ಕಾರ್ಕಳದಲ್ಲಿ ಪುರಾತನ ವಿಗ್ರಹ, ಪೂಜಾ ಸಾಮಗ್ರಿಗಳು ಪತ್ತೆ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ತಾಲೂಕಿನ ವರಂಗ ಗ್ರಾಮದ ಮುನಿಯಾಲು ಸಮೀಪದ ಚಟ್ಕಲಪಾದೆ ಪಾಲಜೆಡ್ಡು ಎಂಬಲ್ಲಿನ ಕೃಷಿ ಜಮೀನಿನಲ್ಲಿ ಅತ್ಯಂತ ಪುರಾತನವಾದ ಪಂಚಲೋಹ ಮಿಶ್ರಿತ ಕಂಚಿನ ವಿಗ್ರಹಗಳು ಹಾಗೂ ಪೂಜಾ ಸಾಮಗ್ರಿಗಳು ಪತ್ತೆಯಾಗಿವೆ.

ರಾಮೃಕೃಷ್ಣ ಆಚಾರ್ಯ ಎಂಬವರ ಸಂಜೀವಿನಿ ಫಾರ್ಮಿನಲ್ಲಿ ಶುಕ್ರವಾರ ಮಧ್ಯಾಹ್ನ ನಾಗಬನದ  ಜೀರ್ಣೋದ್ದಾರ ಮಾಡುವ ಸಲುವಾಗಿ ಭೂಮಿಯನ್ನು ಅಗೆಯುತ್ತಿದ್ದ ವೇಳೆ ನಾಗಬನದ ಪಕ್ಕದಲ್ಲಿದ್ದ ಸುಮಾರು 2 ಅಡಿ ಎತ್ತರದ ಶಿಲೆಕಲ್ಲನ್ನು ತೆಗೆದು ನಾಗಬನದ ಬಳಿ ಇಡುವಾಗ ಕಲ್ಲಿನ ಅಡಿಯಲ್ಲಿ 2 ದೇವರ ವಿಗ್ರಹಗಳು, 1 ಆಮೆಯ ಕಂಚಿನ ವಿಗ್ರಹ ಹಾಗೂ ಗಂಟೆ, ಆರತಿತಟ್ಟೆ ಹಾಗೂ ಕಂಚಿನ ದೀಪ ಸಹಿತ ಪೂಜಾ ಸಲಕರಣೆಗಳು ಸೇರಿ ಒಟ್ಟು 6 ಪಂಚಲೋಹದ ಅಪರೂಪದ ವಸ್ತುಗಳು ಪತ್ತೆಯಾಗಿವೆ. ಪತ್ತೆಯಾದ ವಿಗ್ರಹಗಳು ಸುಮಾರು 100 ವರ್ಷಗಳಷ್ಟು ಹಳೆಯದಾಗಿರಬಹುದೆಂದು ಅಂದಾಜಿಸಲಾಗಿದ್ದು, ಈ ಪೈಕಿ ದೇವಿಯನ್ನು ಹೋಲುವ ನೃತ್ಯದ ಭಂಗಿಯ ಸುಮಾರು 6 ಇಂಚಿನ ವಿಗ್ರಹ ಹಾಗೂ ಏಳು ಮುಖಗಳುಳ್ಳ ಅತ್ಯಂತ ಅಪರೂಪ ಹಾಗೂ ವಿಶಿಷ್ಟ ಗಣಪತಿ ವಿಗ್ರಹ ಸಹಿತ ದೀಪ ಮೂರ್ತಿ, ಕೂರ್ಮಾವತರಾದ ವಿಗ್ರಹ, ದೈನಂದಿನ ಆರತಿ, ಶಂಖ, ಘಂಟೆ ಸಹಿತ ಪೂಜಾ ಸಾಮಗ್ರಿಗಳು ಪತ್ತೆಯಾಗಿದೆ ಹಾಗೂ ಇವುಗಳ ಮೇಲೆ ಇರಿಸಲಾಗಿದ್ದ ಕಲ್ಲಿನ ಮೇಲೂ ಶಿವಲಿಂಗ ಮತ್ತು ಸೂರ್ಯ ಚಂದ್ರರ ಚಿತ್ರವನ್ನು ಕೆತ್ತಲಾಗಿದೆ.

