`ಲಂಡನ್ ಅಭಿವೃದ್ಧಿಯಲ್ಲಿ ಎಲ್ಲಾ ಸಮುದಾಯಗಳ ಮಹತ್ತರ ಪಾತ್ರವಿದೆ’

ಲಂಡನ್ ಮೇಯರ್ ಸಾದಿಖ್ ಖಾನ್ ಅವರು ಪ್ರಸ್ತುತ ಭಾರತ ಪ್ರವಾಸದಲ್ಲಿದ್ದಾರೆ. ಲಂಡನ್ನಿನ ಪ್ರಥಮ ಮುಸ್ಲಿಂ ಮೇಯರ್ ಆಗಿರುವ ಅವರು ಭಾರತ ಮತ್ತು ಇಂಗ್ಲೆಂಡ್ ನಡುವಿನ ಸಂಬಂಧಗಳನ್ನು ಇನ್ನಷ್ಟು  ಬಲಪಡಿಸಬೇಕೆಂಬ ಹುಮ್ಮಸ್ಸಿನಲ್ಲಿದ್ದಾರೆ. ವಾಯು ಮಾಲಿನ್ಯ, ಹವಾಮಾನ ಬದಲಾವಣೆ ಮುಂತಾದ ಸಮಾನ ಸಮಸ್ಯೆಗಳನ್ನು ಭಾರತದ ನಗರಗಳು ಮತು ಲಂಡನ್ ಎದುರಿಸುತ್ತಿರುವುದರಿಂದ ಇಂತಹ ಸವಾಲುಗಳನ್ನು ಎದುರಿಸಲು ಪರಸ್ಪರ ಸಹಕಾರ ಅಗತ್ಯವೆಂಬುದನ್ನೂ ಅವರು ಮನಗಂಡಿದ್ದಾರೆ. ಅವರೊಂದಿಗಿನ ಸಂದರ್ಶನದ ಆಯ್ದ ಭಾಗಗಳು

  •  ಇಂಗ್ಲೆಂಡನ್ನು ಯುರೋಪಿನ ಪ್ರವೇಶ ದ್ವಾರ (ಗೇಟ್ ವೇ) ಎಂದು ಪ್ರಧಾನಿ ನರೇಂದ್ರ ಮೋದಿ ಒಮ್ಮೆ ಬಣ್ಣಿಸಿದ್ದರು. ಇಂಗ್ಲೆಂಡ್ ಯುರೋಪಿಯನ್ ಯುನಿಯನ್ ತ್ಯಜಿಸಿರುವುದರಿಂದ ಭಾರತ ಮತ್ತು ಇಂಗ್ಲೆಂಡ್ ಸಂಬಂಧಗಳ ಮೇಲೆ ಅದು ಪ್ರಭಾವ ಬೀರುವುದೇ ?

`ಬ್ರೆಕ್ಸಿಟ್’ ಬಗ್ಗೆ ಭಾರತದಲ್ಲಿಯೂ ಹಲವರು ಚಿಂತೆಗೀಡಾಗಿದ್ದಾರೆ. ಬ್ರಿಟನ್ ಈಗಾಗಲೇ ಅದರಿಂದ ಹೊರ ಬಂದಿರುವುದರಿಂದ ವಿಶ್ವದ ಇತರ ದೇಶಗಳೊಂದಿಗಿನ ಅದರ ಸಂಬಂಧ ಏನಾಗುವುದೆಂಬ ಆತಂಕ ಹಲವರಿಗಿದೆ. ಬ್ರೆಕ್ಸಿಟ್ ಹೊರತಾಗಿಯೂ ಲಂಡನ್ ಎಲ್ಲಾ ದೇಶಗಳೊಂದಿಗೆ ಹಿಂದಿನಂತೆಯೇ ಮುಕ್ತವಾಗಿ ವ್ಯವಹರಿಸಲಿದೆ. ವ್ಯಾಪಾರ ವಹಿವಾಟುಗಳಿಗೆ, ಹೂಡಿಕೆಗಳಿಗೆ ಹಾಗೂ ಪ್ರತಿಭೆಗಳಿಗೆ ಅದು ಸದಾ ತೆರೆದಿದೆ. ಜಗತ್ತಿನ ಬೇರ್ಯಾವುದೇ ನಗರಕ್ಕಿಂತ ಅತ್ಯಂತ ಹೆಚ್ಚು ಸ್ವಾಗತಾರ್ಹವಾಗಿರುವ, ಉದ್ಯಮಶೀಲವಾಗಿರುವ ಹಾಗೂ ಹೊಸ ಆವಿಷ್ಕಾರಗಳನ್ನು ಉತ್ತೇಜಿಸುವ ನಗರವಾಗಿದೆ.

