ಜಯ್ ಅಮಿತ್ ಶಾ ಮುಟ್ಟಿದ್ದೆಲ್ಲಾ ಚಿನ್ನ

ಈ ಸ್ಫೋಟಕ ಮಾಹಿತಿಯನ್ನು ಸಾರ್ವಜನಿಕರ ಮುಂದಿಟ್ಟ ವೈರ್ ಪತ್ರಿಕಾ ಸಮೂಹದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಜಯ್ ಅಮಿತ್ ಶಾ ಅವರ ವಕೀಲರು ಹೇಳಿದ್ದು, ಈಗಾಗಲೇ ಈ ನಿಟ್ಟಿನಲ್ಲಿ ಕ್ರಮ ಜರುಗಿಸಿದ್ದಾರೆ.

  • ರೋಹಿಣಿ ಸಿಂಗ್

ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ಮೇಲೆ ಅಮಿತ್ ಶಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರದಲ್ಲಿ ಅಮಿತ್ ಶಾ ಅವರ ಪುತ್ರ ಜಯ್ ಅಮಿತ್ ಭಾಯಿ ಶಾ ಅವರ ಆಸ್ತಿ 16000 ಪಟ್ಟು ಹೆಚ್ಚಾಗಿದೆ. ಕಂಪನಿಗಳ ನೋಂದಣಾಧಿಕಾರಿಗಳ ಬಳಿ ಇರುವ ಮಾಹಿತಿಯ ಪ್ರಕಾರ 2013-14ರಲ್ಲಿ ಜಯ್ ಅಮಿತ್ ಶಾ ಅವರ ಒಡೆತನದ ಟೆಂಪಲ್ ಎಂಟರಪ್ರೈಸಸ್ ಪ್ರೈ ಲಿಮಿಟೆಡ್ ಕಂಪನಿ ಸಾಧಾರಣ ವ್ಯವಹಾರದಲ್ಲಿ ತೊಡಗಿದ್ದು, 2015-16ರ ಅಂತ್ಯದ ವೇಳೆಗೆ ಅಮಿತ್ ಶಾ ಕಂಪನಿಯ ಒಟ್ಟು ವ್ಯವಹಾರ 80.5 ಕೋಟಿ ರೂ.ಗಳಷ್ಟಾಗಿತ್ತು.

ನೋಂದಣಾಧಿಕಾರಿಗಳಿಂದ ಪಡೆದ ಮಾಹಿತಿಯ ಅನ್ವಯ ಶಾ ಕಂಪನಿ ಪಡೆದಿರುವ ಹಲವಾರು ಸಾಲಗಳು ಮತ್ತು ಇತರ ಆದಾಯಗಳ ವಿವರಗಳನ್ನು ಶಾ ಅವರ ವಕೀಲರೂ ನಿರಾಕರಿಸಿಲ್ಲ. ಯಾವುದೇ ಪ್ರಜಾಸತ್ತಾತ್ಮಕ ದೇಶದಲ್ಲಿ ರಾಜಕೀಯ ನಾಯಕರ ಮಕ್ಕಳು ಔದ್ಯಮಿಕ ಆಸ್ತಿಯಲ್ಲಿ ಅತಿಯಾದ ಹೆಚ್ಚಳ ಕಂಡಾಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವುದು ಸಹಜ. ಯುಪಿಎ ಆಡಳಿತಾವಧಿಯಲ್ಲೂ ಸೋನಿಯಾ ಗಾಂಧಿಯ ಅಳಿಯ ರಾ¨ರ್ಟ್ ವಾದ್ರಾ ಅಕ್ರಮ ಆಸ್ತಿಯ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ಡಿ ಎಲ್ ಎಫ್ ರಿಯಲ್ ಎಸ್ಟೇಟ್ ಕಂಪನಿಯಿಂದ ವಾದ್ರಾ ಪಡೆದಿದ್ದ ಬೃಹತ್ ಸಾಲದ ಬಗ್ಗೆ ಬಿಜೆಪಿ ಹುಯಿಲೆಬ್ಬಿಸಿತ್ತು.

