“ನಾನೇನು ಕಳ್ಳಿಯಲ್ಲ” ಎಂದು ಪೊಲೀಸರಿಗೆ ಹೇಳಿದ ಶಶಿಕಲಾ

ಬೆಂಗಳೂರು : ತಮಿಳುನಾಡಿನ ಮುಖ್ಯಮಂತ್ರಿಯಾಗುವ ವಿ ಕೆ ಶಶಿಕಲಾ ಅವರ ಎಲ್ಲಾ ಕನಸುಗಳು ನುಚ್ಚು ನೂರಾಗಿ ಅವರೀಗ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಮುಂದಿನ ನಾಲ್ಕು ವರ್ಷಗಳನ್ನು ಕಳೆಯುವಂತಾಗಿದೆ. ಬುಧವಾರ ಅವರು ಪರಪ್ಪನ ಅಗ್ರಹಾರಕ್ಕೆ ಆಗಮಿಸಿದಾಗ ಜೈಲಿನ ತನಕ ಹೋಗಲು ಪೊಲೀಸ್ ಜೀಪನ್ನೇರಲು ಒಪ್ಪಲಿಲ್ಲ. ಎಷ್ಟೇ ದೂರವಾದರೂ ನಡೆದೇ ಹೋಗುವುದಾಗಿ ಹೇಳಿದರು. ಸಾಮಾನ್ಯ ಕೈದಿಗಳಂತೆ ಪೊಲೀಸ್ ಜೀಪ್ ಹತ್ತುವುದು ಅವರಿಗೆ ಬೇಕಾಗಿರಲಿಲ್ಲ. “ನಾನೇನು ಕಳ್ಳಿಯಲ್ಲ.  ನಾನು ಪೊಲೀಸ್ ಜೀಪಿನಲ್ಲಿ ಕೂರುವುದಿಲ್ಲ. ನಾನು ಜೈಲಿನ ಸೆಲ್ಲಿನಲ್ಲಿ  ಕುಳಿತುಕೊಳ್ಳುತ್ತೇನೆ. ಆದರೆ  ತೆರೆದ ಜೀಪಿನಲ್ಲಿ ಅಪರಾಧಿಯಂತೆ ಕುಳಿತುಕೊಳ್ಳುವುದಿಲ್ಲ” ಎಂದು ಶಶಿಕಲಾ ಪೊಲೀಸರಿಗೆ ಸ್ಪಷ್ಟಪಡಿಸಿದ್ದರೆಂದು ಅವರ ಹತ್ತಿರದಲ್ಲಿಯೇ ಆ ಸಂದರ್ಭ ಇದ್ದವರೊಬ್ಬರು ಬಹಿರಂಗಪಡಿಸಿದ್ದಾರೆ.

ಶಶಿಕಲಾ ಮೊಗ ನೋಡಿದವರಿಗೆ ಅಲ್ಲಿ ಸಿಟ್ಟು ಹಾಗೂ ಸಿಡಿಮಿಡಿಯಿರುವುದು ಸ್ಪಷ್ಟವಾಗಿತ್ತು.

sasikala2 sasikala1

ಹಿಂದೆ ಜಯಲಲಿತಾರೊಂದಿಗೆ ಜೈಲಿನಲ್ಲಿದ್ದಾಗ ತಮಗೆ ದೊರೆತಿದ್ದ ಎಲ್ಲಾ ಸೌಕರ್ಯಗಳೂ ಈಗ ದೊರೆಯುವುದೆಂದು ಶಶಿಕಲಾ ನಂಬಿದ್ದರು. ಜಯಲಲಿತಾ ಆಗ ಮುಖ್ಯಮಂತ್ರಿಯಾಗಿದ್ದುದರಿಂದ ಹಾಗೂ ಅವರಿಗೆ ಆರೋಗ್ಯ ಸಮಸ್ಯೆಯಿದ್ದುದರಿಂದ ಅವರಿಗೆ `ಎ’ ದರ್ಜೆಯ ಸೌಕರ್ಯಗಳನ್ನು ಒದಗಿಸಲಾಗಿತ್ತು. ಆದರೆ ಶಶಿಕಲಾ ಅವರನ್ನು ವಿಐಪಿ ಕೈದಿಯೆಂದು ಪರಿಗಣಿಸಲು ಕೋರ್ಟ್ ನಿರಾಕರಿಸಿದೆ.

