ಕೇರಳ ಅಲಪುಝ ಚರ್ಚ್ ಹಿಂದೆ ಹಿಂದೂ ದೇವಳವಾಗಿತ್ತು ಎಂದ ಬಿಜೆಪಿ ನಾಯಕ

ಕೇರಳದ ಅಲಪುಝ ಜಿಲ್ಲೆಯ ಅರ್ತುಂಕಲ್ ಎಂಬಲ್ಲಿರುವ ಸೈಂಟ್ ಆಂಡ್ರಿವ್ಸ್ ಬ್ಯಾಸಿಲಿಕಾ ಒಂದೊಮ್ಮೆ ಶಿವ ದೇವಾಲಯವಾಗಿತ್ತು ಎಂದು ಹೇಳುವ ಮೂಲಕ ಬಿಜೆಪಿ ನಾಯಕ ಟಿ ಜಿ ಮೋಹನದಾಸ್ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ. ಇದು ಸಾಲದೆಂಬಂತೆ ಟ್ವೀಟೊಂದನ್ನು ಮಾಡಿದ ಅವರು ಹಿಂದೂಗಳು ಈ ಸ್ಥಳವನ್ನು ತಮ್ಮದಾಗಿಸಬೇಕೆಂದೂ ಹೇಳಿ ರಾಜ್ಯದಲ್ಲಿ ಕ್ರೈಸ್ತರನ್ನು ಮನವೊಲಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಿರುವ ಬಿಜೆಪಿ ನಾಯಕತ್ವಕ್ಕೆ ತಲೆನೋವು ತಂದಿದ್ದಾರೆ.

ಮೂಲತಃ ಪೋರ್ಚುಗೀಸ್ ಮಿಷನರಿಗಳಿಂದ 16ನೇ ಶತಮಾನದಲ್ಲಿ ನಿರ್ಮಿತವಾಗಿರುವ ಅರ್ತುಂಕಲ್ ಚರ್ಚ್ ಕೇರಳದಲ್ಲಿ ಕ್ರೈಸ್ತರ ಅತ್ಯಂತ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದಾಗಿದೆ. ಇದೀಗ ಮೋಹನದಾಸ್ ಅವರ ಹೇಳಿಕೆ ಕ್ರೈಸ್ತರಲ್ಲೂ ಆತಂಕಕ್ಕ್ಕೆ ಕಾರಣವಾಗಿದೆ. ಆರೆಸ್ಸೆಸ್ ಪ್ರಚಾರಕರೂ ಆಗಿರುವ ಮೋಹನದಾಸ್ ಆಗಸ್ಟ್ 26ರಂದು ತಮ್ಮ ಟ್ವೀಟೊಂದರಲ್ಲಿ, ಚರ್ಚಿನಲ್ಲಿ ಉತ್ಖನನ ನಡೆಸಿದರೆ ಅಲ್ಲಿ ದೇವಳದ ಅವಶೇಷಗಳು ಕಂಡು ಬರುವುದೆಂದೂ ಹೇಳಿಕೊಂಡಿದ್ದರು.

“ನಿರ್ಮಾಣದ ವೇಳೆ ಚರ್ಚಿನ ಬಲಿಪೀಠ ಬೀಳುತ್ತಲೇ ಇದ್ದುದರಿಂದ ಅಲ್ಲಿನ ಧರ್ಮಗುರುವೊಬ್ಬರು ಜ್ಯೋತಿಷಿಯೊಬ್ಬರನ್ನು ಸಂಪರ್ಕಿಸಿದಾಗ ಮೂಲ ದೇವಳವಿದ್ದ ಸ್ಥಳದ ಗರ್ಭಗುಡಿಯಿಂದ ಸ್ವಲ್ಪ ದೂರದಲ್ಲಿ ಅದನ್ನು ನಿರ್ಮಿಸುವಂತೆ ಸಲಹೆ ನೀಡಲಾಗಿತ್ತು. ಈ ದೇವಳವನ್ನು ಮತ್ತೆ ಮರಳಿ ಪಡೆಯುವುದು ಪ್ರತಿಯೊಬ್ಬ ಹಿಂದೂವಿನ ಜವಾಬ್ದಾರಿಯಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದರು.

ಅನಗತ್ಯ ವಿವಾದವೊಂದನ್ನು ಕೆದಕಿದ್ದಕ್ಕಾಗಿ ಈಗಾಗಲೇ ಮೋಹನದಾಸ್ ಅವರು ಬಿಜೆಪಿ ನಾಯಕರಿಂದ ಟೀಕೆಗೊಳಗಾಗಿದ್ದಾರೆ. “ಇದು ಅವರ ವೈಯಕ್ತಿಕ ಅಭಿಪ್ರಾಯ. ಬಿಜೆಪಿಗೂ ಅದಕ್ಕೂ ಸಂಬಂಧವಿಲ್ಲ. ಈ ವಿಚಾರವನ್ನು ಪಕ್ಷದ ಯಾವುದೇ ಸಭೆಯಲ್ಲಿ ಚರ್ಚಿಸಲಾಗಿಲ್ಲ. ಅವರು ಮೂರ್ಖರ ಸ್ವರ್ಗದಲ್ಲಿ ಜೀವಿಸುತ್ತಿದ್ದಾರೆ” ಎಂದು ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷರೊಬ್ಬರು ಹೇಳಿದ್ದರೆ, ಇನ್ನೊಬ್ಬ ಮಾಜಿ ಅಧ್ಯಕ್ಷರ ಪ್ರಕಾರ ಮೋಹನದಾಸ್ ತಮ್ಮ ಕಾರ್ಯದಿಂದ ಪಕ್ಷಕ್ಕೆ ಅವಮಾನವುಂಟು ಮಾಡಿದ್ದಾರೆ. ಅವರೇನು ಪಕ್ಷದ ಅಧಿಕೃತ ವಕ್ತಾರರಲ್ಲ, ಎಂದಿದ್ದಾರೆ.

ಮತೀಯ ಭಾವನೆ ಕೆರಳಿಸಿದ ಆರೋಪದ ಮೇಲೆ ಮರರಿಕುಳಂ ಪೊಲೀಸರು ಮೋಹನದಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಐವೈಎಫ್ ಜಿಲ್ಲಾ ಕಾರ್ಯದರ್ಶಿ ಟಿ ಟಿ ಜಿಸ್ಮನ್ ಕೂಡ ಮೋಹನದಾಸ್ ವಿರುದ್ಧ ದೂರು ದಾಖಲಿಸಿದ್ದಾರೆ.