ಜಯ್ ಅಮಿತ್ ಶಾ ಅವರ ಟೆಂಪಲ್ ಎಂಟರಪ್ರೈಸಸ್ 2004ರಲ್ಲಿ ಆರಂಭವಾಗಿತ್ತು. ಜಯ್ ಶಾ ಮತ್ತು ಜಿತೇಂದ್ರ ಶಾ ಇದರ ನಿರ್ದೇಶಕರಾಗಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪತ್ನಿ ಸೋನಲ್ ಶಾ ಸಹಭಾಗಿಯಾಗಿದ್ದರು. 2013-14ರ ವೇಳೆಗೆ ಕಂಪನಿಯ ಬಳಿ ಯಾವುದೇ ಸ್ಥಿರಾಸ್ತಿ ಇರಲಿಲ್ಲ. 2014-15ರಲ್ಲಿ ಕಂಪನಿ 50 ಸಾವಿರ ರೂ ಆದಾಯ ಗಳಿಸಿತ್ತು. ಆದರೆ ಹಠಾತ್ತನೆ 2015-16ರಲ್ಲಿ ಕಂಪನಿಯ ಆದಾಯ 80.5 ಕೋಟಿ ರೂ.ಗಳಿಗೆ ಏರಿಕೆಯಾಗಿತ್ತು.

ಈ ಬೃಹತ್ ಪ್ರಮಾಣದ ಏರಿಕೆಗೆ ಕಂಪೆನಿ ಮಾರಾಟ ಮಾಡುವ ಉತ್ಪನ್ನಗಳ ಹೆಚ್ಚಳವೇ ಮೂಲ ಎಂದು ನೋಂದಣಾಧಿಕಾರಿಗಳ ಬಳಿ ಸಲ್ಲಿಸಲಾದ ದಾಖಲೆಗಳಲ್ಲಿ ಹೇಳಲಾಗಿದೆ. ಈ ಮಾಹಿತಿಯ ಅನ್ವಯ ಶಾ ಅವರ ಕಂಪನಿ ಕೆ ಐ ಎಫ್ ಎಸ್ ಹಣಕಾಸು ಸಂಸ್ಥೆಯಿಂದ 15.78 ಕೋಟಿ ರೂ ಸಾಲಪಡೆದಿದೆ. ಕುತೂಹಲಕಾರಿ ಸಂಗತಿ ಎಂದರೆ ಈ ಸಾಲ ನೀಡಿದ ಹಣಕಾಸು ವರ್ಷದಲ್ಲಿ ಕೆ ಐ ಎಫ್ ಎಸ್ ನೀಡಿದ್ದ ಒಟ್ಟು ಸಾಲದ ಮೊತ್ತ 7 ಕೋಟಿ ರೂ ಎಂದು ನಮೂದಿಸಲಾಗಿದ್ದು, ಸಂಸ್ಥೆಯ ಹಣಕಾಸು ಪತ್ರಗಳಲ್ಲಿ ಶಾ ಕಂಪನಿಗೆ ನೀಡಿದ 15.78 ಕೋಟಿ ರೂ.ಗಳ ಸಾಲದ ಉಲ್ಲೇಖವೇ ಕಾಣುವುದಿಲ್ಲ. ಈ ಹಣಕಾಸು ಸಂಸ್ಥೆ ಈ ಹಿಂದೆ ಸೆಬಿಯೊಡನೆ ಸಂಘರ್ಷಕ್ಕಿಳಿದಿದ್ದನ್ನು ಇಲ್ಲಿ ಸ್ಮರಿಸಬಹುದು.

