ನಾನು ಕೆಲಸದವರಿಗಿಂತಲೂ ಕಡೆಯೆ?

ಪ್ರ : ನಮ್ಮ ತಂದೆ, ತಾಯಿಗೆ ನಾವು ಮೂರು ಜನ ಹೆಣ್ಣುಮಕ್ಕಳಾದರೂ, ಅಪ್ಪ ಕಾಲೇಜೊಂದರಲ್ಲಿ ಜವಾನನ ಕೆಲಸ ಮಾಡುತ್ತಿದ್ದರೂ ನಮ್ಮನ್ನು ತಕ್ಕಮಟ್ಟಿಗೆ ಒಳ್ಳೆಯ ರೀತಿಯಲ್ಲಿಯೇ ಬೆಳೆಸಿದ್ದರು. ನೋಡಲು ಸುಂದರಳಾಗಿದ್ದ ನನ್ನನ್ನು ನಮ್ಮ ತಂದೆ ಕೆಲಸ ಮಾಡುತ್ತಿದ್ದ ಕಾಲೇಜಿನ ಯುವ ಲೆಕ್ಚರರ್ ಒಬ್ಬರು ಕಾಲೇಜಿನ ಪಂಕ್ಷನ್ನಿನಲ್ಲಿ ನೋಡಿ ಇಷ್ಟಪಟ್ಟು ಮದುವೆಯಾಗಲು ಮುಂದೆ ಬಂದರು. ಸರಳ ರೀತಿಯಲ್ಲಿ ನಮ್ಮ ಮದುವೆಯೂ ನೆರವೇರಿತು. ಆದರೆ ನನ್ನ ಅತ್ತೆ ತುಂಬಾ ದರ್ಪದವರು. ಅವರಿಗೆ ಬಡಕುಟುಂಬದಿಂದ ಬಂದ ನಾನೆಂದರೆ ತಾತ್ಸಾರ. ನನ್ನ ಮದುವೆಯವರೆಗೆ ಆ ಮನೆಯಲ್ಲಿ ಕೆಲಸದವರಿದ್ದರು. ನಮ್ಮ ಮದುವೆಯಾದ ಸ್ವಲ್ಪ ಸಮಯದಲ್ಲಿಯೇ ಕೆಲಸದವರನ್ನು ಏನೋ ನೆಪ ಹೇಳಿ ಬರದಿರುವಂತೆ ನೋಡಿಕೊಂಡರು. ಈಗ ಮನೆಕೆಲಸವೆಲ್ಲ ನನ್ನದೇ. ನಮ್ಮವರ ತಂಗಿ ಕಾಲೇಜಿಗೆ ಹೋಗುವುದರಿಂದ ಏನೂ ಕೆಲಸ ಮಾಡುವುದಿಲ್ಲ. ಎಲ್ಲರ ಬಟ್ಟೆ ಇಸ್ತ್ರಿ ಮಾಡುವುದರಿಂದ ಹಿಡಿದು ಅಡುಗೆಯವರೆಗೆ ಎಲ್ಲ ಕೆಲಸವನ್ನೂ ನಿಭಾಯಿಸಬೇಕು. ಅದೂ ಅಲ್ಲದೆ ಪ್ರತೀ ದಿನ ನಾನು ಹಿಂದಿನ ದಿನ ಮಾಡಿದ ಅಡುಗೆಯಲ್ಲಿ ಉಳಿದದ್ದನ್ನೇ ತಿನ್ನಬೇಕು. ನಾನೀಗ ಗರ್ಭಿಣಿ ಬೇರೆ. ನನ್ನ ಗಂಡ ಕಾಲೇಜು ಮುಗಿದ ನಂತರ ಟ್ಯೂಷನ್ನೂ ಹೇಳಿ ಮನೆಗೆ ತಡವಾಗಿ ಬರುವುದರಿಂದ ಅವರಿಗೆ ಮನೆಯ ಒಳಗಿನ ಪರಿಸ್ಥಿತಿ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ಅವರ ಎದುರಿಗೆ ಅತ್ತೆ ಮತ್ತು ನಾದಿನಿ ನನ್ನನ್ನು ಚೆನ್ನಾಗಿಯೇ ಮಾತಾಡಿಸುತ್ತಾರೆ. ನಮ್ಮವರ ಹತ್ತಿರ ಹೇಳೋಣ ಅಂದರೂ ನಾನು ಚಾಡಿ ಹೇಳಿಕೊಟ್ಟೆ ಅಂತ ಮತ್ತಷ್ಟು ನನ್ನ ಮೇಲೆ ತಾಯಿ-ಮಗಳು ಉರಿದು ಬೀಳಬಹುದು ಅನ್ನುವ ಹೆದರಿಕೆ. ಅತ್ತೆ ಬೇರೆಯವರ ಹತ್ತಿರ `ಜವಾನನ ಮಗಳಿಗೆ ರಾಜಾತಿಥ್ಯ ಬೇಕೇ’ ಅಂತ ಹೇಳಿ ಹಂಗಿಸಿದ್ದೂ ನನ್ನ ಕಿವಿಗೆ ಬಿದ್ದಿದೆ. ನನಗೆ ಒಳ್ಳೆಯ ರೀತಿಯಲ್ಲಿ ಬದುಕುವ ಹಕ್ಕಿಲ್ಲವೇ? ಏನು ಮಾಡಬೇಕೆಂದು ಸಲಹೆ ನೀಡುತ್ತೀರಿ?

