ಭುಗಿಲೆದ್ದ ಭಿನ್ನಮತ ಮಧ್ಯೆ ಕಲಬುರ್ಗಿಯಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಸಮಿತಿ ಸಭೆ

ಈಶ್ವರಪ್ಪ ಎಂಬ ಹಗ್ಗ ಹರಿದುಬಿಟ್ಟ ಹೋರಿ ನಿಲ್ಲಿಸಲು ಸಾಧ್ಯವೇ ಎನ್ನುವುದೇ ಪ್ರಶ್ನೆ

ವಿಶೇಷ ವರದಿ

ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿಯೂರಪ್ಪ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪ ನಡುವಣ ಭಿನ್ನಮತದ ಕೋಳಿ ಜಗಳ ಜಲ್ಲಿಕಟ್ಟು ಹಂತಕ್ಕೆ ತಲುಪಿದ್ದು, ರಾಜ್ಯದ ಕರಾವಳಿಯ ಭಕ್ತ ಸಮುದಾಯದಲ್ಲಿ ನಿರಾಶೆಯ ಕಾರ್ಮೋಡ ಆವರಿಸಿದೆ.

ಇಬ್ಬರು ನಾಯಕರ ಭಿನಮ್ಮತದ ಬಹಿರಂಗ ಹೇಳಿಕಗಳು ತಾರಕಕ್ಕೇರಿದ್ದು, ಇದಕ್ಕೆ ರಾಜ್ಯದ ಬಿಜೆಪಿ ಮುಖಂಡರು ಕೂಡ ಪ್ರತಿಕ್ರಿಯೆ ನೀಡಿರುವುದು ಪಕ್ಷದ ಭಿನ್ನಮತ ಗಂಭೀರ ಸ್ವರೂಪ ಪಡೆದುಕೊಂಡಿರುವುದನ್ನು ಸ್ಪಷ್ಟಪಡಿಸಿದೆ. ಈ ಭಿನ್ನಮತಗಳ ನಡುವೆಯೇ ಶನಿವಾರ ಕಲಬುರ್ಗಿಯಲ್ಲಿ ಬಿಜೆಪಿಯ ರಾಜಯ ಕಾರ್ಯಕಾರಣಿ ಸಭೆ ನಡೆಯಲಿದ್ದು, ಭಿನ್ನಮತದ ವಿಚಾರಗಳಿಗೆ ಇನ್ನಷ್ಟು ತುಪ್ಪ ಸುರಿಯುವ ಕಾರ್ಯಗಳು ನಡೆಯುವ ಸಾಧ್ಯತೆ ಇದೆ.

ರಾಜ್ಯ ಬಿಜೆಪಿಯಲ್ಲಿ ಮೊದಲಿನಿಂದಲೇ ಇದ್ದ ಯಡ್ಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಗುಂಪುಗಳ ನಡುವೆ ಹಗ್ಗ ಜಗ್ಗಾಟ ಇದ್ದರೂ ಎಂದೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಐದು ವರ್ಷದಲ್ಲಿ ಮೂರು ಮುಖ್ಯಮಂತಿ,್ರ ಹಲವಾರು ಮಂದಿ ಮಾಜಿ ಮಂತ್ರಿಗಳಾದ ಅನಂತರ ಇಂತಹ ಭಿನ್ನಮತೀಯ ಗುಂಪುಗಳ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಅನಂತಕುಮಾರ್ ಮತ್ತು ಯಡ್ಡಿಯೂರಪ್ಪ ಎಂಬಿಬ್ಬರು ಶಕ್ತಿ ಕೇಂದ್ರಗಳು ಮಾತ್ರ ಇದ್ದ ಸ್ಥಳದಲ್ಲಿ ಈಗ ಶ್ರೀರಾಮುಲು ನೇತೃತ್ವದ ಜನಾರ್ದನ ರೆಡ್ಡಿ, ಚಿಕ್ಕಮಗಳೂರಿನ ಸಿ ಟಿ ರವಿ, ಬೆಂಗಳೂರಿನ ಆರ್ ಅಶೋಕ್, ಶಿವಮೊಗ್ಗದ ಈಶ್ವರಪ್ಪ, ಹುಬ್ಬಳ್ಳಿಯ ಜಗದೀಶ ಶೆಟ್ಟರ್ ತಮ್ಮದೇ ಆದ ಶಕ್ತಿ ಕೇಂದ್ರಗಳನ್ನು ನಿರ್ಮಿಸಿಕೊಂಡಿದ್ದಾರೆ.

ಈಶ್ವರಪ್ಪ ಅವರದೀಗ ಬಿಜೆಪಿಯಲ್ಲಿ ಅಳಿವು ಉಳಿವಿನ ಪ್ರಶ್ನೆ. ಶಿವಮೊಗ್ಗ ಜಿಲ್ಲೆಯಲ್ಲಿ ತನಗೊಂದು ವಿಧಾನಸಭಾ ಚುನಾವಣಾ ಟಿಕೇಟ್,  ರಾಜ್ಯ ಬಿಜೆಪಿಯಲ್ಲಿ ತನಗೊಂದು ಸ್ಥಾನಮಾನ ಉಳಿಸಿಕೊಳ್ಳಲು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹುಟ್ಟು ಹಾಕಿದ್ದಾರೆ. ಏಕೆಂದರೆ, ಈಶ್ವರಪ್ಪ ಅವರ ವಿರುದ್ಧ  ಕೆಜಿಪಿ ಪರವಾಗಿ ಸ್ಪರ್ಧಿಸಿದ ವ್ಯಕ್ತಿಯೇ ಈಗ ಶಿವಮೊಗ್ಗ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ.