2015ರಲ್ಲಿ ಇದೇ ಕೆ ಐ ಎಫ್ ಎಸ್ ಹಣಕಾಸು ಸಂಸ್ಥೆ ಶಾ ಕಂಪನಿಗೆ ಮತ್ತೊಮ್ಮೆ ಭದ್ರತೆ ಇಲ್ಲದೆ ಸಾಲ ನೀಡಿತ್ತು. ನೋಂದಣಾಧಿಕಾರಿಗಳ ಬಳಿ ಸಲ್ಲಿಸಲಾಗಿರುವ ಲೆಕ್ಕಪತ್ರಗಳ ಅನುಸಾರ ಶಾ ಅವರ ಟೆಂಪಲ್ ಎಂಟರಪ್ರೈಸಸ್ ಕಂಪನಿ ಕೃಷಿ ಉತ್ಪನ್ನಗಳ ಮಾರಾಟ ಮಾಡುತ್ತಿದ್ದು, ಸಗಟು ವ್ಯಾಪಾರದಲ್ಲಿ ಶೇ 95ರಷ್ಟು ಆದಾಯ ಈ ವ್ಯಾಪಾರದಿಂದಲೇ ಬರುತ್ತದೆ. ರಫ್ತು ಮತ್ತು ಆಮದು ವ್ಯಾಪಾರದಲ್ಲಿ ತೊಡಗಿರುವ ಉದ್ದಿಮೆಗೆ 80 ಕೋಟಿ ರೂ ಅದಾಯ ಇರುವುದು ಅತಿಶಯವೇನಲ್ಲ ಎಂದು ಶಾ ಅವರ ವಕೀಲರು ಹೇಳುತ್ತಾರೆ. ಆದರೆ ಆತಂಕಕಾರಿ ಅಂಶವೆಂದರೆ 2015-16ರ ಒಂದೇ ವರ್ಷದಲ್ಲಿ ತನ್ನ ಆದಾಯವನ್ನು 50 ಸಾವಿರ ರೂ.ಗಳಿಂದ 80 ಕೋಟಿಗೆ ವೃದ್ಧಿಸಿಕೊಂಡ ಉದ್ದಿಮೆ ಕಳೆದ ವರ್ಷ ಹಠಾತ್ತನೆ ತನ್ನ ವಹಿವಾಟನ್ನು ಸ್ಥಗಿತಗೊಳಿಸಿತ್ತು. ಕಂಪನಿ ಕೆಲ ಕಾಲ ನಷ್ಟ ಅನುಭವಿಸಿದ್ದರಿಂದ ಸ್ಥಗಿತಗೊಳಿಸಲಾಗಿತ್ತು ಎಂದು ವಕೀಲರು ಹೇಳುತ್ತಾರೆ.

ಜಯ್ ಶಾ ಶೇ 60ರಷ್ಟು ಒಡೆತನ ಹೊಂದಿದ್ದ ಕುಸುಮ್ ಫಿನ್ ಸರ್ವ್ ಹಣಕಾಸು ಸಂಸ್ಥೆಯನ್ನು 2015ರಲ್ಲಿ ಆರಂಭಿಸಲಾಯಿತು. ಈ ಸಂಸ್ಥೆಗೂ ಕೆ ಐ ಎಫ್ ಎಸ್ ಸಂಸ್ಥೆಯಿಂದ 2.6 ಕೋಟಿ ರೂ ಸಾಲ ನೀಡಲಾಗಿದೆ. ಈ ಸಂಸ್ಥೆಯ ಆದಾಯ 24 ಕೋಟಿ ರೂ.ಗಳಾಗಿತ್ತು. ಕಾಲುಪುರ್ ವಾಣಿಜ್ಯ ಸಹಕಾರಿ ಬ್ಯಾಂಕ್ ಸಹ ಶಾ ಅವರ ಕಂಪನಿಗೆ 25 ಕೋಟಿ ರೂ ಸಾಲ ನೀಡಿರುವುದು ವರದಿಯಾಗಿದೆ. ಈ ಕಂಪನಿಯ ನಿರ್ದೇಶಕ ಮಂಡಲಿಯಲ್ಲಿ ನಿರ್ಮಾ ವಿಶ್ವವಿದ್ಯಾಲಯ ಮತ್ತು ನಿರ್ಮಾ ಸಮೂಹವೂ ಭಾಗಿಯಾಗಿದೆ. ಈ ಸಾಲಗಳಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಸೇರಿದ 5 ಕೋಟಿ ರೂ ಮೌಲ್ಯದ ಸ್ಥಿರಾಸ್ತಿಯನ್ನು ಅಡಮಾನ ಮಾಡಲಾಗಿದೆ.

