ಕುಂಬ್ರದಲ್ಲೊಂದು ಸಾವಯವ ಕ್ಯಾಂಟೀನ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಆಧುನಿಕ ಕಾಲದಲ್ಲಿ ಜನಸಾಮಾನ್ಯರು ವಿದೇಶಿ ತಿನಿಸುಗಳಿಗೆ ಮಾರು ಹೋಗುತ್ತಿರುವುದು ಗೋಚರಿಸುತ್ತಿರುವ ಸತ್ಯ. ಆದರೆ ಇದೇ ಸಂದರ್ಭದಲ್ಲಿ ಸಾವಯವ ತಿನಿಸುಗಳನ್ನು ಪೂರೈಸುವ ಮೂಲಕ ಸಾಂಪ್ರದಾಯಿಕತೆಯನ್ನು ಎತ್ತಿ ಹಿಡಿದಿರುವ ಕ್ಯಾಂಟೀನೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಕಂಡುಬಂದಿದೆ.

ಸೌಗಂಧಿಕಾ ಎಂಬ ಹೆಸರಿನ ಈ ಕ್ಯಾಂಟೀನ್ ಜನರಿಗೆ ವಿಶೇಷವಾದ ಸಾವಯವ ಪಾನೀಯ ಮತ್ತು ತಿನಿಸುಗಳನ್ನು ಪೂರೈಸುತ್ತಿದ್ದು, ಇದೀಗ ಜನಪ್ರಿಯತೆಯನ್ನು ಗಳಿಸಿದೆ. ಮಂಗಳೂರಿನಿಂದ ಸುಮಾರು 56 ಕಿ ಮೀ ಅಂತರದ ಕುಂಬ್ರ ಎಂಬಲ್ಲಿ ಸೌಗಂಧಿಕಾ ಕ್ಯಾಂಟೀನ್ ಅಸ್ಥಿತ್ವದಲ್ಲಿದೆ. ಪ್ರಕೃತಿ ಪ್ರೇಮಿ ಚಂದ್ರ ಎಂಬವರ ಕನಸಿನ ಕೂಸಾದ ಈ ಕ್ಯಾಂಟೀನ್ ಇದೀಗ ಚಂದ್ರ ಸೌಗಂಧಿಕ ಕ್ಯಾಂಟೀನ್ ಎಂದೇ ಜನಪ್ರಿಯವಾಗಿದೆ. ಮಂಗಳೂರು-ಮೈಸೂರು ರಾಜ್ಯ ಹೆದ್ದಾರಿ ನಡುವೆ ಸಿಗುವ ಈ ಕ್ಯಾಂಟೀನಿನಲ್ಲಿ ಚಾ ಮತ್ತು ವಿವಿಧ ಹಣ್ಣುಗಳ ಪಾನೀಯಗಳು, ಜೊತೆಗೆ ಚಾಟ್ಸ್ ಮತ್ತು ಇತರ ಸ್ಥಳೀಯ ಆಹಾರ ಉತ್ಪನ್ನಗಳನ್ನು ಜನರಿಗೆ ಪೂರೈಸುತ್ತಿದೆ. ರಂಬುಟನ್ನ್, ಸಪೋಟ, ಪ್ಯಾಷನ್ ಹಣ್ಣು, ಪುನರಪುಳಿ ಮತ್ತು ಪೇರಳೆ ಸೇರಿದಂತೆ ಸುಮಾರು 12ಕ್ಕೂ ಅಧಿಕ ಜಾತಿಯ ಹಣ್ಣುಗಳನ್ನು ಅವರ ತೋಟದಲ್ಲಿ ಬೆಳೆಯಲಾಗುತ್ತಿದೆ. ಎರಡು ವರ್ಷದ ಹಿಂದೆ ಈ ಸಾವಯವ ನರ್ಸರಿಯನ್ನು ಅಭಿವೃದ್ಧಿಪಡಿಸಲಾಗಿದೆ, ನಂತರ ಕ್ಯಾಂಟೀನ್ ಆರಂಭಿಸಿದ್ದಾರೆ.

“ಮಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣಿಕರು ನನ್ನ ತೋಟದಿಂದ ಅವರಿಗೆ ಇಷ್ಟವಾದ ಹಣ್ಣನ್ನು ಕೊಯ್ದು ಜ್ಯೂಸಿಗೆ ಆಯ್ದು ತರುತ್ತಾರೆ. ಸ್ವಲ್ಪ ಅಂತರದಲ್ಲಿರುವ ನನ್ನ ಪರಿಸರ ಪ್ರೇಮಿ ಕ್ಯಾಂಟೀನಿಗೂ ಭೇಟಿ ನೀಡುತ್ತಾರೆ. ಮಾತ್ರವಲ್ಲ ಕೆಲವೊಮ್ಮೆ ನನ್ನ ತೋಟದಲ್ಲಿರುವ ಹಣ್ಣುಗಳನ್ನು ನೋಡಲು ಕೂಡ ಜನರು ಭೇಟಿ ನೀಡುತ್ತಿದ್ದಾರೆ. ತೋಟದಲ್ಲಿ ವಿವಿಧ ತಳಿಯ ತರಕಾರಿ, ಹಣ್ಣುಗಳು ಮತ್ತು ಹೂಗಳನ್ನು ಬೆಳೆದಿದ್ದೇವೆ” ಎಂದು ಚಂದ್ರ ಹೆಮ್ಮೆಯಿಂದ ಹೇಳಿದ್ದಾರೆ. ಇಲ್ಲಿನ ವಿಶೇಷತೆಯೆಂದರೆ ಬಿದಿರಿನ ಚಹ. ಹೆಚ್ಚಿನ ಜನರು ಈ ಬಿದಿರಿನ ಚಹಕ್ಕಾಗಿ ಆಗಮಿಸುತ್ತಿದ್ದಾರೆ. ಬಿದಿರಿನ ಎಲೆ ಮತ್ತು ಮಸಾಲಗಳನ್ನು ಸೇರಿಸಿ ತಯಾರಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.