ಮೈದಾನದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ತಡೆ

ಅಧಿಕಾರಿ, ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕರು ಚರ್ಚಿಸಿ ಅಂಗನವಾಡಿ ಕಾಮಗಾರಿಗೆ ತಡೆಯೊಡ್ಡಿದರು

ಆಟಕ್ಕಾಗಿ ಕ್ರೀಡಾಂಗಣ ಹಾಗೇ ಬಿಡಲು ಆಗ್ರಹ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಆಟದ ಮೈದಾನದ ಕೊರತೆ ಅನುಭವಿಸುತ್ತಿರುವ ಪಡುಬಿದ್ರಿಯಲ್ಲಿ ಇದ್ದ ಒಂದು ಮೈದಾನವನ್ನೂ ಸರ್ಕಾರದ ಅನುದಾನಗಳನ್ನು ಬೇಕಾಬಿಟ್ಟಿ, ಸಿಕ್ಕಸಿಕ್ಕಲ್ಲಿ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಮೈದಾನವನ್ನು ನುಂಗಿ ಹಾಕಿದ್ದು, ಇದೀಗ ಮತ್ತೆ ಅಂಗನವಾಡಿಯ ಹೆಸರಲ್ಲಿ ಮತ್ತೊಂದು ಕಟ್ಟಡ ನಿರ್ಮಾಣಕ್ಕೆ ಮುಂದಾದ ಅಧಿಕಾರಿಗಳ ಪ್ರಯತ್ನಕ್ಕೆ ಸಾರ್ವಜನಿಕರು ತಡೆಯೊಡ್ಡಿದ್ದಾರೆ.

ಅದೇಷ್ಟೋ ನಿರುಪಯೋಗ ಕಟ್ಟಡಗಳಿಗೆ ಆಶ್ರಯ ನೀಡಿದ ಬೋರ್ಡ್ ಶಾಲಾ ಮೈದಾನ ಕಿರಿದಾಗುತ್ತಲೇ ಇದ್ದು, ಇದೀಗ ಮೈದಾನ ಅಸ್ಥಿತ್ವ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿದೆ. ಎಲ್ಲಾ ಕನ್ನಡ ಶಾಲೆಗಳಂತೆ ಇಲ್ಲೂ ಮಕ್ಕಳ ಸಂಖ್ಯೆ ಭಾರೀ ವಿರಳ. ಆದರೆ ಸರ್ಕಾರದ ಅನುದಾನಗಳು ದೊರೆಯುತ್ತದೆ ಎಂಬ ಒಂದೇ ಕಾರಣಕ್ಕೆ ಯಾವುದೇ ಒಂದು ಪ್ಲಾನ್ ಇಲ್ಲದೆ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಲೇ ಇದ್ದು, ಒಂದಿಷ್ಟು ದಿನ ಆ ಕಟ್ಟಡದಲ್ಲಿ ಚಟುವಟಿಕೆಗಳು ನಡೆದರೆ ಮತ್ತೆ ಬೀಗ ಮುದ್ರೆ. ಅಂಥ ನಿರುಪಯೋಗ ಕೋಣೆಗಳು ಈ ಮೈದಾನದಲ್ಲಿ ಒಂದೆರಡಲ್ಲ.

