ನಾವೇನೂ ನೀಲಿ ಚಿತ್ರ ಮಾಡಿಲ್ಲ : ದೇವಗನ್

ಅಜಯ್ ದೇವಗನ್ ಈಗ ಮಿಲನ್ ಲುತ್ರಿಯಾ ನಿರ್ದೇಶನದ `ಬಾದಶಹೋ’ ಚಿತ್ರದಲ್ಲಿ ನಟಿಸುತ್ತಿದ್ದಾನೆ. ಈ ಸಿನಿಮಾದಲ್ಲಿ ಅಜಯ್ ದೇವಗನ್ ಹಾಗೂ ಇಲಿಯಾನಾ ಡಿ ಕ್ರೂಜ್ ನಡುವೆ ಇಂಟಿಮೇಟ್ ಸೀನ್ ಒಂದಿದೆ. ಈ ದೃಶ್ಯಕ್ಕೆ ಸೆನ್ಸಾರ್ ಬೋರ್ಡಿನವರಿಂದ ಆಬ್ಜೆಕ್ಷನ್ ಬರಬಹುದು ಎನ್ನುವ ಕಾರಣದಿಂದ ಚಿತ್ರ ಸೆನ್ಸಾರಿಗೆ ಹೋಗುವ ಮೊದಲೇ ನಿರ್ದೇಶಕ ಲುತ್ರಿಯಾ ಕತ್ತರಿ ಹಾಕಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೆ ಅದನ್ನು ಅಜಯ್ ದೇವಗನ್ ಸಾರಾ ಸಗಟಾಗಿ ತಳ್ಳಿ ಹಾಕಿದ್ದಾನೆ.

ಅಜಯ್ ಈ ಬಗ್ಗೆ ಮಾತಾಡುತ್ತಾ “ಈ ವಿಷಯದಲ್ಲಿ ಸ್ವಲ್ಪವೂ ಹುರುಳಿಲ್ಲ. ಆ ದೃಶ್ಯವನ್ನು ಚಿತ್ರದಿಂದ ತೆಗೆದಿಲ್ಲ. ಅದಲ್ಲದೇ ನಾವೇನೂ ನೀಲಿ ಚಿತ್ರ ಮಾಡಿಲ್ಲ” ಎಂದು ಖಡಕ್ಕಾಗಿಯೇ ಹೇಳಿದ್ದಾನೆ. ಲುತ್ರಿಯಾ ಕೂಡಾ ಈ ಬಗ್ಗೆ ಮಾತಾಡುತ್ತಾ “ಆ ದೃಶ್ಯವನ್ನು ನಾವು ಎಡಿಟಿಂಗಿನಲ್ಲಿ ತೆಗೆದು ಹಾಕಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಮಧುರ್ ಭಂಡಾರ್ಕರ್ `ಇಂದು ಸರ್ಕಾರ್’ ಚಿತ್ರದಂತೆ `ಬಾದಶಹೋ’ ಕೂಡಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಮೂಡಿಬಂದಿರುವುದರಿಂದ ಆ ಸಿನಿಮಾಗೂ ಸೆನ್ಸಾರ್ ಬೋರ್ಡಿನಿಂದ ಸರ್ಟಿಫಿಕೇಟ್ ತೆಗೆದುಕೊಳ್ಳಲು ಕಷ್ಟವಾಗಬಹುದಾ ಎನ್ನುವ ಪ್ರಶ್ನೆಗೆ ಲುತ್ರಿಯಾ “ನಮ್ಮ ಚಿತ್ರದಲ್ಲಿ ರಾಜಕೀಯಕ್ಕಿಂತ ಆಕ್ಷನ್ನಿಗೇ ಹೆಚ್ಚು ಒತ್ತು ಕೊಡಲಾಗಿದೆ. ಹಾಗಾಗಿ ಯಾವ ಸಮಸ್ಯೆಯೂ ಆಗಲಾರದು” ಎಂದು ವಿಶ್ವಾಸದಿಂದಲೇ ಮಾತಾಡುತ್ತಾರೆ.

ಸಿನಿಮಾದಲ್ಲಿ ಅಜಯ್, ಇಲಿಯಾನಾ ಮುಖ್ಯ ಪಾತ್ರಧಾರಿಗಳಾಗಿದ್ದರೆ ಇಮ್ರಾನ್ ಹಶ್ಮಿ, ಇಷಾ ಗುಪ್ತಾ, ಸಂಜಯ್ ಮಿಶ್ರಾ ಮೊದಲಾದವರೂ ಅಭಿನಯಿಸಿದ್ದಾರೆ. ಸಿನಿಮಾ ಸೆಪ್ಟೆಂಬರ್ 1ಕ್ಕೆ ರಿಲೀಸ್ ಆಗುತ್ತಿದೆ.