ಅತೃಪ್ತ ಶಾಸಕರು ಮತ್ತು ಮುಖಂಡರೊಂದಿಗೆ ಸಂದಾನ ಮಾತುಕತೆ ನಡೆಸಲು ಯಡ್ಡಿಯೂರಪ್ಪ ನಿನ್ನೆ ಮಾಡಿದ ಪ್ರಯತ್ನ ವಿಫಲವಾಗಿದೆ. ಅದಕ್ಕೂ ಮುನ್ನ, ರಾಜ್ಯ ಬಿಜೆಪಿಯಲ್ಲಿ ಗಂಭೀರ ಭಿನ್ನಮತ ಸಮಸ್ಯೆ ಇದೆ ಎಂಬುದನ್ನು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಸದಾನಂದ ಗೌಡ ಒಪ್ಪಿಕೊಂಡಿದ್ದರು. ಅನಂತರ ಬಹಿರಂಗ ಹೇಳಿಕೆ ನೀಡಿರುವ ಮಾಜಿ ಸಚಿವ ಬಳ್ಳಾರಿಯ ಶ್ರೀರಾಮುಲು ಅವರು ಈಶ್ವರಪ್ಪ ಮತ್ತು ಯಡ್ಡಿಯೂರಪ್ಪ ಭಿನ್ನಮತದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

“ಈಶ್ವರಪ್ಪ ಅವರು ಸುಮ್ಮನಾಗಬೇಕು ಮತ್ತು ಯಡ್ಡಿಯೂರಪ್ಪ ಬಿಜೆಪಿಯ ಪ್ರಶ್ನಾತೀತ ನಾಯಕ” ಎನ್ನುವ ರೀತಿಯಲ್ಲಿ ಶ್ರೀರಾಮುಲು ಮಾತನಾಡಿರುವುದು ಯಡ್ಡಿಯೂರಪ್ಪ ಅವರ ಕೈ ಮೇಲಾಗುವುದು ಸೂಚನೆ.

ದಿನೇ ದಿನೇ ಯಡ್ಡಿಯೂರಪ್ಪ ಹಾಗೂ ಈಶ್ವರಪ್ಪ ನಡುವೆ ಪರಸ್ಪರ ಟೀಕೆ ಟಿಪ್ಪಣಿಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕಾರಿಣಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ವಿಚಾರವಾಗಿದೆ.

“ಯಡ್ಡಿಯೂರಪ್ಪ ಅವರ ಮುಖ ನೋಡಿ ಯಾರೂ ಮತ ಹಾಕಲ್ಲ. ಪಕ್ಷವನ್ನು ನೋಡಿ ಮತ ಹಾಕುತ್ತಾರೆ” ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಯಡ್ಡಿಯೂರಪ್ಪ ಬಣದಿಂದ ತೀವ್ರ ಆಕ್ಷೇಪಗಳು ವ್ಯಕ್ತವಾಗಿದೆ. ಶಿವಮೊಗ್ಗದವರೇ ಆದ ಆಯನೂರು ಮಂಜುನಾಥ್ ಈಶ್ವರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಯಣ್ಣ ಬ್ರಿಗೇಡಿನ ಅಧ್ಯಕ್ಷ, ಮಾಜಿ ಸಂಸದ ವಿರುಪಾಕ್ಷಪ್ಪ “ಬಿಜೆಪಿ ಪರ ಬ್ರಿಗೇಡ್ ಕೆಲಸ ಮಾಡುವುದಿಲ್ಲ” ಎಂಬಲ್ಲಿವರೆಗೆ ಗುದ್ದಾಟ ನಡೆದಿದೆ.

ರಾಜ್ಯ ಕರಾವಳಿಯಲ್ಲಿ ಯಡ್ಡಿಯೂರಪ್ಪ ಬಗ್ಗೆ ವಿಭಿನ್ನ ನಿಲುವುಗಳು ಪಕ್ಷದ ವಲಯದಲ್ಲಿದ್ದು, ಅದೇ ರೀತಿ ಗುಂಪುಗಳು ಪ್ರವರ್ತಿಸುತ್ತಿವೆ. ಕರಾವಳಿಯ ಶಕ್ತಿ ಕೇಂದ್ರಗಳು ಕೂಡ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಒಂದೆಡೆ ನೋಟು ಅಮಾನ್ಯದಿಂದ ತತ್ತರಿಸಿರುವ ಭಕ್ತ ಸಮೂಹ ಮತ್ತೊಂದೆಡೆ ಇವರಿಬ್ಬರ ಬೀದಿ ಬದಿ ಭಿನ್ನಮತ ಭ್ರಮನಿರಸನ ಮೂಡಿಸಿದೆ.

ಈಶ್ವರಪ್ಪ ಎಂಬ ಹಗ್ಗ ಹರಿದು ಬಿಟ್ಟ ಹೋರಿಯನ್ನು ಬಿಜೆಪಿಯ ಕಟ್ಟಾಳು ಜಗ್ಗಿ ನಿಲ್ಲಿಸಲು ಪ್ರಯತ್ನಿಸುವರೇ ಎಂಬುದನ್ನು ಕಾದು ನೋಡಬೇಕಾಗಿದೆ.