ಹೊಂಡಾಗುಂಡಿ ಆಗರವಾಗಿದೆ ಅಂಬಾಗಿಲು-ತಂಗದಗುಡಿ ರಸ್ತೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಇಲ್ಲಿನ ಅಂಬಾಗಿಲು ಮತ್ತು ತಂಗದಗುಡಿ ಮಧ್ಯೆ ರಸ್ತೆಯಲ್ಲಿ ಈಗ ಜೀವಕ್ಕೆ ಅಪಾಯ ತಂದೊಡ್ಡುವ ಆಳವಾದ ಹೊಂಡಗಳು ಸೃಷ್ಟಿಯಾಗಿವೆ. ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ರಸ್ತೆ ಪರಿಶೀಲನೆ ನಡೆಸಿದರೆ ಯಾವುದೇ ಪ್ರಯೋಜನವಿಲ್ಲ. ಬದಲಾಗಿ, ಉಡುಪಿ ನಗರಸಭೆಯೇ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕಿದೆ.

ಉಡುಪಿಯಲ್ಲಿ ತೆರಿಗೆ ಪಾವತಿಸುವಿಕೆಗೆ ಯಾವುದೇ ಮೌಲ್ಯ ಉಳಿದಿಲ್ಲ. ಮಳೆ ಕಡಿಮೆಯಾದರೂ ನಗರಸಭೆ ರಸ್ತೆ ದುರಸ್ತಿ ಮಾಡುವ ಗೋಜಿನಲ್ಲಿಲ್ಲ ಎಂದ ಉಡುಪಿ ನಿವಾಸಿಯೊಬ್ಬರು, “ದುರಸ್ತಿಯಾದ ರಸ್ತೆ ಕೆಲವೇ ತಿಂಗಳೊಳಗೆ ಕಿತ್ತು ಹೋಗಲು ಕಾರಣವೇನೆಂಬುದರ ಬಗ್ಗೆ ತನಿಖೆಯಾಗಬೇಕು. ಮಳೆ ನೀರು ರಸ್ತೆ ಮೇಲೆ ಹರಿಯುತ್ತಲೇ ಕಳಪೆ ಗುಣಮಟ್ಟದ ಕಾಮಗಾರಿಯ ಬಣ್ಣ ಬಯಲಾಗಿದೆ” ಎಂದರು.

ಜುಲೈ ತಿಂಗಳಲ್ಲಿ ಸ್ಥಳೀಯ ನಿವಾಸಿಗರು ರಸ್ತೆ ಹೊಂಡಗಳಲ್ಲಿ ಗಿಡ ನೆಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರೂ ಏನೂ ಪ್ರಯೋಜನವಾಗಿಲ್ಲ.

ನಗರಸಭೆಯ ಮಹಾಸಭೆಯಲ್ಲಿ ರಸ್ತೆ ದುರಸ್ತಿ ವಿಷಯ ಪ್ರಸ್ತಾವಿಸಿದ್ದ ವೇಳೆ ಕಾಮಗಾರಿಗೆ ಹಣಕಾಸಿನ ಕೊರತೆ ಕಾರಣವೆಂಬ ಉತ್ತರ ಸಿಕ್ಕಿತ್ತು. ತಂಗದಗುಡಿ ಹತ್ತಿರದ ರಸ್ತೆ ಕಾಂಕ್ರೀಟೀಕರಣ ನಡೆಸುವುದಾಗಿ ಇಂಜಿನಿಯರುಗಳು ಭರವಸೆ ನೀಡಿದ್ದರೂ ಅನುದಾನ ಲಭ್ಯವಿಲ್ಲ ಎಂದು ಕರಂಬಳ್ಳಿ ವಾರ್ಡಿನ ಕೌನ್ಸಿಲರ್ ಸೆಲಿನ್ ಕರ್ಕಡ ಹೇಳಿದರು.