ಇಲ್ಲಿ ಸಿಕ್ಕಿರುವ ವಿಗ್ರಹಗಳು ಪೂಜಾ ಸಾಮಗ್ರಿಗಳ ಕುರಿತು ಸಾಕಷ್ಟು ಗೊಂದಲಗಳು ಉದ್ಭವಿಸಿದ್ದು, ಇದು ಎಲ್ಲಿಂದಲೋ ಕಳವಾಗಿರುವ ವಿಗ್ರಹಗಳನ್ನು ಸಾಗಿಸಲಾಗದೇ ಇಲ್ಲಿ ಹೂತಿಡಲಾಗಿದೆಯೇ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ ಜಾಗದ ಮಾಲಿಕರು ಹೇಳುವಂತೆ “ಅಷ್ಟಮಂಗಲ ಪ್ರಶ್ನೆಯಲ್ಲಿ ಈ ಸ್ಥಳದಲ್ಲಿ ದೇವರ ವಿಗ್ರಹಗಳು ಪತ್ತೆಯಾಗುತ್ತವೆ, ಅವುಗಳನ್ನು ಪ್ರತಿಷ್ಠಾಪಿಸಿದ್ದಲ್ಲಿ ಒಳಿತಾಗುತ್ತದೆ ಎನ್ನುವ ವಿಚಾರ ಪ್ರಸ್ತಾಪವಾಗಿದ್ದರಿಂದ ಇಲ್ಲಿ ವಿಗ್ರಹಗಳು ಪತ್ತೆಯಾಗಿವೆ” ಎಂದಿದ್ದಾರೆ. ಆದರೆ ಹಲವರ ಪ್ರಕಾರ ಇದು ಜಂಗಮರ ಕಾಲದ ವಿಗ್ರಹಗಳಾಗಿದ್ದು, ವಲಸೆಹೋದ ಸಂದರ್ಭದಲ್ಲಿ ಇಲ್ಲಿಯೇ  ಹೂತಿರಿಸಿ ಹೋಗಿರಬಹುದೆಂದು ಶಂಕಿಸಲಾಗಿದೆ.

ವಿಗ್ರಹಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಜೆಕಾರು ಕಂದಾಯ ನಿರೀಕ್ಷಕ ಮಂಜುನಾಥ ನಾಯಕ್, ಗ್ರಾಮಕರಣಿಕ ಹಿತೇಶ್ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ವಿಗ್ರಹಗಳನ್ನು ಪರಿಶೀಲಿಸಿ ಮಹಜರು ನಡೆಸಿದ ಬಳಿಕ ಜಾಗದ ಮಾಲಿಕರ ಸುರ್ಪದಿಗೆ ಒಪ್ಪಿಸಿದ್ದಾರೆ. “ಮುಂದಿನ ಸೋಮವಾರ ಇತಿಹಾಸ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿದ ಬಳಿಕ ಅವುಗಳನ್ನು ಸರಕಾರದ ವಶಕ್ಕೆ ಪಡೆಯುವುದೋ ಅಥವಾ ಜಾಗದ ಮಾಲಿಕರ ವಶಕ್ಕೆ ನೀಡುವುದೋ ಎಂಬುವುದು ತೀರ್ಮಾನಿಸಲಾಗುವುದು” ಎಂದು ಕಂದಾಯ ನಿರೀಕ್ಷಕರು ಹೇಳಿದ್ದಾರೆ.

“ಫಾರ್ಮ್ ಜಾಗದಲ್ಲಿರುವ ನಾಗಬನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಪಕ್ಕದಲ್ಲಿದ್ದ ಶಿಲೆಯನ್ನು ಬನದ ಬಳಿಯಿಟ್ಟು ಪ್ರಾರ್ಥನೆ ಸಲ್ಲಿಸಿ ಅಭಿವೃದ್ಧಿಯ ಕೆಲಸಗಳನ್ನು ಮುಂದುವರಿಸಿ ಎಂದು ಪ್ರಶ್ನೆಯಲ್ಲಿ ತಿಳಿದು ಬಂದ ಪ್ರಕಾರ ಶುಕ್ರವಾರ ಕಲ್ಲನ್ನು ತೆಗೆಯುವಾಗ ವಿಗ್ರಹಗಳ ಪತ್ತೆಯಾಗಿವೆ” ಎಂದು ಸಂಜೀವಿನಿ ಫಾರ್ಮ್ ಕಾರ್ಯದರ್ಶಿ ಸವಿತಾ ಆರ್ ಆಚಾರ್ಯ ತಿಳಿಸಿದ್ದಾರೆ.