ಶ್ರೀನಿಧಿ ಶೆಟ್ಟಿ ಸಾಧನೆಗೆ ಕಲಿತ ಶಾಲೆಯಲ್ಲಿ ಹರ್ಷ

ನಮ್ಮ ಪ್ರತಿನಿಧಿ ವರದಿ

 ಮೂಲ್ಕಿ : 1997ರಿಂದ 2008ರವರೆಗೆ ಎಲ್ಕೇಜಿಯಿಂದ 10ನೇ ತರಗತಿವರೆಗೆ ಕಲಿತ ಮೂಲ್ಕಿಯ ಶ್ರೀ ನಾರಾಯಣಗುರು ಸಂಯುಕ್ತ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಮಿಸ್ ಸುಪ್ರನ್ಯಾಷನಲ್-2016 ಪ್ರಶಸ್ತಿ ವಿಜೇತೆ  ಶ್ರೀನಿಧಿ ಶೆಟ್ಟಿ ಯವರನ್ನು ಅವಿಸ್ಮರಣೀಯವಾಗಿ ಸನ್ಮಾನಿಸಲಾಯಿತು.

ಹೆದ್ದಾರಿಯಿಂದ ಶಾಲೆವರೆಗೆ ಶಾಲಾ ಎನ್ ಸಿ ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಎಲ್ಲಾ ವಿದ್ಯಾರ್ಥಿಗಳು ಸಾಲಾಗಿ ನಿಂತು ಮೆರವಣಿಗೆ ಮೂಲಕ ಶ್ರೀನಿಧಿ ಶೆಟ್ಟಯವರನ್ನು ಶಾಲೆಗೆ ಬರಮಾಡಿಕೊಂಡರು.

ಶ್ರೀನಿಧಿ ರಮೇಶ್ ಶೆಟ್ಟಿ
ಶ್ರೀನಿಧಿ ರಮೇಶ್ ಶೆಟ್ಟಿ

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಕಲಿತ ಶಾಲೆಯನ್ನು ಹಾಗೂ ಶಿಕ್ಷಕ ವೃಂದದವರನ್ನು ಕಂಡ ಶ್ರೀನಿಧಿ ಶೆಟ್ಟಿಯವರು ಭಾವಪರವಶರಾದರು.

ಬಳಿಕ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಮಾತನಾಡಿದ ಶ್ರೀನಿಧಿ ಶೆಟ್ಟಿ, “ನನ್ನ ಸಾಧನೆಗೆ ಮೂಲ ಪ್ರೇರಣೆ ನಾನು ಕಲಿತ ಶಾಲೆ. ನಾನು ಈ ಶಾಲೆಯಲ್ಲಿ ಕಲಿತ ಸಮಯ ಬಹಳ ಅಮೂಲ್ಯವಾದುದು” ಎಂದರು.

ಸಕಾರಾತ್ಮಕ ಧೋರಣೆಯನ್ನು ಎಳವೆಯಿಂದಲೇ ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು, “ಪೋಲೆಂಡಿನಲ್ಲಿ ನಾನು ಭಾರತವನ್ನು ಪ್ರತಿನಿಧಿಸಿದ್ದಕ್ಕೆ ಬಹಳ ಹೆಮ್ಮೆ ಎನಿಸಿದೆ. ಅಲ್ಲಿ ನಾನು ಮಾಡಿದ ಸಾಧನೆ ಇಡೀ ದೇಶಕ್ಕೆ ಸಮರ್ಪಣೆ. ಅಲ್ಲಿ ನನ್ನನ್ನು ಎಲ್ಲರೂ ಮಿಸ್ ಇಂಡಿಯಾ”ವೆಂದೇ ಕರೆಯುತ್ತಿದ್ದರು ಎಂದರು.

“ಶಾಲಾ ಜೀವನದ ಪ್ರತಿಯೊಂದು ಕ್ಷಣವನ್ನೂ ಎಲ್ಲಾ ವಿದ್ಯಾಥಿಗಳು ಅನುಭವಿಸಬೇಕು. ನನ್ನ ಶಾಲಾ ದಿನಗಳಲ್ಲಿ ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿತ್ತಿದ್ದೆ. ಇದೀಗ ಮತ್ತೆ ಮತ್ತೆ ಶಾಲೆಗೆ ಬರಲು ಮನಸ್ಸಾಗುತ್ತಿದೆ” ಎಂದವರು ಹೇಳಿದರು.

ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಯಶೋಧಾ ಮಾತನಾಡಿ, “ಶ್ರೀನಿಧಿ ಸಾಧನೆಗೆ ಶಾಲೆ ಹರ್ಷ ವ್ಯಕ್ತಪಡಿಸುತ್ತಿದೆ. ಶಾಲಾ ದಿನಗಳಲ್ಲಿ ಈಕೆ ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿವ ಮೂಲಕ ಅಧ್ಯಾಪಕರ ನೆಚ್ಚಿನ ವಿಧ್ಯಾರ್ಥಿಯಾಗಿದ್ದಳು. ಎಳವೆಯಲ್ಲಿಯೇ ಈಕೆ ಫ್ಯಾಷನ್‍ಶೋ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಳು” ಎಂದರು