: ನೋಡಮ್ಮಾ ಬಗ್ಗಿದಷ್ಟೂ ಗುದ್ದುವವರು ಜಾಸ್ತಿ. ನೀವೇನೂ ಆ ಮನೆಯಲ್ಲಿ ಎರಡನೇ ದರ್ಜೆಯ ಸದಸ್ಯರಲ್ಲ. ಉಳಿದವರಿಗೆ ಆ ಮನೆಯಲ್ಲಿ ಎಷ್ಟು ಹಕ್ಕು, ಬಾಧ್ಯತೆ ಇದೆಯೋ ಅಷ್ಟೇ ನಿಮಗೂ ಇದೆ. ನೀವು ಬಡಕುಟುಂಬದಿಂದ ಬಂದವಳು ಅಂತ ಆತ್ಮಗೌರವವೇ ಇರದ ರೀತಿಯಲ್ಲಿ ಅಲ್ಲಿ ಬದುಕಬೇಕಿಲ್ಲ. ಅದೂ ಅಲ್ಲದೇ ನೀವೀಗ ಗರ್ಭಿಣಿಯೂ ಆಗಿರುವುದರಿಂದ ಎಲ್ಲರಿಗಿಂತ ಹೆಚ್ಚು ಆಸ್ಥೆ, ಆರೈಕೆ ನಿಮಗೆ ಬೇಕು. ಪೌಷ್ಟಿಕಾಂಶ ಇರುವ ಆಹಾರವೂ ನೀವೀಗ ಮಗುವಿಗೋಸ್ಕರವಾದರೂ ತೆಗೆದುಕೊಳ್ಳಲೇಬೇಕು. ನಿಮ್ಮನ್ನು ಬಯಸಿ ಮದುವೆಯಾದ ವಿದ್ಯಾವಂತ ನಿಮ್ಮ ಆ ಗಂಡನಿಗೆ ನಿಮ್ಮ ಬಗ್ಗೆ ಅಷ್ಟೂ ಕಾಳಜಿಯಿಲ್ಲದ್ದು ಬೇಸರದ ಸಂಗತಿ. ಅವರು ಊರಿಗೆಲ್ಲ ಬೋಧನೆ ಮಾಡುವವರು, ಮನೆಯಲ್ಲಿಯೇ ಹೀಗೆ ಕೈಹಿಡಿದ ಹೆಂಡತಿಗೆ ಅನ್ಯಾಯವಾಗುತ್ತಿದ್ದರೂ ಜಾಣಕುರುಡು ತೋರಿಸುವುದು ಸರಿಯಲ್ಲ. ಅವರಾಗಿಯೇ ನಿಮ್ಮ ಕಷ್ಟಕ್ಕೆ ಸ್ಪಂದಿಸದಿದ್ದರೆ ನೀವಾಗಿಯೇ ನಿಮ್ಮ ಅಸಹಾಯಕತೆಯನ್ನು ಹೇಳಿಕೊಂಡು ಅವರನ್ನು ಈಗಲೇ ಎಚ್ಚರಿಸದೇ ಬೇರೆ ವಿಧಿಯಿಲ್ಲ.  ನಿಮಗೀಗ ಸಾಕಷ್ಟು ವಿಶ್ರಾಂತಿಯ ಅಗತ್ಯವೂ ಇರುವುದರಿಂದ ಮನೆಯವರೆಲ್ಲರೂ ಸೇರಿ ಕೆಲಸವನ್ನು ಹಂಚಿಕೊಂಡು ಮಾಡುವಂತೆ ನಿಮ್ಮ ಗಂಡ ಎಲ್ಲರಿಗೂ ತಾಕೀತು ಮಾಡುವಂತೆ ಅವರನ್ನು ಒತ್ತಾಯಿಸಿ. ನಿಮ್ಮ ಗಂಡನ ಎದುರು ನಿಮ್ಮ ಅತ್ತೆ ನಿಮ್ಮ ಜೊತೆ ಚೆನ್ನಾಗಿರುತ್ತಾರೆ ಅಂದರೆ ಅವರಿಗೆ ಮಗನ ಬಗ್ಗೆ ಹೆದರಿಕೆ ಇದೆ ಅಂತಾಯ್ತು. ಇನ್ನೂ ನಿಮ್ಮ ಅತ್ತೆ ನಿಮ್ಮನ್ನು ಕಡೆಗಣಿಸಿದರೆ ಅವರು ಡಬ್ಬಲ್‍ಗೇಮ್ ಆಡುತ್ತಿರುವ ವಿಷಯ ನಿಮ್ಮ ಗಂಡನ ಗಮನಕ್ಕೆ ತಂದರೆ ತಪ್ಪಿಲ್ಲ. ಆದರೆ ವಿಷಯ ನಾಜೂಕಾಗಿರುವುದರಿಂದ ನಿಮ್ಮ ಗಂಡನಿಗೂ ಸ್ವಲ್ಪ ಜಾಣ್ಮೆಯಿಂದಲೇ ಪರಿಸ್ಥಿತಿಯನ್ನು ಹ್ಯಾಂಡಲ್ ಮಾಡಲು ಹೇಳಿ.