ಅಂಗಡಿಮೊಗರು ಸರಕಾರಿ ಶಾಲೆ ಕಟ್ಟಡದಲ್ಲಿ ಬಿರುಕು

ವಿದ್ಯಾರ್ಥಿಗಳು ಆತಂಕದಲ್ಲಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಸರಕಾರಿ ಅಭಿಯಂತರರು ಕಟ್ಟಡದ ಕುಸಿತದ ಹಂತದಲ್ಲಿದ್ದು, ಇನ್ನಿಲ್ಲಿ ತರಗತಿಗಳನ್ನು ನಡೆಸಬಾರದೆಂಬ ಪ್ರಮಾಣಪತ್ರ ನೀಡಿದ್ದರೂ, ಬದಲಿ ವ್ಯವಸ್ಥೆ ಕಲ್ಪಿಸದೆ ಅದೇ ಕಟ್ಟಡದಲ್ಲಿ ತರಗತಿಗಳನ್ನು ನಡೆಸುತ್ತಿರುವುದು ಪುತ್ತಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗಡಿಮೊಗರು ಸರಕಾರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿಯ ಕಟ್ಟಡವೊಂದಕ್ಕೆ ಕಳೆದ ಮೂರು ವರ್ಷಗಳಿಂದ ಫಿಟ್ನೆಸ್ ಪ್ರಮಾಣಪತ್ರ ನೀಡಲಾಗಿಲ್ಲ. 2004ರಲ್ಲಿ ಅಂಗಡಿಮೊಗರು ಹೈಸ್ಕೂಲ್ ಪ್ಲಸ್ ಒನ್ ಆಗಿ ಭಡ್ತಿಗೊಂಡಿತ್ತು. ಇಲ್ಲಿ 240 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯ್ಯುತ್ತಾರೆ. ಜೊತೆಗೆ 223ಕ್ಕಿಂತಲೂ ಅಧಿಕ ಮಂದಿ ಈ ಶಾಲೆಯನ್ನು ಕೇಂದ್ರವಾಗಿಸಿ ಮುಕ್ತ ಅಧ್ಯಯನ ನಡೆಸಿ ಇದೇ ಕೇಂದ್ರದಲ್ಲಿ ಪರೀಕ್ಷೆಗಳನ್ನೂ ಬರೆಯುತ್ತಾರೆ.

ತರಗತಿ ಕಟ್ಟಡದ ಗೋಡೆ ಹಾಗೂ ಮೇಲಂತಸ್ತುಗಳ ಕಳಪೆ ಕಾಮಗಾರಿಯಿಂದ ಬಿರುಕು ಬಿಟ್ಟಿದ್ದು ಕುಸಿಯುವ ಭೀತಿಯಲ್ಲಿದೆ. ಹಲವು ಬಾರಿ ಕಟ್ಟಡದ ದುಸ್ಥಿತಿಯ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ನೀಡಿದ್ದರೂ ಯಾವುದೇ ಕ್ರಮಗಳನ್ನು ಈವರೆಗೆ ಕೈಗೊಳ್ಳಲಾಗಿಲ್ಲವೆಂದು ಶಾಲಾ ಪ್ರಾಂಶುಪಾಲೆ ಪತ್ರಿಕೆಗೆ ತಿಳಿಸಿದ್ದಾರೆ.

ಶಾಲಾ ಕಟ್ಟಡದ ದುರವಸ್ಥೆಯ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿದಾಗೆಲ್ಲ ಶಾಲೆಯಲ್ಲಿ 200ಕ್ಕಿಂತಲೂ ಅಧಿಕ ಮುಕ್ತ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವಾಗಿ ಬದಲಾಯಿಸುವ ಸೌಲಭ್ಯ ನೀಡಬೇಕೆಂದು ನಿರ್ದೇಶನ ನೀಡಿರುವರೆಂದೂ ಶಾಲಾ ಅಧಿಕೃತರು ತಿಳಿಸುತ್ತಾರೆ.

ಅಂಗಡಿಮೊಗರು ಹೈಸ್ಕೂಲು ಸಮುಚ್ಚಯದಲ್ಲಿ ತಾತ್ಕಾಲಿಕವಾಗಿ ಪ್ಲಸ್ ಟು ತರಗತಿಗಳನ್ನು ನಡೆಸಬಹುದಾದರೂ ಹೈಸ್ಕೂಲಿಗಿಂತ ಅಣತಿ ದೂರದಲ್ಲಿ ಪ್ಲಸ್ ಟು ಕಾರ್ಯಾಚರಿಸುವುದರಿಂದ ತಾತ್ಕಾಲಿಕ ವ್ಯವಸ್ಥೆಗೂ ಒಗ್ಗುವಂತಿಲ್ಲ.

ಪ್ಲಸ್ ಒನ್ ಹಾಗೂ ಟು ಗಳಲ್ಲಾಗಿ ಒಟ್ಟು 15ರಷ್ಟು ಉಪನ್ಯಾಸಕರ ಅಗತ್ಯವಿದ್ದು, ಇಲ್ಲಿ ಕೇವಲ ಒಬ್ಬರು ಪೂರ್ಣಕಾಲಿಕ ಉಪನ್ಯಾಸಕರ ನೇಮಕವಾಗಿದೆ. ಇತರ 11 ಮಂದಿ ಅರೆಕಾಲಿಕ ಉಪನ್ಯಾಸಕರು ಬೋಧನೆ ಮಾಡುತ್ತಿದ್ದಾರೆ.

ಅಂಗಡಿಮೊಗರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆಯೇ ಅಧಿಕವಿದ್ದು, ಉತ್ತಮ ಶೌಚಾಲಯ ಸೌಕರ್ಯವಿಲ್ಲದೆ ತೀವ್ರ ಸಮಸ್ಯೆಗೊಳಗಾಗಿದ್ದಾರೆ.