಮಾತು ಕೇಳಿಬಂದಿದೆ. ಗರ್ಭಿಣಿ ಮಹಿಳೆಯರಿಗೆ ಮೊಟ್ಟೆ ಕೊಡುವಾಗ ಮಕ್ಕಳು ನಮಗೂ ನೀಡಿಯೆಂಬ ಒತ್ತಾಯ ಮಾಡುತ್ತಿದ್ದು, ಈಗಿರುವ ನಿಯಮದಲ್ಲಿ ಮೊಟ್ಟೆಯೇ ಕಡಿಮೆ ಬರುತ್ತಿದ್ದು, ಮಕ್ಕಳಿಗೆ ಹೆಚ್ಚುವರಿ ಕೊಡಲು ಆಗದೇ ಸಮಸ್ಯೆ ಆಗಿದೆ.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೂ ಸರಿಯಾಗಿ ಮೊಟ್ಟೆ ಲಭ್ಯವಾಗುತ್ತಿಲ್ಲ. ವಾರಕ್ಕೆ 3 ಮೊಟ್ಟೆ ನೀಡುವ ಬದಲು ಒಂದೂವರೆ, ಎರಡು ಮೊಟ್ಟೆ ಮಾತ್ರ ನೀಡಲಾಗುತ್ತದೆ. ಮೂರು ಮೊಟ್ಟೆ ನೀಡುವಂತೆ ಅಂಗನವಾಡಿ ಕಾರ್ಯಕರ್ತೆಯರ ಬಳಿ ಹೇಳಿದರೆ ಸರ್ಕಾರ ನೀಡಿದ ಹಣ ಎರಡೇ ಮೊಟ್ಟೆಗೆ ಸಾಕಾಗುತ್ತದೆ. ಹೆಚ್ಚುವರಿಯಾಗಿ ನೀಡಬೇಕಿದ್ದರೆ ಪಾಲಕರು ಹಣ ನೀಡಬೇಕು ಎನ್ನುತ್ತಾರೆ. ಪಾಲಕರು ಹಣ ಕೊಡುವುದಿದ್ದರೆ ಸರ್ಕಾರದ ಯೋಜನೆಯ ಅಗತ್ಯವೇ ಇರಲಿಲ್ಲ ಎನ್ನುತ್ತಾರೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗುವಿನ ಪಾಲಕರ ಮಾತಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜೇಂದ್ರ ಬೇಕಲ್ ಅವರನ್ನು ಸಂಪರ್ಕಿಸಿದಾಗ ವಿವರ ನೀಡಿದ ಅವರು “ಜಿಲ್ಲೆಯಲ್ಲಿ ಒಟ್ಟೂ 2687 ಅಂಗನವಾಡಿಗಳಿದ್ದು, ಇದರಲ್ಲಿ 157 ಮಿನಿ ಅಂಗನವಾಡಿಗಳು ಸೇರಿವೆ. ಒಟ್ಟೂ 1.24 ಲಕ್ಷ ಮಕ್ಕಳಿದ್ದು ಇವರಲ್ಲಿ 48386 ಮಕ್ಕಳಿಗೆ ಮೊಟ್ಟೆ ವಿತರಿಸಲಾಗುತ್ತದೆ. ಸಾಮಾನ್ಯ ಮಕ್ಕಳಿಗೆ ವಾರದಲ್ಲಿ 2 ಮೊಟ್ಟೆ, ಅಪೌಷ್ಠಿಕ ಮಕ್ಕಳಿದ್ದರೆ ವಾರದಲ್ಲಿ 3 ಮೊಟ್ಟೆ ನೀಡಲಾಗುತ್ತದೆ. ಜಿಲ್ಲೆಗೆ ಪ್ರತೀ ತಿಂಗಳು ಮೊಟ್ಟೆಗಾಗಿ ಪ್ರತೀ ಮೊಟ್ಟೆಗೆ 6 ರೂ.ನಂತೆ ನಿರ್ಧರಿಸಿ ಸರಸರಿ 5 ಲಕ್ಷ ರೂ ಅನುದಾನ ಹಂಚಿಕೆ ಮಾಡಲಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮೊಟ್ಟೆ ದರ ಹೆಚ್ಚಿದ್ದು, ಇಲಾಖೆಯ ಗಮನಕ್ಕೆ ಬಂದಿದೆ. ಸರ್ಕಾರ ಸಮ್ಮತಿಸಿದರೆ ಹೆಚ್ಚುವರಿ ಹಣ ನೀಡಲಾಗುವುದು” ಎಂದರು.