`ಸಮಸ್ತ ಮಾನವ ಕುಲಕ್ಕೆ ನ್ಯಾಯ ದೊರಕಿಸಿಕೊಟ್ಟವರು ಅಂಬೇಡ್ಕರ್’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿವಸದ ಅಂಗವಾಗಿ ಮಂಗಳೂರಿನ ಪುರಭವನದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಸಮಾಜದಲ್ಲಿನ ಕೆಳಸ್ಥರದ ಹಾಗೂ ಸಮಾಜದ ಮುಖ್ಯವಾಹಿನಿಂದ ದೂರ ಉಳಿದ ಮಂದಿಗೆ ಧ್ವನಿಯಾದ ಅಂಬೇಡ್ಕರ್ ಅವರ ವಿಚಾರಧಾರೆಗಳು ಎಂದಿಗೂ ಪ್ರಸ್ತುತವಾಗಿದೆ. ದೇಶದ ಸಂವಿಧಾನ ರಚನೆಯ ಮೂಲಕ ಮಾನವ ಕುಲಕ್ಕೆ ನ್ಯಾಯವನ್ನು ದೊರಕಿಸಿಕೊಟ್ಟಿದ್ದಾರೆ. ಇಂಥವರನ್ನು ನಾವು ಪ್ರತಿನಿತ್ಯ ಸ್ಮರಿಸಬೇಕು ಎಂದರು.

ನಾವೆಲ್ಲರೂ ತುಳಿತಕ್ಕೆ ಒಳಗಾದ ಜನರ ನೋವುಗಳನ್ನು ಅರ್ಥ ಮಾಡಿಕೊಳ್ಳುವ ಕೆಲಸವನ್ನು ಮಾಡಬೇಕು. ನೋವನ್ನು ಅನುಭವಿಸಿದರಷ್ಟೇ ನೋವು ನಮಗೆ ಗೊತ್ತಾಗುತ್ತದೆ. ಆದರೆ ದಲಿತರು ದಿನಾಲೂ ನೋವನ್ನೇ ಉಂಡು ಬದುಕುತ್ತಿರುವವರು ಎಂದು ಸಚಿವರು ಅಭಿಪ್ರಾಯಪಟ್ಟರು.