ಹವ್ಯಾಸಿ ಯಕ್ಷಗಾನ ಕಲಾವಿದ ರಸ್ತೆ ಅಪಘಾತದಲ್ಲಿ ಸಾವು

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಮಾಜಿ ಗ್ರಾಮ ಪಂ ಅಧ್ಯಕ್ಷ, ಹವ್ಯಾಸಿ ಯಕ್ಷಗಾನ ಕಲಾವಿದ ಅಮೈ ಸಂಜೀವ ನಾಯಕ್ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಪುಣಚ ಗ್ರಾಮದ ಆಜೇರು ಮಹಿಷಮರ್ಧಿನಿ ದೇವಸ್ಥಾನದಲ್ಲಿ ಭಾನುವಾರ ನಡೆಯುತ್ತಿದ್ದ ಯಕ್ಷಗಾನದಲ್ಲಿ ಕಲಾವಿದರಾಗಿ ಭಾಗವಹಿಸುಲು ತೆರಳುತ್ತಿದ್ದ ಸಂದರ್ಭ ನಾಯಕ್ ಮೃತಪಟ್ಟಿದ್ದಾರೆ. ಕೇಪು ಗ್ರಾಮದ ಅಮೈ ನಿವಾಸಿ ಸಂಜೀವ ನಾಯಕ್ (56) ಭಾನುವಾರ ರಾತ್ರಿ ಬೈಕಿನಲ್ಲಿ ತನ್ನ ಮನೆಯಿಂದ ತೋರಣಕಟ್ಟೆ ರಸ್ತೆ ಮೂಲಕ ಆಜೇರುಗೆ ಹೋಗಬೇಕಿತ್ತು. ಮಲೆತ್ತಡ್ಕ ಎಂಬಲ್ಲಿನ ತೀರಾ ಅಪಾಯಕಾರಿ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿದ್ದ ಬೈಕ್ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಗಂಭೀರ ಗಾಯಗೊಂಡಿದ್ದ ಸವಾರ ನಾಯಕ್ ಮೈಮೇಲೆ ಬೈಕ್ ಬಿದ್ದ ಕಾರಣ ಮೇಲೇಳಲಾಗದೇ ಅಲ್ಲೇ ಬಿದ್ದುಕೊಂಡಿದ್ದರೆನ್ನಲಾಗಿದೆ. ವಾಹನ ಸಂಚಾರ ವಿರಳವಾಗಿರುವ ಮಲೆತ್ತಡ್ಕ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಹೋಗುತ್ತಿದ್ದ ಸಾರ್ವಜನಿಕರೊಬ್ಬರು ಬೈಕ್ ಅಪಘಾತ ಗಮನಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ನಾಯಕ್ ರಕ್ತಸ್ರಾವಕ್ಕೊಳಗಾದ ಕಾರಣ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. 2000-2005ರಲ್ಲಿ ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ನಾಯಕ್ ಬಳಿಕ 2010-2015ರಲ್ಲಿ ಪಂ ಸದಸ್ಯರಾಗಿ ಚುನಾಯಿತರಾಗಿದ್ದರು. ಕೇಪು ವಲಯ ಕಾಂಗ್ರೆಸ್ ಬೂತ್ ಅಧ್ಯಕ್ಷ, ತೆಂಗುಬೆಳೆಗಾರರ ಸಂಘದ ಕೋಶಾಧಿಕಾರಿ, ಕಲ್ಲಂಗಳ ಪ್ರೌಢ ಶಾಲಾ ಅಭಿವೃಧಿ ಸದಸ್ಯ, ಅಮೈ ಶಾಲೆಯ `70ರ ಸಂಭ್ರಮ’ದ ಕಾರ್ಯಕಾರಿ ಸಮಿತಿಯ ಸದಸ್ಯರಲ್ಲದೇ ಇನ್ನೂ ಹಲವಾರು ಸಂಘಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ನಾಯಕ್ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.