ಮೊಬೈಲ್ ಕೊಡುವುದಾಗಿ ವಂಚಿಸಿದ ಅಮೇಜಾನ್ ಕಂಪೆನಿಗೆ ದಂಡ

ಕಾರವಾರ : ಮೊಬೈಲ್ ನೀಡುವುದಾಗಿ ನಂಬಿಸಿ ಮುಂಗಡ ಹಣ ಪಡೆದು ಮೋಸ ಮಾಡಲು ಯತ್ನಿಸಿದ ಅಮೇಜಾನ್ ಕಂಪನಿಗೆ ಉತ್ತರ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯ 11,500 ರೂ ದಂಡ ವಿಧಿಸಿದೆ.

ಅಮೇಜಾನ್ ವೆಬ್ ಸೈಟಿನಲ್ಲಿ 7,500 ರೂ ಬೆಲೆಯ ಕೂಲ್ ಪ್ಯಾಡ್ ನೋಟ್ 3 ಮೊಬೈಲನ್ನು 5599 ರೂಪಾಯಿಗೆ ನೀಡುವದಾಗಿ ಅಮೇಜಾನ್ ಪ್ರಕಟಿಸಿತ್ತು. 2016 ಜುಲೈ 20ರಂದು ಈ ಜಾಹಿರಾತನ್ನು ಗಮನಿಸಿದ್ದ  ಅಚ್ಯುತಕುಮಾರ ಎನ್ನುವವರು ಮೊಬೈಲ್ ಬುಕ್ ಮಾಡಿದ್ದರು. ಇದಕ್ಕಾಗಿ ಮುಂಗಡ ಹಣವನ್ನು ಪಾವತಿಸಿದ್ದರು. ಅಗಷ್ಟ 2ರ ಒಳಗೆ ಮೊಬೈಲ್ ತಲುಪಿಸುವುದಾಗಿ ಅಮೇಜಾನ್ ಕಂಪನಿ ತಿಳಿಸಿತ್ತು. ಆದರೆ ಕಂಪನಿಯು ಸಮಯಕ್ಕೆ ಸರಿಯಾಗಿ ಮೊಬೈಲ್ ತಲುಪಿಸಿರಲಿಲ್ಲ. ಇದಾದ ನಂತರ ಹಣ ಮರಳಿಸುವದಕ್ಕೂ ಕಂಪನಿ ನಿರಾಕರಿಸಿತ್ತು. ಈ ಬಗ್ಗೆ ಕಂಪನಿ ಸಹಾಯವಾಣಿಗೆ ಕರೆ ಮಾಡಿದರೆ ಹಾರಿಕೆ ಉತ್ತರಗಳು ಸಾಮಾನ್ಯವಾಗಿದ್ದವು. ಮುಂಗಡವಾಗಿ ನೀಡಿದ ಹಣ ನೀಡುವುದಕ್ಕೂ ನಿರಾಕರಿಸಲಾಗಿತ್ತು. ಇದರಿಂದ ಅಚ್ಯುತ್‍ಕುಮಾರ್ ಬೇಸತ್ತು ಗ್ರಾಹಕ ವೇದಿಕೆಗೆ ದೂರು ಸಲ್ಲಿಸಿದ್ದರು.  ದೂರನ್ನು ದಾಖಲಿಸಿಕೊಂಡು ಎರಡು ಕಡೆಯವರ ವಾದ ಆಲಿಸಿದ ಗ್ರಾಹಕ ನ್ಯಾಯಾಲಯ ಅಮೇಜಾನ್ ಕಂಪನಿಗೆ ದಂಡ ವಿಧಿಸಿದೆ. ತಿಂಗಳ ಒಳಗೆ ಪರಿಹಾರ ಮೊತ್ತವನ್ನು ದೂರುದಾರರಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.