ಪೊಲೀಸರಿಂದಲೇ ಅಪರಾಧ ಕೃತ್ಯ ಹೆಚ್ಚಳ ಕಳವಳಕಾರಿ

ಪೊಲೀಸರು ದರೋಡೆ ಮತ್ತು ಕಳ್ಳತನದಲ್ಲಿ ತೊಡಗುವುದು ಅಪರೂಪದ ಸಂಗತಿಯಾಗಿದೆ. ಇಂತಹ ಘಟನೆಗಳು ಪದೇಪದೇ ನಡೆಯುತ್ತಿರುವುದು ಆಘಾತಕಾರಿಯಾಗಿದೆ.

  • ಟಿ ಡಿ ವಿ ಗುರುಪ್ರಸಾದ್

ಮಾಜಿ ಡಿಜಿಪಿ

ಕೆಲವು ದಿನಗಳ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ `ಪೊಲೀಸರು ಸಮವಸ್ತ್ರದಲ್ಲಿರುವ ಕ್ರಿಮಿನಲ್ಲುಗಳು’ ಎಂದು ಹೇಳಿದಾಗ ದೆಹಲಿ ಪೊಲೀಸರು ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೂ ಮುನ್ನ ನ್ಯಾಯಾಧೀಶರೊಬ್ಬರು ಇದೇ ರೀತಿಯ ಹೇಳಿಕೆ ನೀಡಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದರು.  ಇತ್ತೀಚೆಗೆ ಬೆಂಗಳೂರಿನಲ್ಲಿ  ಸೇವೆಯಲ್ಲಿರುವ ಕೆಲವು ಪೊಲೀಸರು ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ನೋಡಿದರೆ ಈ ರೀತಿಯ ಅಭಿಪ್ರಾಯಗಳು ನ್ಯಾಯಯುತವಾದದ್ದು ಎನಿಸುತ್ತವೆ.

ಕಳೆದ ವಾರದಲ್ಲೇ ಬೆಂಗಳೂರು ಪೊಲೀಸರು  ನಿವೃತ್ತ ಡಿವೈಎಸ್‍ಪಿ ಒಬ್ಬರನ್ನು ಬಂಧಿಸಿದ್ದು, ನೋಟು ಅಮಾನ್ಯೀಕರಣದ ನಂತರ ವ್ಯಾಪಾರಿಯೊಬ್ಬನ ದರೋಡೆ ಮಾಡಿದ ಪ್ರಕರಣದಲ್ಲಿ ಏಳು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಹಲವು ವರ್ಷಗಳ ಹಿಂದೆ ಮೈಸೂರಿನ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ಕೇರಳಕ್ಕೆ ಹೋಗುತ್ತಿದ್ದ ಬಸ್ ಒಂದನ್ನು ನಿಲ್ಲಿಸಿ ಬಸ್ಸಿನಲ್ಲಿದ್ದ ಪ್ರಯಾಣಿಕನೊಬ್ಬನ ಮೇಲೆ ಹಲ್ಲೆ ನಡೆಸಿ ಅವನ ಬಳಿ ಇದ್ದ ಹಣವನ್ನು ದೋಚಿದ್ದರು. ಪ್ರಯಾಣಿಕ ಸಲ್ಲಿಸಿದ ದೂರಿನ ಮೇರೆಗೆ ಸೇವೆಯಲ್ಲಿದ್ದ ಹಲವು ಪೊಲೀಸ್ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಾಗಿತ್ತು.

ಈ ಹಿಂದೆ ಸಾಮಾನ್ಯವಾಗಿ ಪೊಲೀಸರ ವಿರುದ್ಧ ಲಂಚಗುಳಿತನದ ಆರೋಪ ಹೆಚ್ಚಾಗಿ ಕೇಳಿಬರುತ್ತಿತ್ತು. ಅಥವಾ ಜೈಲಿನಲ್ಲಿ ನಡೆಯುವ ದೌರ್ಜನ್ಯಗಳ ವಿರುದ್ಧ ದನಿ ಕೇಳಿಬರುತ್ತಿತ್ತು. ಕೆಲವು ಸಂದರ್ಭಗಳಲ್ಲಿ ಕಳವು ಮಾಡಿದ ವಸ್ತುಗಳನ್ನು ಹಂಚಿಕೊಂಡಿದ್ದರೆಂಬ ಆರೋಪಗಳು ಕೇಳಿಬಂದಿತ್ತು. ಆದರೆ ಪೊಲೀಸರು ದರೋಡೆ ಮತ್ತು ಕಳ್ಳತನದಲ್ಲಿ ತೊಡಗುವುದು ಅಪರೂಪದ ಸಂಗತಿಯಾಗಿದೆ. ಇಂತಹ ಘಟನೆಗಳು ಪದೇಪದೇ ನಡೆಯುತ್ತಿರುವುದು ಆಘಾತಕಾರಿಯಾಗಿದೆ.

ಶೀಘ್ರ ಹಣ ಗಳಿಸುವ ಲಾಲಸೆಯೇ ಇಂತಹ ಕೃತ್ಯಗಳಿಗೆ ಮೂಲ ಕಾರಣವಾಗಿರುತ್ತದೆ. ಆದರೆ ಇಂತಹ ಮನೋಭಾವ ಉಳ್ಳವರು ಪೊಲೀಸ್ ನೌಕರಿಗೆ ಹೇಗೆ ಪ್ರವೇಶ ಪಡೆಯುತ್ತಾರೆ ಎಂಬ ಪ್ರಶ್ನೆ ಮುಖ್ಯವಾಗುತ್ತದೆ.  ಅಪರಾಧಿ ಮನೋಭಾವವನ್ನು ಪರೀಕ್ಷಿಸುವ ಯಾವುದೇ ವಿಧಾನವನ್ನು ಪೊಲೀಸ್ ನೇಮಕಾತಿಯಲ್ಲಿ ಅನುಸರಿಸದಿರುವುದೂ ಇದಕ್ಕೆ ಕಾರಣವಾಗಿದೆ.