ಇದೇ ಮೈದಾನದಲ್ಲಿದ್ದ ತಾ ಪಂ.ಗೆ ಸೇರಿದ ಎರಡು ಪಾಳುಕಟ್ಟಡದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳ ಬಗ್ಗೆ `ಕರಾವಳಿ ಅಲೆ’ ಪ್ರಕಟಿಸಿದ ವರದಿಗೆ ಸ್ಪಂದಿಸಿದ ತಾ ಪಂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅದನ್ನು ತೆರವುಗೊಳಿಸುವ ಮೂಲಕ ಸ್ಥಳೀಯ ಮಂದಿ ಸಂತಸ ವ್ಯಕ್ತ ಪಡಿಸಿದರು. ಆದರೆ ಅದೇ ಸ್ಥಳದಲ್ಲಿ ಇಲಾಖೆ ಮತ್ತೊಂದು ಅಂಗನವಾಡಿ ನಿರ್ಮಾಣಕ್ಕೆ ಮುಂದಾಗಿದ್ದರಿಂದ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಇಲಾಖೆಗೆ ಸೇರಿದ ಅದೇಷ್ಟೋ ನಿರುಪಯೋಗ ಕಟ್ಟಡಗಳಿದ್ದು, ಅದನ್ನು ಇಲಾಖೆಗಳು ಹೊಂದಾಣಿಕೆ ಮಾಡಿಕೊಂಡು ಅಂಗನವಾಡಿಗೆ ಬಿಟ್ಟುಕೊಡುವ ಮೂಲಕ ಸರ್ಕಾರದ ಹಣ ಪೋಲಾಗುವುದನ್ನು ತಪ್ಪಿಸಲಿ. ಆ ಮೂಲಕ ಈ ಮೈದಾನವನ್ನೇ ನಂಬಿ ತಮ್ಮ ಕ್ರೀಡಾ ಜೀವನವನ್ನು ಉತ್ತಮಗೊಳಿಸಲು ಪ್ರಯತ್ನ ನಡೆಸುತ್ತಿರುವ ಯುವ ಪ್ರತಿಭೆಗಳಿಗೆ ಈ ಮೈದಾನ ಮೈದಾನವಾಗಿ ಉಳಿಸಲಿ ಎಂಬುದು ಸಾರ್ವಜನಿಕರ ಮಾತು.

ಪಡುಬಿದ್ರಿ ಗ್ರಾ ಪಂ ಉಪಾಧ್ಯಕ್ಷ ವೈ ಸುಕುಮಾರ್ ಸಹಿತ ಸ್ಥಳೀಯ ಫ್ರೆಂಡ್ಸ್ ಕ್ರಿಕೆಟ್ ತಂಡದ ನಾಯಕ ಶರತ್ ಶೆಟ್ಟಿ ಮಾತನಾಡಿ, “ಯಾವುದೆ ಕಾರಣಕ್ಕೆ ಈ ಮೈದಾನವನ್ನು ಕಿರಿದುಗೊಳಿಸುವ ಮೂಲಕ ಎಳೆಯ ಪ್ರತಿಭೆಗಳಿಗೆ ಅನ್ಯಾಯವಾಗುವುದನ್ನು ನಾವು ಸಹಿಸಲಾರೆವು. ಈ ಭಾಗದಲ್ಲಿ ಏನೇ ಆಗುವದಿದ್ದರೂ ಸ್ಥಳೀಯರಿಗಾಗಿ ಆಗುತ್ತದೆ, ಅವರಿಗೆ ಬೇಡವೆಂದಾದರೆ ಅಧಿಕಾರಿಗಳು ಒತ್ತಾಯ ಪೂರ್ವಕವಾಗಿ ಹೇರುವುದು ಸರಿಯಲ್ಲ. ಜನರ ವಿರೋಧದ ನಡುವೆಯೂ ಇಲ್ಲಿ ಅಂಗನವಾಡಿ ಸಹಿತ ಯಾವುದೇ ಕಟ್ಟಡ ನಿರ್ಮಿಸಲು ಮುಂದಾದರೆ ನಾವು ಯಾವುದೇ ಮಟ್ಟದ ಹೋರಾಟಕ್ಕೂ ಸಿದ್ಧ, ಅಲ್ಲದೆ ಮೈದಾನಕ್ಕೆ ಬಹಳಷ್ಟು ಅಡ್ಡಿಯಾಗುತ್ತಿರುವ ಗೃಹ ರಕ್ಷಕದಳದ ಕಚೇರಿಗೆ ಬೇರೆ ವ್ಯವಸ್ಥೆ ಕಲ್ಪಿಸಿ ಆ ಹಳೆಯ ಕಟ್ಟಡವನ್ನು ತೆರವುಗೊಳಿಸಿ” ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಸ್ಥಳಕ್ಕೆ ತಾ ಪಂ ಸದಸ್ಯೆ ನೀತಾ ಗುರುರಾಜ್ ಸಹಿತ ಪಿಡಿಒ ಪಂಚಾಕ್ಷರೀ ಸ್ವಾಮಿ ಹಾಗೂ ಇಲಾಖಾ ಇಂಜಿಯರ್ ಆಗಮಿಸಿ ಜನರೊಂದಿಗೆ ಚರ್ಚಿಸಿದರು.