ಸಂಘಟಕರು-ಸ್ಪರ್ಧಾಳುಗಳ ಮಧ್ಯೆ ಸಭೆಯಲ್ಲೇ ಚಕಮಕಿ

ಸಮಾರೋಪ ಸಮಾರಂಭದ ವೇದಿಕೆ ಕೆಳಭಾಗದಲ್ಲಿ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಯಿತು

ಪಾವಂಜೆ ಜಿಲ್ಲಾ ಯುವಜನೋತ್ಸವ 2016-17ದಲ್ಲಿ ತಾರತಮ್ಯ, ಆರೋಪ 

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಮಂಗಳೂರು ಮತ್ತಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿದ್ಯಾವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ, ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್ (ರಿ) ಹಳೆಯಂಗಡಿ, ಯುವತಿ ಮತ್ತು ಮಹಿಳಾ ಮಂಡಲ (ರಿ) ಹಳೆಯಂಗಡಿ ಸಂಯುಕ್ತ ಆಶ್ರಯದಲ್ಲಿ ಪಾವಂಜೆಯಲ್ಲಿ ನಡೆದ ಜಿಲ್ಲಾ ಯುವಜನೋತ್ಸವ 2016-17ದಲ್ಲಿ ಭಾರೀ ತಾರತಮ್ಯ ನಡೆಸಲಾಗಿದೆ ಎಂದು ಸ್ಪರ್ಧಾಳುಗಳು ಗಂಭೀರ ಆರೋಪ ಮಾಡಿದ್ದು, ಸಮಾರೋಪ ನಡೆಯುತ್ತಿದ್ದಾಗಲೇ ಸಂಘಟಕರೊಂದಿಗೆ ಮಾತಿನ ಚಕಮಕಿ ನಡೆದಿದೆ.

“ಪಾವಂಜೆ ಯುವಜನೋತ್ಸವದ ನಿಯಮಾವಳಿ ಪ್ರಕಾರ ಪದ್ಯದ ಸೀಡಿ ಹಾಕಿ ನೃತ್ಯ ನಡೆಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಮಂಗಳೂರಿನ ಮಿಥುನ್ ರಾಜ್ ಎಂಬವರು ಪದ್ಯದ ಸೀಡಿ ಹಾಕಿ ನೃತ್ಯ ಮಾಡಿದ್ದರು. ಅದರೂ ತೀರ್ಪುಗಾರರು ಫಿಕ್ಸಿಂಗ್ ನಡೆಸಿ ಅವರಿಗೆ ದ್ವಿತೀಯ ಸ್ಥಾನ ನೀಡಿದ್ದಾರೆ”  ಎಂದು ಮುಡಿಪು ಕಾಯರಗೋಳಿಯ ಕಲಾವತಿ ದೂರಿದರು.

“ನಾವು ಬಂಟ್ವಾಳ ತಾಲೂಕಿನ ಮುಡಿಪು ಕುರ್ನಾಡಿನಿಂದ ಯುವಜನೋತ್ಸವ ಸ್ಪರ್ಧೆಗೆ ಬಂದಿದ್ದು, ಸುಮಾರು ರೂ 10 ಸಾವಿರದವರೆಗೆ ಖರ್ಚಾಗಿದೆ, ಸ್ಪರ್ಧೆಯಲ್ಲಿ ನಿಯತ್ತಿನವರಿಗೆ ಬೆಲೆಯೇ ಇಲ್ಲ” ಎಂದು ಅವರು ಯುವಜನೋತ್ಸವದ ಸಮಾರೋಪ ಕಾರ್ಯಕ್ರಮ ನಡೆಯುತ್ತಿರುವಾಗಲೇ ಸಂಘಟಕರನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ ಅವರ ಆಕ್ರೋಶ ನಿಲ್ಲದೆ ಸಮಾರೋಪ ಕಾರ್ಯಕ್ರಮ ಮುಗಿದು ವೇದಿಕೆಯಿಂದ ಕೆಳಗೆ ಬರುತ್ತಿದ್ದ ಸಹಾಯಕ ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿ ಲಲ್ಲಿ ಪಾಯಸರನ್ನು ತರಾಟೆಗೆ ತೆಗೆದುಕೊಂಡ ಕಲಾವತಿ, “ಯುವಜನೋತ್ಸವದ ನೀತಿ-ನಿಯಮಗಳನ್ನು ಗಾಳಿಗೆ ತೂರಿ ತೀರ್ಪುಗಾರರನ್ನು ಹಣಕ್ಕೆ ಕೊಳ್ಳಲಾಗಿದೆ” ಎಂದು ಗಂಭೀರ ಆರೋಪ ಮಾಡಿದರು. ಈ ಬಗ್ಗೆ ಕ್ರೀಡಾಧಿಕಾರಿ ಲಿಲ್ಲಿ ಹಾಗೂ ಕಲಾವತಿ ನಡುವೆ ಮಾತಿನ ಚಕಮಕಿ ನಡೆದರೂ ಬಂದ ದಾರಿಗೆ ಸುಂಕವಿಲ್ಲ ಎಂದು ಕಲಾವತಿ ತಂಡದವರು ನಿರಾಸೆಯಿಂದ ಹಿಂದಿರುಗಬೇಕಾಯಿತು.

ಪೂಜಾ ಕುಣಿತದಲ್ಲೂ ತಾರತಮ್ಯ ; ಆರೋಪ

ಯುವಜನಮೇಳದ ನೃತ್ಯ ಕಾರ್ಯಕ್ರಮದಲ್ಲಿ ತಾರತಮ್ಯ ನಡೆಸಲಾಗಿದೆ ಎಂಬ ಆರೋಪದ ಬೆನ್ನಿಗೇ ಪೂಜಾ ಕುಣಿತದಲ್ಲೂ ತಾರತಮ್ಯ ನಡೆಸಲಾಗಿದೆ ಎಂದು ಸ್ಪರ್ಧಾಳು ಮಿಥುನ್ ದೂರಿದ್ದಾರೆ. ಮರಕೋಲು, ನಂದಿಕೋಲು ಹಾಕಿ ಕುಣಿತ ನಡೆಸಿದವರಿಗೆ ಬಹುಮಾನ ಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಒಟ್ಟಾರೆಯಾಗಿ ಪಾವಂಜೆ ಯುವಜನಮೇಳ ತೀರ್ಪುಗಾರರ ಎಡವಟ್ಟಿನಿಂದಾಗಿ ವಿದ್ಯಾವಿನಾಯಕ ಯುವಕಮಂಡಲ ಬೆಲೆತೆರುವಂತಾಗಿರುವುದು ವಿಪರ್ಯಾಸವೇ ಸರಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.