ಅಮಿತ್ ಶಾ ಪರವಾಗಿ ಸೊಹ್ರಾಬುದ್ದಿನ್ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ನಾಶಪಡಿಸಲು ಯತ್ನಿಸಿ ಸಿಬಿಐ ಚಾರ್ಜಷೀಟಿಗೆ ಒಳಗಾಗಿದ್ದ ಚುಡಾಸಮಾ ಕುಸುಮ್ ಫಿನ್ ಸರ್ವ್ ನಿರ್ದೇಶಕರಲ್ಲೊಬ್ಬರಾಗಿದ್ದಾರೆ.

ಈ ಸ್ಫೋಟಕ ಮಾಹಿತಿಯನ್ನು ಸಾರ್ವಜನಿಕರ ಮುಂದಿಟ್ಟ ವೈರ್ ಪತ್ರಿಕಾ ಸಮೂಹದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಜಯ್ ಅಮಿತ್ ಶಾ ಅವರ ವಕೀಲರು ಹೇಳಿದ್ದಾರಲ್ಲದೇ ಈ ನಿಟ್ಟಿನಲ್ಲಿ ಈಗಾಗಲೇ ಕ್ರಮ ಜರುಗಿಸಿದ್ದಾರೆ.

ಜಯ್ ಶಾ ಒಬ್ಬ ಸಾಧಾರಣ ಪ್ರಜೆಯಾಗಿದ್ದು, ಅವರ ವ್ಯಾಪಾರ ವಹಿವಾಟು ಕುರಿತು ಯಾವುದೇ ರೀತಿಯ ಅಪಪ್ರಚಾರ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಶಾ ಅವರ ವಕೀಲರು ಬೆದರಿಕೆ ಒಡ್ಡಿರುವುದು ಪ್ರಕರಣಕ್ಕೆ ಮತ್ತಷ್ಟು ರಂಗು ನೀಡಿದೆ. ಆರೋಪ ಎದುರಿಸುತ್ತಿರುವ ಅಮಿತ್ ಶಾ ಪುತ್ರ ಖಾಸಗೀ ವ್ಯಕ್ತಿಯಾಗಿದ್ದರೂ, ಕೇಂದ್ರ ಸರಕಾರದ ಇಂಧನ ಮಂತ್ರಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಪಿಯೂಶ್ ಗೋಯೆಲ್ ಮತ್ತು ಉ ಪ್ರ ಸರಕಾರದ ಆರೋಗ್ಯ ಸಚಿವ ಸಿದ್ಧಾರ್ಥನಾಥ ಸಿಂಗ್ ಅವರ ಸಮರ್ಥನೆಗೆ ಇಳಿದಿರುವುದು ಅವರ ನಡೆವಳಿಕೆಯ ಔಚಿತ್ಯವನ್ನು ಪ್ರಶ್ನಿಸುವಂತೆ ಮಾಡಿದೆ.