ಪೊಲೀಸ್ ನೌಕರಿಗೆ ನಡೆಸಲಾಗುವ ಸಂದರ್ಶನದಲ್ಲಿ ಮನಶ್ಶಾಸ್ತ್ರಜ್ಞರೂ ಭಾಗಿಯಾಗುತ್ತಾರೆ. ಆದರೆ ಈ ಮನಶ್ಶಾಸ್ತ್ರಜ್ಞರಿಂದ ಯಾವುದೇ ಅಭ್ಯರ್ಥಿಯೂ ತಿರಸ್ಕøತವಾದ ದಾಖಲೆಗಳಿಲ್ಲ. ಕ್ರಿಮಿನಲ್ ಮನೋಭಾವ ಇರುವ ವ್ಯಕ್ತಿ ಪೊಲೀಸ್ ನೌಕರಿಗೆ ಸೇರದಂತೆ ತಡೆಗಟ್ಟುವುದು ದುಸ್ತರವಾದರೂ ಹಿರಿಯ ಪೊಲೀಸ್ ಅಧಿಕಾರಿಗಳು ಕಿರಿಯ ಪೊಲೀಸ್ ಸಿಬ್ಬಂದಿಗೆ ಮೌಲ್ಯಯುತ ಶಿಕ್ಷಣ ಮತ್ತು ತರಬೇತಿ ನೀಡುವ ಮೂಲಕ ಪ್ರಾಮಾಣಿಕತೆಯನ್ನು ಮೂಡಿಸಲು ಪ್ರಯತ್ನಿಸುತ್ತಾರೆ.

ಇಲಾಖೆಯಲ್ಲಿ ಬಡ್ತಿ ನೀಡುವ ಸಂದರ್ಭದಲ್ಲೂ ಹಿರಿಯ ಅಧಿಕಾರಿಗಳ ಅಭಿಪ್ರಾಯಗಳನ್ನೇ ಪರಿಗಣಿಸಲಾಗುತ್ತದೆ.  ಸಶಸ್ತ್ರ ಪಡೆಗಳಲ್ಲಿ ಮತ್ತು ಕೇಂದ್ರ ಪೊಲೀಸ್ ಇಲಾಖೆಯಲ್ಲಿ ವಾರ್ಷಿಕ ಸಾಧನೆಯ ಪರಾಮರ್ಶೆಯ ಸಂದರ್ಭದಲ್ಲಿ ಇಂತಹ ಮನೋವೃತ್ತಿಯುಳ್ಳವರನ್ನು ನಿರ್ದಾಕ್ಷಿಣ್ಯವಾಗಿ ನೌಕರಿಯಿಂದ ವಜಾ ಮಾಡಲಾಗುತ್ತದೆ.

ಎನ್ ಸಿ ಆರ್ ಬಿ ಮಾಹಿತಿಯ ಪ್ರಕಾರ ಪೊಲೀಸ್ ಸಿಬ್ಬಂದಿಯ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳ ಸಂಖ್ಯೆ 2013ರಲ್ಲಿ 1989ರಷ್ಟಿದ್ದು 2014ರಲ್ಲಿ 2600 ಮತ್ತು 2015ರಲ್ಲಿ 5526ರಷ್ಟಾಗಿದೆ.  ಕೇರಳದಲ್ಲಿ 3080 ಪ್ರಕರಣಗಳು ದಾಖಲಾಗಿದ್ದು ಕರ್ನಾಟಕದಲ್ಲಿ 84 ಮೊಕದ್ದಮೆಗಳು ದಾಖಲಾಗಿವೆ. 2015ರಲ್ಲಿ ನಡೆದ 5526 ಘಟನೆಗಳಲ್ಲಿ 4367ರಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು  1512 ಪ್ರಕರಣಗಳಲ್ಲಿ ಅಪರಾಧಿಗಳನ್ನು ಬಂಧಿಸಲಾಗಿದೆ. ಆದರೆ ಶಿಕ್ಷೆಗೊಳಗಾಗಿರುವ ಪೊಲೀಸ್ ಸಿಬ್ಬಂದಿಯ ಸಂಖ್ಯೆ ಕೇವಲ 25.

ಪೊಲೀಸ್ ನೌಕರಿಗೆ ನೇಮಕಾತಿ ಮಾಡುವ ಸಂದರ್ಭದಲ್ಲೇ ಮಾನಸಿಕ ಪರೀಕ್ಷೆ ಮಾಡುವ ಮೂಲಕ ಉತ್ತಮ ಮನೋವೃತ್ತಿಯುಳ್ಳವರನ್ನು ನೇಮಿಸುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ. ಅಪರಾಧಗಳ ಬಗ್ಗೆ ಮಾಹಿತಿ ನೀಡುವವರಿಗೆ ಸೂಕ್ತ ರಕ್ಷಣೆ ನೀಡುವುದರ ಮೂಲಕ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗುವ ಪೊಲೀಸರನ್ನು ನಿಯಂತ್ರಿಸಲು ಸಾಧ್ಯ. ( ಕೃಪೆ : ಡೆಕ್ಕನ್ ಹೆರಾಲ್ಡ್ )