  • ಹಲವಾರು ಭಾರತೀಯ ನಗರಗಳಂತೆಯೇ ಲಂಡನ್ ಕೂಡ ಪರಿಸರ ಮಾಲಿನ್ಯದ ಸಮಸ್ಯೆ ಎದುರಿಸುತ್ತಿದೆ. ರಾಜಧಾನಿ ದಿಲ್ಲಿ ವಾಯು ಮಾಲಿನ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ಲಂಡನ್ ಅನುಭವದಿಂದ ಏನಾದರೂ ಪಾಠ ಕಲಿಯಬಹುದೇ ?

ವಾಯು ಮಾಲಿನ್ಯ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಲಂಡನ್ ಸಹಿತ ಜಗತ್ತಿನಾದ್ಯಂತ ಅದು ಒಂದು ಪ್ರಮುಖ ಸಮಸ್ಯೆಯಾಗಿ ಬಿಟ್ಟದೆ. ಮೇಯರ್ ಆಗಿ ಲಂಡನ್ನಿನ ವಾಯು ಗುಣಮಟ್ಟವನ್ನು ಸುಧಾರಿಸುವುದು ನನ್ನ ಪ್ರಥಮ ಆದ್ಯತೆಯಾಗಿದೆ. ಜಗತ್ತಿನ ಬೇರಾವುದೇ ನಗರ  ಕೈಗೊಳ್ಳದಂತಹ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಈ ನಿಟ್ಟಿನಲ್ಲಿ ನಾವು ಆರಂಭಿಸಲಿದ್ದೇವೆ. ಸೆಂಟ್ರಲ್ ಲಂಡನ್ ಪ್ರದೇಶವನ್ನು ಪ್ರವೇಶಿಸುವ ಹಳೆಯ ಹಾಗೂ ಮಾಲಿನ್ಯಕಾರಿ ವಾಹನಗಳಿಗೆ ಹೆಚ್ಚಿನ ಶುಲ್ಕ ವಿಧಿಸುವುದು ಹಾಗೂ ನಮ್ಮ ಸಾರ್ವಜನಿಕ ಸಾರಿಗೆ ಬಸ್ಸುಗಳನ್ನು ಹೆಚ್ಚು ಸ್ವಚ್ಛ ಹಾಗೂ ಹಸಿರಾಗಿಸುವುದು ನಮ್ಮ ಯೋಜನೆಯಲ್ಲಿ ಸೇರಿದೆ. ಲಂಡನ್ನಿನಲ್ಲಿ ವಾಯು ಮಾಲಿನ್ಯ ಸಮಸ್ಯೆಯನ್ನು ನಾವು ನಿಭಾಯಿಸುವ ರೀತಿಯ ಕುರಿತಾಗಿ ನಮ್ಮ ಅನುಭವವನ್ನು ಇತರರೊಡನೆ ಹಂಚಿಕೊಳ್ಳಲು ನನಗೆ ಸಂತೋಷವಿದೆ. ನಮ್ಮಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆಯೆಂದು ನಾನು ಹೇಳುವುದಿಲ್ಲ. ಈ ಸಮಸ್ಯೆಯನ್ನು ಒಂದು ನಗರ ಒಬ್ಬಂಟಿಯಾಗಿ ಪರಿಹರಿಸಲು ಸಾಧ್ಯವಿಲ್ಲ. ಈ ಸಮಸ್ಯೆ ನಗರಗಳ ಹಾಗೂ ದೇಶಗಳ ಗಡಿ ದಾಟಿ ಎಲ್ಲೆಡೆ ಪಸರಿಸಿದೆ. ಈ ಜಗತ್ತಿನಲ್ಲಿ ಲಂಡನ್, ದಿಲ್ಲಿ, ಮುಂಬೈ ಹೀಗೆ ವಿವಿಧ ನಗರಗಳ ಹಣೆಬರಹ ಕೂಡ ಒಂದಕ್ಕೊಂದು  ಹೊಂದಿಕೊಂಡಿದೆ. ಜಂಟಿಯಾಗಿ ಕಾರ್ಯನಿರ್ವಹಿಸಿದರೆ ಹೊಸ ಕಲ್ಪನೆಗಳು ಹಾಗೂ ಯೋಜನೆಗಳಿಗೆ ದಾರಿ ಮಾಡಿ ಕೊಟ್ಟು ನಮ್ಮ ನಗರಗಳ ವಾಯು ಮಾಲಿನ್ಯ ಸಮಸ್ಯೆಯ ತೀವ್ರತೆಯನ್ನು ತಗ್ಗಿಸಲು ನಾವು ಪ್ರಯತ್ನಿಸಬಹುದಾಗಿದೆ.

