ಇಬ್ಬರ ಕೆಲಸ ಒಬ್ಬರೇ ನಿಭಾಯಿಸುವ ಒತ್ತಡದಲ್ಲಿ ಬೆಳ್ತಂಗಡಿ ಮಿನಿ ಅಂಗನವಾಡಿ ಕಾರ್ಯಕರ್ತೆಯರು

 ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಷ್ಟೇ ಪೂರ್ಣ ಪ್ರಮಾಣದಲ್ಲಿ ಮಿನಿ ಅಂಗನವಾಡಿ ಕೇಂದ್ರಗಳೂ ಕಾರ್ಯನಿರ್ವಹಿಸುತ್ತಿದ್ದು, ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಕಾರ್ಯಕರ್ತೆಯರು ಸಹಾಯಕಿಯರಿಲ್ಲದೆ ಇಬ್ಬರ ಕೆಲಸಗಳನ್ನೂ ಒಬ್ಬರೇ ನಿಭಾಯಿಸುವ ಒತ್ತಡದಲ್ಲಿ ಸಿಲುಕಿದ್ದು, ಒಂದು ರೀತಿಯ ಸರಕಾರಿ ಶೋಷಣೆ ಅನುಭವಿಸುತ್ತಿದ್ದಾರೆ ಎಂಬ ಅಭಿಪ್ರಾಯಗಳು ಪೋಷಕರಿಂದ ಕೇಳಿ ಬರುತ್ತಿದೆ.

ತಾಲೂಕಿನಲ್ಲಿ ಒಟ್ಟು 324 ಪೂರ್ಣಪ್ರಮಾಣದ ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ ನಕ್ಸಲ್ ಪೀಡಿತ ಪ್ರದೇಶದ ಗ್ರಾಮಗಳ ಕೇಂದ್ರಗಳೂ ಸೇರಿದಂತೆ 18 ಮಿನಿ ಅಂಗನವಾಡಿ ಕೇಂದ್ರಗಳೂ ಸೇರಿವೆ. ಮಿನಿ ಅಂಗನವಾಡಿ ಕೇಂದ್ರಗಳ ಪೈಕಿ ಬಹುತೇಕ ಕೇಂದ್ರಗಳಲ್ಲಿ ಪೂರ್ಣ ಪ್ರಮಾಣದ ಅಂಗನವಾಡಿಗಳಷ್ಟೇ ಮಕ್ಕಳು ಮತ್ತು ಫಲಾನುಭವಿಗಳಿದ್ದಾರೆ.

ಈ ಮಧ್ಯೆ ಮಿನಿ ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರನ್ನಷ್ಟೇ ನೇಮಕಗೊಳಿಸಿದ್ದು, ಅಗತ್ಯ ಸಹಾಯಕಿಯರನ್ನು ನೇಮಿಸದೆ ಅಥವಾ ನೇಮಿಸಿಕೊಳ್ಳಲು ಅವಕಾಶವನ್ನೂ ನೀಡದ ಪರಿಣಾಮ ಕಾರ್ಯಕರ್ತೆಯರು ಕೆಲಸಗಳ ಒತ್ತಡಗಳಿಂದ ಬಳಲುತ್ತಿದ್ದಾರೆ, ಇನ್ನೊಂದೆಡೆ ಮಿನಿ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಸಹಾಯಕಿಗೆ ನೀಡುವಷ್ಟು ವೇತನವನ್ನಷ್ಟೇ ಇಲಾಖೆ ನೀಡುತ್ತಿರುವುದು ವಿಷಾದನೀಯ ಎಂಬ ಮಾತುಗಳು ಸ್ಥಳೀಯ ಬಾಲವಿಕಾಸ ಸಮಿತಿಗಳಿಂದ ಕೇಳಿ ಬರುತ್ತಿದೆ.

ಅಂಗನವಾಡಿ ಸಹಾಯಕಿಯನ್ನು ಕಾರ್ಯಕರ್ತೆಯಾಗಿ ಭರ್ತಿಗೊಳಿಸುವ ಇಲಾಖೆ ಮಿನಿ ಅಂಗನವಾಡಿ ಕಾರ್ಯಕರ್ತೆಯರನ್ನು ಮೇಲ್ದರ್ಜೆಯ ಅಂಗನವಾಡಿ ಕಾರ್ಯಕರ್ತೆಯಾಗಿ ಭಡ್ತಿಗೊಳಿಸುವುದಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಜಿಲ್ಲಾ ಉಪನಿರ್ದೇಶಕರು ಬೆಳ್ತಂಗಡಿ ತಾಲೂಕಿನವರೇ ಆಗಿದ್ದುಕೊಂಡು ತಾಲೂಕಿನಲ್ಲಿ ಮಿನಿ ಅಂಗನವಾಡಿ ಕೇಂದ್ರಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಆದರೆ ಕಾರ್ಯಕರ್ತೆಯರ ಬವಣೆಯನ್ನು ಕೇಳುವವರೂ ಇಲ್ಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೆರಳಲ್ಲೇ ಅಂಗನವಾಡಿ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರು ಶೋಷಣೆಗೊಳಗಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡುವಂತಾಗಿದೆ.