ಕೇರಳದಲ್ಲಿ ಬಿಜೆಪಿ ಧ್ವಜ ಎತ್ತಿ ಹಿಡಿಯುತ್ತಿರುವ ಆಲ್ಫೋನ್ಸ್

ಆಲ್ಫೋನ್ಸ್ ಮೋದಿ ಅವರು ಕೇರಳದ ಬಗ್ಗೆ ಇಟ್ಟಿರುವ ಕನಸುಗಳನ್ನು ಸಾಕಾರಗೊಳಿಸುವುದೇ ತಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

  • ಜಾರ್ಜ್ ಜಾಕೊಬ್

ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ನಿವೃತ್ತ ಅಧಿಕಾರಿ ಕೇರಳದ ಕೆ ಜೆ ಆಲ್ಪೋನ್ಸಗೆ ಸಚಿವ ಸ್ಥಾನ ನೀಡಲಾಗಿದ್ದು, ಸಂಸದ ಸ್ಥಾನವನ್ನೇ ಹೊಂದಿರದ ಆಲ್ಫೋನ್ಸ್ ಪ್ರವಾಸೋದ್ಯಮ ಖಾತೆಯ ಸಚಿವರಾಗಿದ್ದಾರೆ.

ರಾಜ್ಯ ಬಿಜೆಪಿ ಘಟಕದಲ್ಲಿನ ಬಿರುಕು ಸರಿಪಡಿಸುವ ನಿಟ್ಟಿನಲ್ಲಿ ಈ ನೇಮಕಾತಿಯ ಮೂಲಕ ಮೋದಿ ಸ್ಪಷ್ಟ ಸಂದೇಶ ನೀಡಿದ್ದಾರೆ. ಒಬ್ಬ ನಿವೃತ್ತ ಐಎಎಸ್ ಅಧಿಕಾರಿಯಾಗಿ ಆಲ್ಫೋನ್ಸ್ 2006ರಲ್ಲಿ ಎಡರಂಗದ ಸರ್ಕಾರಕ್ಕೆ ಪ್ರವೇಶಿಸಿ ನಂತರ ಬಿಜೆಪಿಗೆ ಸೇರಿದ್ದರು. ಎಡರಂಗ ಮತ್ತು ಕಾಂಗ್ರೆಸ್ ನೇತೃತ್ವದ ಸಂಯುಕ್ತ ರಂಗ ಸರ್ಕಾರಗಳನ್ನು ಅಲ್ಪಸಂಖ್ಯಾತರ ಓಲೈಕೆಗಾಗಿ ಟೀಕಿಸುತ್ತಿದ್ದ ರಾಜ್ಯ ಸಂಘಪರಿವಾರ ಆಲ್ಫೋನ್ಸ್ ನೇಮಕದಿಂದ ಗೊಂದಲಕ್ಕೀಡಾಗಿದೆ.

ಕೇರಳದ ಇಡುಕಿ ಜಿಲ್ಲೆಯ ಸಬ್ ಕಲೆಕ್ಟರ್ ಆಗಿದ್ದಾಗ ಗಾಂಜಾ ಮಾಫಿಯಾಗಳ ಆಕ್ರೋಶಕ್ಕೆ ಬಲಿಯಾಗಿ ಆಲ್ಫೋನ್ಸ್ ವರ್ಗಾವಣೆಯಾಗಿದ್ದರು. 1992ರಲ್ಲಿ ಎರಡು ಬಾರಿ ವರ್ಗಾವಣೆಯಾಗಿದ್ದರು. ಅನಧಿಕೃತ ಕಟ್ಟಡಗಳನ್ನು ಧ್ವಂಸ ಮಾಡುವ ಮೂಲಕ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಅಧಿಕಾರದಲ್ಲಿರುವಾಗಲೇ ತಮ್ಮದೇ ಆದ ಎನ್ ಜಿ ಒ ಸ್ಥಾಪಿಸುವ ಮೂಲಕ ವಿವಾದಕ್ಕೀಡಾಗಿದ್ದರು.

ಸೇವೆಯಿಂದ ನಿವೃತ್ತಿ ಹೊಂದಿ 2006ರಲ್ಲಿ ಎಡರಂಗ ಸರ್ಕಾರದಲ್ಲಿ ಪ್ರವೇಶ ಪಡೆದ ಆಲ್ಫೋನ್ಸ್ ಕೊಟ್ಟಾಯಂ ಜಿಲ್ಲೆಯ ಕಂಜಿರಾಪ್ಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ ಸಿಪಿಎಂ ಕಾರ್ಯಕರ್ತರ ಆಕ್ರೋಶ ಎದುರಿಸಬೇಕಾಯಿತು. 2011ರಲ್ಲಿ ಆಲ್ಫೋನ್ಸ್ ಪೂಂಜಾರ್ ಕ್ಷೇತ್ರದಿಂದ ಸ್ಪರ್ಧಿಸಬೇಕಾಯಿತು. ಆದರೆ ಹಠಾತ್ತನೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲ್ಫೋನ್ಸ್ ಸಂಘಪರಿವಾರದತ್ತ ಸಾಗಿದ್ದರು.

ಈ ಗೊಂದಲಗಳ ನಡುವೆಯೇ ದೆಹಲಿಯ ಅಧಿಕಾರ ಪೀಠ ತಲುಪಿರುವ ಆಲ್ಫೋನ್ಸ್ ಈಗಲೂ ಪಕ್ಷದಲ್ಲಿ ಅಂತರಿಕ ವಿರೋಧ ಎದುರಿಸುತ್ತಿದ್ದು, ಕೆಲವು ರಾಜ್ಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೋದಿ ಸದಾ ಪ್ರಾಮಾಣಿಕ ಮತ್ತು ದಕ್ಷ ವ್ಯಕ್ತಿಗಳಿಗೆ ಅವಕಾಶ ನೀಡುತ್ತಿದ್ದು, ಒಬ್ಬ ಕ್ರೈಸ್ತ ಅಭ್ಯರ್ಥಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಅರ್ಥಪೂರ್ಣ ಕ್ರಮ ಕೈಗೊಂಡಿದ್ದಾರೆ ಎಂದು ಆಲ್ಫೋನ್ಸ್ ತಮ್ಮ ಸೇರ್ಪಡೆಯನ್ನು ಸಮರ್ಥಿಸಿಕೊಳ್ಳುತ್ತಾರೆ.

ಆಲ್ಫೋನ್ಸ್ ಸೇರ್ಪಡೆಯಲ್ಲಿ ರಾಜಕೀಯ ಸಂದೇಶ ಇದೆಯೇ ಎಂಬ ಪ್ರಶ್ನೆ ಗಹನವಾಗಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ಮೋದಿಯ ನಡೆಯನ್ನು ಸಮರ್ಥಿಸುವ ಆಲ್ಫೋನ್ಸ್ ಮೋದಿ ಅವರು ಕೇರಳದ ಬಗ್ಗೆ ಇಟ್ಟಿರುವ ಕನಸುಗಳನ್ನು ಸಾಕಾರಗೊಳಿಸುವುದೇ ತಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಬಡತನ, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕ್ರೈಸ್ತ ಧರ್ಮವೂ ಪಣ ತೊಡುತ್ತದೆ, ಮೋದಿ ಸರ್ಕಾರವೂ ಇದೇ ಹಾದಿಯಲ್ಲಿದೆ ಎಂದು ಆಲ್ಫೋನ್ಸ್ ಹೇಳುತ್ತಾರೆ.

2019ರ ಚುನಾವಣೆಗಳಲ್ಲಿ ಕ್ರೈಸ್ತರ ಮತಗಳನ್ನು ಸೆಳೆಯಲು ಆಲ್ಫೋನ್ಸ್ ಬಳಕೆಯಾಗುವುದು ನಿಶ್ಚಿತವಾಗಿದೆ. ಗೋವಾದಲ್ಲಿ ಈ ತಂತ್ರಗಾರಿಕೆ ಯಶಸ್ವಿಯಾಗಿದೆಯಾದರೂ, ಕೇರಳದ ಕ್ರೈಸ್ತರಲ್ಲಿ ನಾನಾ ಪಂಗಡಗಳಿರುವುದರಿಂದ ಬಿಜೆಪಿ ತಾನೆಣಿಸಿದಷ್ಟು ಸುಲಭವಾಗಿ ಯಶಸ್ಸು ಸಾಧಿಸಲಾಗದು. ಒಂದು ವೇಳೆ ಬಿಜೆಪಿಯ ತಂತ್ರ ಯಶಸ್ವಿಯಾದರೆ ಅದರ ಶ್ರೇಯಸ್ಸು ಆಲ್ಫೋನ್ಸಗೆ ಸಲ್ಲುವುದಂತೂ ಸ್ಪಷ್ಟ.

2014ರವರೆಗೂ ಕೇರಳದ ರಾಜಕಾರಣದಲ್ಲಿ ಅಸ್ತಿತ್ವವನ್ನೇ ಹೊಂದಿರದ ಬಿಜೆಪಿಗೆ ಆಲ್ಫೋನ್ಸ್ ಮಾರ್ಗದರ್ಶಿಯಾಗಲೂಬಹುದು.