  • ಇಂಗ್ಲೆಂಡ್ ಹಿಂದಿನಿಂದಲೂ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಜತೆ ಆತ್ಮೀಯ ಆದರೆ ವಿಭಿನ್ನ ಸಂಬಂಧ ಹೊಂದಿದೆ. ನಾಯಕರು ಒಂದೇ ಪ್ರವಾಸದಲ್ಲಿ ಎರಡೂ ದೇಶಗಳನ್ನು ಭೇಟಿ ಮಾಡುವ ಸಂಪ್ರದಾಯವಿರಲಿಲ್ಲ. ಇದು ಒಂದು ತಪ್ಪಾಗಿತ್ತೇ ? ನೀವು ಮಾತ್ರ ಭಾರತ ಭೇಟಿಯ ನಂತರ ಪಾಕಿಸ್ತಾನಕ್ಕೆ ಹೋಗಲಿದ್ದೀರಿ. ನಿಮ್ಮ ಪ್ರವಾಸದ ಸಂದೇಶವೇನು ?

ಹೀಗೆ ಒಂದೇ ಪ್ರವಾಸದ ಸಂದರ್ಭ ಎರಡೂ ದೇಶಗಳಿಗೆ ಭೇಟಿ ನೀಡುತ್ತಿರುವ ಪ್ರಥಮ ಬ್ರಿಟಿಷ್ ರಾಜಕಾರಣಿ ನಾನಾಗಿದ್ದೇನೆಂಬುದಕ್ಕೆ ನನಗೆ ಹೆಮ್ಮೆಯಿದೆ. ನನ್ನ ಅಜ್ಜ ಅಜ್ಜಿ ಮತ್ತು ಹೆತ್ತÀವರು ಭಾರತದಲ್ಲಿಯೇ ಹುಟ್ಟಿದವರಾಗಿರುವುದರಿಂದ ಹಾಗೂ ನನ್ನ ಹೆತ್ತವರು ನಂತರ ಪಾಕಿಸ್ತಾನದಿಂದ ಲಂಡನ್ನಿಗೆ ಸ್ಥಳಾಂತರಗೊಂಡವರಾಗಿರುವುದರಿಂದ ಎರಡೂ ದೇಶಗಳು ನನಗೆ ತೀರಾ ಆತ್ಮೀಯ. ಎರಡನೇ ವಿಶ್ವಯುದ್ಧದ ಬಳಿಕ ಎರಡೂ ದೇಶಗಳಿಂದ ಸಾವಿರಾರು ಜನರು ಹೊಸ ನೆಲೆ ಅರಸುತ್ತಾ ಇಂಗ್ಲೆಂಡಿಗೆ ಬಂದಿದ್ದಾರೆ. ಎರಡೂ ದೇಶಗಳ ಬಹಳಷ್ಟು ಪ್ರತಿಭಾವಂತರು ಇಂಗ್ಲೆಂಡಿನ ತಂತ್ರಜ್ಞಾನ, ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಮಹತ್ತರ ಕೆಲಸ ನಿರ್ವಹಿಸುತ್ತಿದ್ದಾರೆ. ಎರಡೂ ಸಮುದಾಯಗಳು ಲಂಡನ್ನಿನ ಯಶಸ್ಸಿನಲ್ಲಿ ಪಾತ್ರ ವಹಿಸಿವೆ. ಭಾರತ ಮತ್ತು ಪಾಕಿಸ್ತಾನದ ಪ್ರಮುಖ ನಗರಗಳು ಹಾಗೂ ಲಂಡನ್ ನಡುವೆ ಈಗಿರುವ ಸಂಬಂಧವನ್ನು ಇನ್ನಷ್ಟು ವೃದ್ಧಿಸುವುದೇ ನನ್ನ ಈ ಭೇಟಿಯ ಉದ್ದೇಶ.

  • ನಿಮ್ಮ ವಿರುದ್ಧ ನಡೆದ ಅಪಪ್ರಚಾರದ ಹೊರತಾಗಿಯೂ ನೀವು ಮೇಯರ್ ಆಗಿ ಆಯ್ಕೆಯಾದವರು. ಅಸಹಿಷ್ಣುತೆ ಹೆಚ್ಚುತ್ತಿರುವ ಈ ಸಮಯದಲ್ಲಿ ನಿಮ್ಮ ಸಂದೇಶವೇನು ?

ಅಪಪ್ರಚಾರದ ಹೊರತಾಗಿಯೂ ನನ್ನ ವಿಜಯವು ಭಯದ ಎದುರು ಭರವಸೆಯ ವಿಜಯ ಹಾಗೂ ವಿಘಟನೆಯ ಎದುರು ಏಕತೆಯ ಜಯವಾಗಿದೆ. ಲಂಡನ್ನಿನಂತಹ ಅಭಿವೃದ್ಧಿಶೀಲ ನಗರವನ್ನು ಪ್ರತಿನಿಧಿಸಲು ನನಗೆ ಹೆಮ್ಮೆಯಿದೆ.