`ಹಿಂದೂ ರಾಷ್ಟ್ರಕ್ಕೆ ಎಲ್ಲಾ `ಹಿಂದೂ ರಾಷ್ಟ್ರಕ್ಕೆ ಎಲ್ಲಾ ಧರ್ಮೀಯರ ಬೆಂಬಲವಿಲ್ಲ’

ಭಾರತೀಯ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿದ್ದ ಸಾಚಾರ್ ಸಮಿತಿಯ  ಅಧ್ಯಕ್ಷರಾಗಿದ್ದ ದೆಹಲಿ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ರಾಜಿಂದರ್ ಸಾಚಾರ್  ಅವರು ನಾಗರಿಕ ಹಕ್ಕುಗಳಿಗಾಗಿ ದಶಕಗಳ ಕಾಲ ಹೋರಾಡಿದವರು. ಈಗ 93ರ ಇಳಿವಯಸ್ಸಿನ     ರಾಜಿಂದರ್ ಅವರೊಂದಿಗೆ  ಮಾತನಾಡಿದಾಗ :

  • ಮುಸ್ಲಿಮರ ವಿರುದ್ಧದ ದ್ವೇಷದ ಅಪರಾಧ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಇದು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ದ್ಯೋತಕವೇ ಅಥವಾ ಬೇರೇನಾದರೂ ?

ಇದು ನಿಜ. ಆದರೆ ಇದು ಕೇವಲ ಅಸಹಿಷ್ಣುತೆಯ ಸಂಕೇತವಲ್ಲ ಅದಕ್ಕಿಂತಲೂ ಕೆಟ್ಟದ್ದು. ಬಿಜೆಪಿ ಉತ್ತರ ಪ್ರದೇಶದಲ್ಲಿ ವಿಜಯ ಸಾಧಿಸಿದ ನಂತರ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರುವುದರಿಂದ ಈ ಅಪಾಯ ಇನ್ನಷ್ಟು ಹೆಚ್ಚಾಗಿದೆ. ಇದು ಆರೆಸ್ಸೆಸ್ಸಿನ ಉದ್ದೇಶಪೂರ್ವಕ ಕ್ರಮ. ಪ್ರಧಾನಿ ಮೋದಿ ಕೇವಲ ಆರೆಸ್ಸೆಸ್ಸಿನ ಮುಖ ಮಾತ್ರ ಎಂಬುದನ್ನು ನಾವು ಮರೆಯಬಾರದು. ಈ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವರು ಕಾರ್ಪೊರೇಟ್ ಕಂಪೆನಿಗಳ ಬೆಂಬಲದೊಂದಿಗೆ ಅಭಿವೃದ್ಧಿಯ ಹರಿಕಾರರು ಎಂಬಂತೆ ಬಿಂಬಿಸಲ್ಪಟ್ಟರು.  2019ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಗುರಿಯನ್ನು ಆರೆಸ್ಸೆಸ್ ಹೊಂದಿದೆ.  ಆದರೆ ಈ ಅಪಾಯವನ್ನು ವಿಪಕ್ಷಗಳು ಗುರುತಿಸಿಲ್ಲ. ಎಲ್ಲಾ ಹಿಂದೂಗಳು ಆರೆಸ್ಸೆಸ್ಸಿನ ಬೆಂಬಲಿಗರಲ್ಲ.

  • ಹಿಂದೂ ರಾಷ್ಟ್ರ ನಿರ್ಮಿಸುವತ್ತ ಆರೆಸ್ಸೆಸ್ ಪ್ರಮುಖ ಹೆಜ್ಜೆಗಳನ್ನಿಟ್ಟರೆ ಏನಾಗಬಹುದು ?

ಅದು ಸಾಧ್ಯವಿಲ್ಲ. ಆದರೆ ನಾನು ಹಾಗೆ ಹೇಳುವಾಗ ಅದರ ಅರ್ಥ ಇಂತಹ ಒಂದು ಕ್ರಮಕ್ಕೆ ಸಾಕಷ್ಟು ವಿರೋಧಗಳು ಎದುರಾಗಬಹುದೆಂದು. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿದ್ದೇ ಆದಲ್ಲಿ ಅದರ ಅಭಿವೃದ್ಧಿ ಸಾಧ್ಯವಿಲ್ಲ. ದೇಶದ ವಿವಿಧೆಡೆ  ಹಿಂದೂಗಳೇ ಇದನ್ನು ವಿರೋಧಿಸಲಿದ್ದಾರೆ, ಇದುವೇ ದೊಡ್ಡ ತೊಡಕಾಗುವುದು. ಹಿಂದೂ ರಾಷ್ಟ್ರದ ವಿರುದ್ಧ ಇಂದು ಕೆಲವೇ ಕೆಲವು ಮಂದಿ ದನಿ ಎತ್ತುತ್ತಿದ್ದರೂ ಹೆಚ್ಚಿನ ಸಂಖ್ಯೆಯ ಜನರು ಹಿಂದೂ ರಾಷ್ಟ್ರದ ಪರವಾಗಿಲ್ಲ. ಮುಸ್ಲಿಮರ ಹೊರತಾಗಿ ಕ್ರೈಸ್ತರು ಹಾಗೂ ಸಿಕ್ಖರು ಕೂಡ ಅದಕ್ಕೆ ವಿರುದ್ಧವಾಗಿದ್ದಾರೆ.

  • ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿರುವುದರಿಂದ ಅವರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುವ ಅಗತ್ಯವಿಲ್ಲವೆಂದು ಕೇಂದ್ರ ಸಚಿವರ ಸಹಿತ ಕೆಲ ಬಿಜೆಪಿ ನಾಯಕರು ಹೇಳುತ್ತಿದ್ದಾರಲ್ಲ ?

ಮುಸ್ಲಿಮರು ಮಾತ್ರವಲ್ಲ ಕ್ರೈಸ್ತರು, ಜೈನರು ಮತ್ತು ಸಿಕ್ಖರು ಕೂಡ ಧಾರ್ಮಿಕ ಅಲ್ಪಸಂಖ್ಯಾತರು. ಬಹುಸಂಖ್ಯಾತ ಸಮುದಾಯಕ್ಕಿಂತ ಅವರ ಜನಸಂಖ್ಯೆ ಕಡಿಮೆಯಿರುವುದರಿಂದ ಅವರನ್ನು ಅಲ್ಪಸಂಖ್ಯಾತ ಸಮುದಾಯಗಳೆಂದು ಪರಿಗಣಿಸಲಾಗುತ್ತಿದೆ. ಮುಸ್ಲಿಮರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸದೇ ಇರುವುದು ಸಾಧ್ಯವೇ ಇಲ್ಲ. ಮುಸ್ಲಿಮರನ್ನು ಅಲ್ಪಸಂಖ್ಯಾತರೆಂದು ನಾವು ಪರಿಗಣಿಸದೇ ಇದ್ದರೆ ನಾವು ವಿಶ್ವಸಂಸ್ಥೆಯ ಸದಸ್ಯತ್ವವನ್ನು ಕಳೆದುಕೊಳ್ಳುತ್ತೇವೆ. ಪ್ರತಿ ದೇಶದಲ್ಲಿ ಅಲ್ಪಸಂಖ್ಯಾತರಿಗೆ  ವಿಶೇಷ ಆಯೋಗ ರಚಿಸಬೇಕೆಂದು ವಿಶ್ವ ಸಂಸ್ಥೆಯ ಅಲ್ಪಸಂಖ್ಯಾತ ಮಂಡಳಿ ಸ್ಪಷ್ಟವಾಗಿ ಹೇಳಿದೆ.

  • ಸಾಚಾರ್ ಸಮಿತಿ ತನ್ನ ವರದಿ ಸಲ್ಲಿಸಿ ಒಂದು ದಶಕವಾಗಿದೆ. ಜಾತ್ಯತೀತ ದೇಶವೊಂದರಲ್ಲಿ ಇಂತಹ ಸಮಿತಿ ರಚಿಸಿರುವುದೇ ತಪ್ಪು ಎಂಬ ಆರೆಸ್ಸೆಸ್ ಮತ್ತು ಬಿಜೆಪಿ ಅಭಿಪ್ರಾಯದ ಬಗ್ಗೆ ಏನಂತೀರಿ ?

ಇತರ ಧರ್ಮಗಳ ಜನರಿಗೆ ಹೋಲಿಸಿದಾಗ ಮುಸ್ಲಿಮರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡುವ ಕಾರ್ಯ ಅದಕ್ಕೆ ವಹಿಸಲಾಗಿತ್ತು.  ಈ ವರದಿ ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ ವರದಿಯನ್ನು ಪರಿಗಣಿಸಿದಾಗ ಮುಸ್ಲಿಮರು  ಅತ್ಯಂತ ಕೆಳಗೆ ಇದ್ದಾರೆಂದು ತಿಳಿಯುತ್ತದೆ.

  • ಮುಸ್ಲಿಮರ ಓಲೈಕೆ ಬಗ್ಗೆ  ನಿಮ್ಮ ಅಭಿಪ್ರಾಯ ?

ಮುಸ್ಲಿಮರು ಹಲವು ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ಹಿಂದೂಗಳೇ ಆಗಿರುವ ದಲಿತರ ಉದ್ಧಾರಕ್ಕೆ ಕ್ರಮ ಕೈಗೊಂಡಾಗ ಅದನ್ನು ದಲಿತರ ಓಲೈಕೆಯೆನ್ನಲಾಗುತ್ತದೆಯೇ ? ಮುಸ್ಲಿಮರೂ ಈ ದೇಶದ ನಾಗರಿಕರು, ಅವರ ಸ್ಥಿತಿಗತಿಗಳು ಸುಧಾರಿಸುತ್ತಿವೆ. ಆದರೆ ದೇಶಕ್ಕೆ  ಸಮಾನತೆಯ ಆಯೋಗದ ಅಗತ್ಯವಿದೆ. ಹಿಂದೂಗಳು ಮತ್ತು ಮುಸ್ಲಿಮರು ಒಗ್ಗೂಡುವುದೇ ಭಾರತದ ಸಮಸ್ಯೆಗಳಿಗೆ ಪರಿಹಾರ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು.