ಯಾವತ್ತೂ ಕಂಬಳದ ಪರ : ಸೀಎಂ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ನಾವು ಯಾವತ್ತಿಗೂ ಕಂಬಳದ ಪರ ಇದ್ದೇವೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕಂಬಳದ ವಿರುದ್ಧ ಪೇಟಾ ಮತ್ತೆ ನ್ಯಾಯಾಲಯದ ಮೆಟ್ಟಿಲೇರುವ ಬಗ್ಗೆ ಸೀಎಂ ಪ್ರತಿಕ್ರಿಯೆ ನೀಡಿ, “ಕಂಬಳ ಬೇಕೆಂದು ನಾವೇ ಕಾನೂನು ಮಾಡಿದ್ದೇವೆ. ನಾವು ಕೂಡ ಕಂಬಳದ ಪರವಾಗಿದ್ದೇವೆ” ಎಂದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸೀಎಂ, “ಭ್ರಷ್ಟಾಚಾರ ಸಂಬಂಧಿತ ದಾಖಲೆಯನ್ನು ಬಿಡುಗಡೆ ಮಾಡುವುದಾಗಿ ಯಡ್ಯೂರಪ್ಪ ಹೇಳುತ್ತಿದ್ದಾರೆ. ಆದರೆ ಅವರ ಮೇಲೆಯೇ ಎಫೈಆರಗಳಿವೆ. ನನ್ನ ವಿರುದ್ಧ ಯಾವುದಾದರೂ ಎಫೈಆರ್ ಇದೆಯೇ” ಎಂದು ಪ್ರಶ್ನಿಸಿದರು. “ನನ್ನ ಮೇಲೆ ಯಾವುದೇ ಭ್ರಷ್ಟಾಚಾರ ಇರಲು ಸಾಧ್ಯವಿಲ್ಲ. ಯಾವುದೇ ಹಗರಣಗಳೂ ಇಲ್ಲ. ಬಿಜೆಪಿ ಸರ್ಕಾರ ಹಗರಣಗಳಿಂದ ತುಂಬಿತ್ತು. ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆಗೆ ನಮ್ಮ ವಿರೋಧವಿದೆ” ಎಂದು ತಿಳಿಸಿದರು.

“ಯಾವುದೇ ಕೋಮುವಾದಿ ಸಂಘಟನೆಗಳನ್ನು ನಾವು ಬೆಂಬಲಿಸುವುದಿಲ್ಲ. ಕೋಮುವಾದಿ ಚಟುವಟಿಕೆಗಳನ್ನು ನಡೆಸುವ ಯಾವುದೇ ವ್ಯಕ್ತಿ, ಧರ್ಮ ಅಥವಾ ಮತಕ್ಕೆ ಸೇರಿದ ಸಂಘಟನೆಗಳನ್ನು ಸರಕಾರ ಬೆಂಬಲಿಸುವುದಿಲ್ಲ.

ನಾವು ಯಾವ ಪ್ರಕರಣವನ್ನು ಮುಚ್ಚಿ ಹಾಕಿಲ್ಲ. ಗುಜರಾತಿನಲ್ಲಿ ಇರುವಂತೆ ರಾಜ್ಯದಲ್ಲಿ ಲೋಕಾಯುಕ್ತವೂ ಇದೆ, ಎಸಿಬಿಯೂ ಇದೆ. ಲೋಕಾಯುಕ್ತವನ್ನು ಮುಚ್ಚಿದ್ದೇವೆ, ಪ್ರಕರಣಗಳನ್ನು ಮುಚ್ಚಿ ಹಾಕಿದ್ದೇವೆ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ. ಸಿಬಿಐಯನ್ನು ಬಳಸಿಕೊಂಡು ಬಿಜೆಪಿಯವರೇ ಪ್ರಕರಣಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ” ಎಂದು ಸಿದ್ದರಾಮಯ್ಯ ಹೇಳಿದರು.