 

ಅಮಿತ್ ಶಾ ಮಗನ ಲೂಟಿಗೆ

ಜಾಲತಾಣಗಳಲ್ಲಿ ತೀವ್ರ ಟೀಕೆ

ಇತ್ತೀಚೆಗೆ `ದ ವೈರ್’ ವೆಬ್ ತಾಣದಲ್ಲಿ ಪ್ರಕಟವಾಗಿರುವ ಸುದ್ದಿ ಪ್ರಕಾರ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಗ ಜಯ್ ಶಾ ಉದ್ಯಮವು ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅಚಾನಕ್ಕಾಗಿ ಕೋಟಿಗಟ್ಟಲೆ ಲಾಭ ಪಡೆದುಕೊಂಡಿರುವುದು ಈಗ ಕೇಸರಿ ಪಕ್ಷಕ್ಕೆ ಮುಜುಗರ ತಂದಿದೆ. ಕಾಂಗ್ರೆಸ್ ಮತ್ತು ಸಿಪಿಐ(ಎಂ)ನಂತಹ ವಿಪಕ್ಷಗಳು ಜಯ್ ಉದ್ಯಮವು ಅವರ ತಂದೆಯ ಸ್ಥಾನದಿಂದಾಗಿ ಲಾಭ ಪಡೆದುಕೊಂಡಿದೆಯೇ ಎಂದು ವಿಚಾರಣೆ ನಡೆಸುವಂತೆ ಬೇಡಿಕೆ ಇಟ್ಟಿವೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹಿಸಿದೆ. ಕುಟುಕು ಕಾರ್ಯಾಚರಣೆಯೊಂದರಲ್ಲಿ ಹಣ ಪಡೆದುಕೊಳ್ಳುವುದು ಬಹಿರಂಗವಾದ ಮೇಲೆ ಬಂಗಾರು ಲಕ್ಷ್ಮಣ್ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವಂತೆ ಅಮಿತಾ ಶಾ ಕೂಡ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಸುದ್ದಿ ಹೊರಗೆ ಬಂದ ಮೇಲಿಂದ ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ತೀವ್ರ ಟೀಕೆ ಎದುರಿಸುತ್ತಿದೆ. ಈ ವರದಿಯನ್ನು ಈಗ ಹಿಂದಿ ಮತ್ತು ಗುಜರಾತಿಗೆ ಅನುವಾದಿಸಲಾಗಿದೆ ಮತ್ತು ವಾಟ್ಸಪ್ಪಿನಲ್ಲಿ ಹರಿದಾಡುತ್ತಿದೆ. ಹಲವಾರು ವಾಟ್ಸಪ್ ಜೋಕುಗಳು ಸೃಷ್ಟಿಯಾಗಿರುವ ಜೊತೆಗೆ `ಅಮಿತ್ ಶಾರ ಲೂಟಿ’ (#ಂmiಣShಚಿhಏiಐooಣ) ಎನ್ನುವ ಹ್ಯಾಶ್ ಟಾಗಿನಲ್ಲಿ ಟ್ವಿಟರಿನಲ್ಲಿ ಟ್ರೆಂಡ್ ಆಗಿದೆ. ಜಯ್ ನಡೆಸುವ ಕಂಪನಿ ಟೆಂಪಲ್ ಎಂಟರಪ್ರೈಸಸ್ ಬಗ್ಗೆಯೂ `ಮಂದಿರ ಅಲ್ಲೇ ಕಟ್ಟುತ್ತೇವೆ’ ಎನ್ನುವ ಬಿಜೆಪಿಯ ಘೋಷಣೆಗಳ ನಿಜ ಅರ್ಥವಿದು ಎನ್ನುವ ಮಾತುಗಳು ಕೇಳಿಬಂದಿವೆ. “ಬಿಜೆಪಿ ಈಗ `ವಿಕಾಸ್ ಕಿ ಜೈ’ ಎನ್ನುವ ಘೋಷಣೆಯನ್ನು `ಜಯ್ ಕಾ ವಿಕಾಸ್’ ಎಂದು ಬದಲಿಸಿದೆ. ಈಗ ವಿಕಾಸ ಎಲ್ಲಿ ಅಡಗಿದೆ ಎನ್ನುವುದು ತಿಳಿದುಬಂದಿದೆ” ಎನ್ನುವಂತಹ ಮಾತುಗಳು ಹರಿದಾಡುತ್ತಿವೆ.