ತಲಾಖ್ ಅಸಾಂವಿಧಾನಿಕ : ಅಲಹಾಬಾದ್ ಹೈಕೋರ್ಟ್

ಅಲಹಾಬಾದ್ :  ಮೂರು ಬಾರಿ ತಲಾಖ್ ಅಂತ ಹೇಳಿ ಮುಸ್ಲಿಂ ಮಹಿಳೆಗೆ ವಿಚ್ಛೇದನ ನೀಡುವ ಸಂಪ್ರದಾಯ ಅಸಂವಿಧಾನಕವಾದದ್ದು ಎಂದು ಅಲಹಾಬಾದ್ ಹೈಕೋರ್ಟ್ ಗುರುವಾರ ಐತಿಹಾಸಿಕ ತೀರ್ಮಾನ ನೀಡಿದೆ.

ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ಇರುವ ತಲಾಖ್ ಪದ್ಧತಿ ಅಸಂವಿಧಾನಕ ಮಾತ್ರವಲ್ಲ, ಮುಸ್ಲಿಂ ಮಹಿಳೆಯರ ಹಕ್ಕುಗಳ ನಿಯಮಗಳನ್ನು ಕೂಡ ಉಲ್ಲಂಘಿಸುತ್ತದೆ ಎಂದು ನ್ಯಾಯಮೂರ್ತಿಗಳು ನುಡಿದಿದ್ದಾರೆ.

ಸಂವಿಧಾನಕ್ಕಿಂತ ಯಾವ ವೈಯಕ್ತಿಕ ಕಾನೂನು ಕೂಡ ಮೇಲಿನದಲ್ಲ. ಹೀಗಾಗಿ, ಮೂರು ಬಾರಿ ತಲಾಖ್ ನೀಡಿ ಮಹಿಳೆಗೆ ವಿಚ್ಛೇದನ ನೀಡುವ ಪದ್ಧತಿಗೆ ಇತಿಶ್ರೀ ಹಾಡಲೇಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಮೂರು ಬಾರಿ ತಲಾಖ್ ನೀಡುವ ಪದ್ಧತಿಯನ್ನು ಕಿತ್ತುಹಾಕಬೇಕು ಎಂದು ಹಲವಾರು ಮಹಿಳೆಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅಸಹ್ಯಕರ ಪದ್ಧತಿಯಿಂದ ಲಿಂಗ ತಾರತಮ್ಯವಾಗುತ್ತಿದ್ದು, ಇದು ಮುಸ್ಲಿಂ ಪುರುಷ ಹಾಗು ಮಹಿಳೆಯರ ನಡುವಿನ ಸಮಾನತೆಯ ವಿರುದ್ಧವಾಗಿದೆ ಎಂದು ಕೇಂದ್ರ ಸಹ ಕೋರ್ಟಿಗೆ ತಿಳಿಸಿದೆ.

talaq

ಆದರೆ, ಈ ತೀರ್ಪನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧಿಸಿದ್ದು, ಬಲವಂತದ ಮದುವೆಯಿಂದ ಮಹಿಳೆಯನ್ನು ನರಕಕ್ಕೆ ತಳ್ಳುವ ಬದಲು ತಲಾಖ್ ನೀಡುವುದೇ ಉತ್ತಮ ಎಂದು ಅಭಿಪ್ರಾಯ ಮಂಡಿಸಿದೆ. ಧಾರ್ಮಿಕವಾಗಿ ನೀಡಲಾಗಿರುವ ಹಕ್ಕುಗಳನ್ನು ಪ್ರಶ್ನಿಸುವ ಹಕ್ಕು ಕಾನೂನಿಗೆ ಇಲ್ಲ ಎಂದೂ ಹೇಳಿದೆ.

ಇಂಥ ತೀರ್ಪು ಎಂದೋ ಆಗಬೇಕಿತ್ತು. ಈಗಲಾದರೂ ಮುಸ್ಲಿಂ ಸಹೋದರಿಯರಿಗೆ ಹೆಚ್ಚಿನ ಹಕ್ಕು, ಹೆಚ್ಚು ಭದ್ರತೆ, ಅವರ ಜೀವಕ್ಕೆ ಹೆಚ್ಚು ಗೌರವ ದೊರೆತಂತಾಗುತ್ತದೆ ಎಂದು ಕೇಂದ್ರದ ಮಾಜಿ ಸಚಿವೆ, ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಸಂತಸ ವ್ಯಕ್ತಪಡಿಸಿದ್ದಾರೆ.