ಪರಿಸರ ಜಾಗೃತಿ ಮೂಡಿಸಲು ಲಡಾಕಿಗೆ ಬೈಕ್ ಸವಾರಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಜಾಗತಿಕ ತಾಪಮಾನ ಏರಿಕೆ, ಪರಿಸರ ವಿನಾಶ ನಿಯಂತ್ರಣ, ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಯುವಕ ಪ್ರತೀಕ್ ಶೆಟ್ಟಿ ತನ್ನ ಬೈಕಿನಲ್ಲಿ ಲಡಾಕಿಗೆ ಏಕವ್ಯಕ್ತಿ ಸವಾರಿ ಆರಂಭಿಸಿದ್ದಾರೆ. ಇದೇ ವೇಳೆ ಅವರು ಪರಿಸರ ಸೌಂದರ್ಯ ಮತ್ತು ಕಣಿವೆಗಳ ವನ್ಯ ಜೀವನ ಮತ್ತು ಈ ದೃಶ್ಯಾವಳಿಯನ್ನು ಮ್ಯೂಸಿಕ್ ವೀಡಿಯೋ ತಯಾರಿಸುವ ಚಿಂತನೆ ನಡೆಸಿದ್ದಾರೆ. ನಂತರ ಇದನ್ನು ಶಾಂತಿ ರಾಯಭಾರಿ ಪರಿಸರ ಸಂರಕ್ಷಣಾವಾದಿ ಮತ್ತು ಗ್ರೇಮ್ಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜಿಗೆ ನೀಡಲಿದ್ದಾರೆ.

ಸಂಗೀತ ಪ್ರಿಯರೂ ಆದ ಪ್ರತೀಕ್ ಶೆಟ್ಟಿ, “ನಾನು ಪ್ರಯಾಣವನ್ನು ಜೂನ್ 6ಕ್ಕೆ ಆರಂಭಿಸಿದ್ದು, ಅಮೃತಸರ್, ಜಮ್ಮು, ಶ್ರೀನಗರ, ಕಾರ್ಗಿಲ್, ಲೆಹ್, ತುರ್ತುಕ್, ಹಂಡೆರ್, ಕೇಯ್ಲಾಂಗ್, ಮಣಲಿ ಹೀಗೆ ಸುಮಾರು 3500 ಕಿ ಮೀ ಕ್ರಮಿಸಲಿದ್ದೇನೆ. ಜಮ್ಮು ನಗರದಲ್ಲಿ 13 ಇತರ ಸವಾರಿಗರು ನನ್ನನ್ನು ಸೇರಿಕೊಳ್ಳಲಿದ್ದಾರೆ. ಜೂನ್ 23ಕ್ಕೆ ಪ್ರಯಾಣ ಕೊನೆಗೊಳ್ಳಲಿದೆ” ಎಂದು ವಿವರಿಸಿದ್ದಾರೆ.

ಪ್ರತೀಕ್ ಶೆಟ್ಟಿ ಚಿತ್ರ ನಿರ್ಮಾಪಕರಾಗಿ ಮತ್ತು ಎಡಿಟರಾಗಿ ಕೆಲಸ ಮಾಡುತ್ತಿದ್ದಾರೆ. ಲಡಾಕಿನಲ್ಲಿ ಇತ್ತೀಚೆಗೆ ಎಡಿಟ್ ಮಾಡಿದ ವಿಡಿಯೋ ತುಣುಕನ್ನು ಕಂಡು ಅವರು ಪ್ರೇರಿತರಾಗಿದ್ದರು. ಇಲ್ಲಿನ ಸೌಂದರ್ಯದ ಅನುಭವವನ್ನು ವೈಯಕ್ತಿಕವಾಗಿ ಕಾಣುವ ಕನಸು ಕಂಡರು. ಮಾತ್ರವಲ್ಲ ಈ ಕನಸನ್ನು ಇದೀಗ ಸಾಕಾರಗೊಳಿಸುತ್ತಿದ್ದಾರೆ. ಪ್ರಯಾಣದ ಒಟ್ಟು ವೆಚ್ಚ ಸುಮಾರು ರೂ 2 ಲಕ್ಷ. ಪ್ರಯಾಣದ ವೆಚ್ಚವನ್ನು ಗ್ರೇಮ್ಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಭರಿಸಿದ್ದಾರೆ ಎಂದು ಪ್ರತೀಕ್ ವಿವರಿಸಿದ್ದಾರೆ.