ಗುರುವಾರದಂದು ರಾತ್ರಿಯಿಡೀ ಶಶಿಕಲಾ ಮಲಗಿರಲಿಲ್ಲವೆÀಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಕೆಗೆ ಅರ್ಧ ಮುಚ್ಚಲ್ಪಟ್ಟಿರುವ ವಾಶ್ ರೂಂ ಇರುವ 80 ಚದರ ಅಡಿಯ ಸೆಲ್ ಒದಗಿಸಲಾಗಿತ್ತು. ಆಕೆಯ ಜತೆ ಆಕೆಯ ನಾದಿನಿ ಇಳವರಸಿಯನ್ನೂ ಇರಿಸಲಾಗಿದೆ. ಅಪರೂಪಕ್ಕೊಮ್ಮೆ ಇಳವರಸಿಯೊಡನೆ ಮಾತನಾಡಿದ ಹೊರತು ಆಕೆ ಯಾರೊಂದಿಗೂ ಮಾತನಾಡಲಿಲ್ಲ.

ಆಕೆಗೆ ಒಂದು ಸಣ್ಣ ಮಂಚ ಒದಗಿಸಲಾಗಿತ್ತು ಹಾಗೂ ಬಿಳಿ ಸೀರೆಯೊಂದನ್ನು ನೀಡಲಾಗಿತ್ತು. ಆದರೆ ಅದೇ ಬಣ್ಣದ ರವಿಕೆ ಇಲ್ಲವೆಂಬ ಕಾರಣವೊಡ್ಡಿ ಶಶಿಕಲಾ ಆ ಸೀರೆಯನ್ನು ಉಟ್ಟಿರಲಿಲ್ಲ. ಗುರುವಾರ ಮುಂಜಾವಿನ ತನಕ ಎಚ್ಚರದಿಂದಿದ್ದ ಆಕೆ ನಂತರ  ಕೆಲ ಗಂಟೆಗಳ ಕಾಲ ನಿದ್ದೆ ಮಾಡಿದ್ದರು. ಗುರುವಾರ ಬೆಳಿಗ್ಗೆ ಪುಳಿಯೋಗರೆ ಮತ್ತು ಕಾಫಿ ಸೇವಿಸಿದ್ದರು.

ಪಕ್ಷದ ಅನೇಕರು ಆಕೆಯೊಡನೆ ಮಾತನಾಡಲು ಪ್ರಯತ್ನ ಪಟ್ಟರೂ ಆಕೆ ಯಾರನ್ನೂ ಭೇಟಿಯಾಗಿಲ್ಲ.

ಶಶಿಗೆ `ಹಾಯ್’ ಹೇಳಿದ ಸಯನೈಡ್ ಮಲ್ಲಿಕಾ

ಸಯನೈಡ್ ನೀಡಿ ಮಹಿಳೆಯರನ್ನು ದೇವಸ್ಥಾನಗಳಲ್ಲಿ ಕೊಂದು ಅವರ ಚಿನ್ನಾಭರಣಗಳೊಂದಿಗೆ ಪರಾರಿಯಾಗುತ್ತಿದ್ದ ಕುಖ್ಯಾತ ಕೊಲೆಗಾರ್ತಿ ಸಯನೈಡ್ ಮಲ್ಲಿಕಾ ಶಶಿಕಲಾ ಪಕ್ಕದ  ಸೆಲ್ಲಿನಲ್ಲಿದ್ದು ಆಕೆ ಶಶಿಕಲಾ ಸೆಲ್ಲಿಗೆ ಭೇಟಿ ನೀಡಿ ಆಕೆಯೊಂದಿಗೆ ಮಾತನಾಡಲು ಯತ್ನಿಸಿದ್ದರೂ ಶಶಿಕಲಾ ಗಪ್ ಚುಪ್ ಆಗಿದ್ದರು.  ಎರಡನೇ ಬಾರಿ ಮಲ್ಲಿಕಾ ಪ್ರಯತ್ನಿಸಿದಾಗಲೂ ಶಶಿಕಲಾ ಮಾತನಾಡಲಿಲ್ಲ, ಬದಲಾಗಿ ಆಕೆಯನ್ನು ನೋಡಿ ನಕ್ಕರು.