ಮತ್ತೆ ತೆರೆಮೇಲೆ ಒಂದಾಗಲಿರುವ ಬಚ್ಚನ್ಸ್

2010ರಲ್ಲಿ ಬಿಡುಗಡೆಯಾದ `ರಾವಣ್’ ಚಿತ್ರದ ನಂತರ ಮತ್ತೆ ತೆರೆಮೇಲೆ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಜೊತೆಯಾಗಿ ನಟಿಸುತ್ತಿದ್ದಾರೆ. ಗೌರಾಂಗ್ ಜೋಶಿ ನಿರ್ಮಾಣದ `ಹ್ಯಾಪಿ ಆನಿವರ್ಸರಿ’ ಚಿತ್ರದಲ್ಲಿ ಇವರು ಜೊತೆಯಾಗುತ್ತಿದ್ದು ಈಗಾಗಲೇ ಈ ಸಿನಿಮಾ ಪ್ರಹ್ಲಾದ್ ಕೆಕ್ಕಾರ್ ನಿರ್ದೇಶನದಲ್ಲಿ ಚಿತ್ರೀಕರಣಗೊಳ್ಳಬೇಕಿತ್ತು. ಆದರೆ ಅದು ಕಾರಣಾಂತರದಿಂದ ಸಾಧ್ಯವಾಗದೇ ಈಗ ಬೇರೊಬ್ಬರ ನಿರ್ದೇಶನದಲ್ಲಿ ಸಿನಿಮಾ ಕೆಲವೇ ತಿಂಗಳಲ್ಲಿ ಸೆಟ್ಟೇರಲಿದೆಯಂತೆ.

ಗೌರಾಂಗ್ ಈ ವಿಷಯವನ್ನು ಖಚಿತಪಡಿಸಿದ್ದು “ಎರಡ್ಮೂರು ಡೈರೆಕ್ಟರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಮುಂದೆ ಬಂದಿದ್ದರೂ ಯಾರನ್ನೂ ಫೈನಲೈಸ್ ಮಾಡಿಲ್ಲ. ಈ ಚಿತ್ರವನ್ನು ಬೆಸ್ಟ್ ಡೈರೆಕ್ಟರೇ ನಿರ್ದೇಶಿಸಲಿದ್ದಾರೆ” ಎಂದಿದ್ದಾರೆ. ಅಂದ ಹಾಗೆ ಈ ಸಿನಿಮಾದಲ್ಲಿ ಐಶ್ವರ್ಯಾ, ಅಭಿಷೇಕ್ ಜೊತೆ ಅಮಿತಾಭ್ ಬಚ್ಚನ್ ಸಹ ತೆರೆಹಂಚಿಕೊಳ್ಳಲಿದ್ದಾರೆ. ಈ ಸಿನಿಮಾ ದೊಡ್ಡ ಸ್ಕೇಲಿನಲ್ಲಿ ಚಿತ್ರೀಕರಣಗೊಳ್ಳಲಿದೆ ಎನ್ನುತ್ತಾರೆ ಗೌರಾಂಗ್. ಆದರೆ ಚಿತ್ರದ ಬಗ್ಗೆ ಉಳಿದ ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿಲ್ಲ. `ಗಜರಾರೇ..’ ಹಾಡಿನಲ್ಲಿ ಜೊತೆಯಾಗಿ ಡ್ಯಾನ್ಸ್ ಮಾಡಿ ಸಿನಿರಸಿಕರಿಗೆ ಸಕತ್ ಮನರಂಜನೆ ನೀಡಿದ್ದ ಈ ಬಚ್ಚನ್ ತ್ರಯರು ಈಗ ಮತ್ತೆ ಯಾವ ರೀತಿ ಮೋಡಿ ಮಾಡಲಿದ್ದಾರೆ ನೋಡಬೇಕಿದೆ.