ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರ ಮುಷ್ಕರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೇಂದ್ರ ಸರಕಾರದಡಿಯಲ್ಲಿ ಶಿಕ್ಷಣ ಯೋಜನೆಗಳಿಗೆ ಕಡಿತವಾಗಿರುವ ಅನುದಾನವನ್ನು ವಿರೋಧಿಸಿ, ಈ ಯೋಜನೆಯನ್ನು ಬಲಿಷ್ಠಗೊಳಿಸಲು ಒತ್ತಾಯಿಸಿ ಹಾಗೂ ಯೋಜನೆಯಲ್ಲಿ ದುಡಿಯುವ ಬಿಸಿಯೂಟ ನೌಕರರನ್ನು ಖಾಯಂಗೊಳಿಸಲು ಆಗ್ರಹಿಸಿ, ಬಿಸಿಯೂಟ ನೌಕರರು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಸಿಐಟಿಯುವಿನ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ಆಯೋಜಿಸಲಾದ ಈ ಅಖಿಲ ಭಾರತದ ಮಟ್ಟದ ಮುಷ್ಕರದಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳಾ ನೌಕರರು ಪಾಲ್ಗೊಂಡು ಸರಕಾರದ ನೀತಿಯ ವಿರುದ್ಧ ಧಿಕ್ಕಾರ ಕೂಗಿದರು.

ಅಕ್ಷರ ದಾಸೋಹ ಯೋಜನೆಗೆ ಕಡಿತವಾಗಿರುವ 3 ಲಕ್ಷ ಕೋಟಿ ಅನುದಾನವನ್ನು ವಾಪಾಸ್ ನೀಡಬೇಕು, ಬಿಸಿಯೂಟ ನೌಕರರನ್ನು ದುಡಿಯುವ ಕಾರ್ಮಿಕರೆಂದು ಪರಿಗಣಿಸಿ ಅವರಿಗೆ ಕನಿಷ್ಠ ವೇತನ ಹಾಗೂ ನಿವೃತ್ತಿ ಸೌಲಭ್ಯ ನೀಡಬೇಕು, ನೌಕರರನ್ನು ಖಾಯಂಗೊಳಿಸಿ ಅವರಿಗೆ ಸಾಮಾಜಿಕ ಭದ್ರತೆಯ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.