ಕಟೀಲು ತಾ ಪಂ ಸದಸ್ಯೆಯಿಂದ ಖಾಸಗಿ ಹೆಲ್ತ್ ಕಾರ್ಡಿಗೆ ಅಧಿಕ ಹಣ ವಸೂಲಿ : ಆರೋಪ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕೆಮ್ರಾಲ್ ಗ್ರಾಮ ಪಂಚಾಯಿತಿ ಗ್ರಾಮ ಸಭೆ ಇಲ್ಲಿನ ಸಮುದಾಯ ಭವನದಲ್ಲಿ ನಡೆಯಿತು. ಗ್ರಾಮ ಸಭೆಗೆ ವಿವಿಧ 22 ಇಲಾಖಾಧಿಕಾರಿಗಳು ಹಾಜರಾಗಬೇಕಿದ್ದು, ಕೇವಲ 6 ಇಲಾಖಾಧಿಕಾರಿಗಳು ಮಾತ್ರ ಹಾಜಾರಾಗಿದ್ದು, ಗ್ರಾಮಸ್ಥರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೆಮ್ರಾಲ್ ಪರಿಸರ ಗಾಂಜಾ, ಸಿಗರೇಟು ಸೇದುವವರ ಅಡ್ಡೆಯಾಗಿದೆ. ಮುಲ್ಕಿ ಪೊಲೀಸರು ಈ ಬಗ್ಗೆ ಗಮನಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. “ಕಟೀಲು ತಾಲೂಕು ಪಂಚಾಯತಿ ಸದಸ್ಯೆ ಶುಭಲತಾ ಹೆಲ್ತ್ ಕಾರ್ಡ್ ಮಾಡಿಸಿಕೊಡುತ್ತೇನೆ ಎಂದು ಎಲ್ಲರ ಬಳಿ 1500ರೂ ತೆಗೆದುಕೊಂಡಿದ್ದಾರೆ ಇದು ಯಾಕೆ” ಎಂದು ಮಹಿಳೆಯೊಬ್ಬರು ಗ್ರಾಮ ಸಭೆಯಲ್ಲಿ ಪ್ರಶ್ನಿಸಿದಾಗ ಸಭೆಯಲ್ಲಿ ಗೊಂದಲಮಯ ವಾತಾವರಣ ಸೃಷ್ಠಿಯಾಯಿತು. ಕೂಡಲೇ ಮದ್ಯ ಪ್ರವೇಶಿಸಿದ ಜಿ ಪಂ ಸದಸ್ಯೆ ಕಸ್ತೂರಿ ಪಂಜ ಮಾತನಾಡಿ, “ಇದು ಖಾಸಗಿ ವಿಚಾರಕ್ಕೆ ಸಂಬಂಧಿಸಿದ್ದು” ಎಂದು ಸಭೆಯನ್ನು ಹತೋಟಿಗೆ ತಂದು ಆರೋಪ ಮಾಡಿದ ಮಹಿಳೆಯ ಬಾಯಿಮುಚ್ಚಿಸಿದರು.

ಪಕ್ಷಿಕೆರೆಯಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿದೆ ಇದರ ನಿಯಂತ್ರಣ ಅಗತ್ಯ ಎಂದು ಗ್ರಾಮಸ್ಥರೊಬ್ಬರು ಹೇಳಿದರು. ಕೆಮ್ರಾಲ್ ಪೇಟೆಯಲ್ಲಿ ರಿಕ್ಷಾ ಪಾರ್ಕ್ ಹತ್ತಿರ ಚರಂಡಿ ಹಾಗೂ ಮೋರಿ ಪ್ಲಾಸ್ಟಿಕ್ ತ್ಯಾಜ್ಯಗಳಿಂದಾಗಿ ಬ್ಲಾಕ್ ಆಗಿ ಕೆಸರು ನೀರು, ರಿಕ್ಷಾ ಪಾರ್ಕ್ ಹಾಗೂ ರಸ್ತೆಯಲ್ಲಿ ಹರಿಯುತ್ತಿದೆ. ಪದೆ ಪದೇ ದೂರು ನೀಡುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ರಿಕ್ಷಾ ಚಾಲಕರು ಆರೋಪಿಸಿದರು.  ಹಲವಾರು ವರ್ಷಗಳಿಂದ ಹೊಸಕಾಡು ರಸ್ತೆ ಹಾಗೂ ಸೈಂಟ್ ಜೂಡ್ ಪಕ್ಷಿಕೆರೆ ಪ್ರಾಥಮಿಕ ಶಾಲಾ ರಸ್ತೆ ಸಂರ್ಪೂಣ ಹದಗೆಟ್ಟು ಹೋಗಿದ್ದು, ನಡೆದಾಡಲು ಮಕ್ಕಳಿಗೆ ಕಷ್ಟವಾಗಿದೆ, ಗಮನಹರಿಸಿ ಎಂದು ಗ್ರಾಮಸ್ಥರು ದೂರಿಕೊಂಡಾಗ ಜಿ ಪಂ ಸದಸ್ಯೆ ಪಿಡಿಒರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಸಮಸ್ಯೆಬಗೆಹರಿಸಲು ಸೂಚನೆ ನೀಡಿದರು.