ವಿವಿಧ ಬೇಡಿಕೆ ಆಗ್ರಹಿಸಿ ಎ ಐ ವೈ ಎಫ್ ಧರಣಿ

ಪಿ ಎಸ್ ಸಿ ಕಚೇರಿ ಎದುರು ನಡೆದ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಎ ಐ ವೈ ಎಫ್ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಕಾಸರಗೋಡು ಪಿ ಎಸ್ ಸಿ ಕಚೇರಿಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಹಲವರು ಪಾಲ್ಗೊಂಡರು.

ಪಿ ಎಸ್ ಸಿ ಉದ್ಯೋಗಾರ್ಥಿಗಳನ್ನು ಶೀಘ್ರಗೊಳಿಸಬೇಕು, ಗುತ್ತಿಗೆ ಆಧಾರಿತ ವಿಧಾನಗಳಿಗೆ ಅಂತ್ಯ ನೀಡಬೇಕು, ಇದೇ ತಿಂಗಳು ಅಂತ್ಯಗೊಳ್ಳಲಿರುವ ರ್ಯಾಂಕ್ ಪಟ್ಟಿಗಳ ಅವಧಿಯನ್ನು ವಿಸ್ತರಿಸಬೇಕು, ಖಾಲಿ ಹುದ್ದೆಗಳ ವರದಿ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಬಳಿಕ ಪಿ ಎಸ್ ಸಿ ಕಚೇರಿ ಮುಂಭಾಗದಲ್ಲಿ ನಡೆದ ಧರಣಿಯನ್ನು ಜಿಲ್ಲಾ ಕಾರ್ಯದರ್ಶಿ ಮುಖೇಶ್ ಬಾಲಕೃಷ್ಣ ಉದ್ಘಾಟಿಸಿದರು. ಬಳಿಕ ಮಾತನಡಿದ ಅವರು, “ಕೇರಳದ ಎಲ್ಲಾ ಜಿಲ್ಲೆಗಳಲ್ಲೂ ಪಿ ಎಸ್ ಸಿ ನೀತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಎಡರಂಗ ಸರಕಾರ ಅಧಿಕಾರಕ್ಕೆ ಬಂದು ತಿಂಗಳುಗಳೇ ಕಳೆದರೂ ಪಿ ಎಸ್ ಸಿ ಬಗ್ಗೆ ಯಾವುದೇ ನಿರ್ಣಾಯಕ ತೀರ್ಮಾನ ಕೈಗೊಂಡಿಲ್ಲ” ಎಂದು ಹೇಳಿದರು.