ಅಕ್ರಮ ಹೊಯಿಗೆ ಸಾಗಾಟ ವಿರುದ್ಧ ಗ್ರಾಮಸ್ಥರ ಆಕ್ರೋಶ

ಐಕಳ ಗ್ರಾಮಸಭೆ

ಮುಲ್ಕಿ : ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯಿತಿ ಸಭೆಯಲ್ಲಿ ಪಂಚಾಯತಿ ವ್ಯಾಪ್ತಿಯಲ್ಲಿ ಅಕ್ರಮ ಹೊಯಿಗೆ ಸಾಗಾಟ, ನೀರಿನ ಸಮಸ್ಯೆ, ಚರಂಡಿ ದುರಸ್ಥಿಯಲ್ಲಿ ಇಲಾಖೆಯ ನಿಲ್ರ್ಯಕ್ಷ, ಸಂಸದರ ಸಾಧನೆ ಮೊದಲಾದವುಗಳ ಬಗ್ಗೆ ತೀವ್ರ ಚರ್ಚೆ ನಡೆಯಿತು.

ಐಕಳ ಪಂಚಾಯತಿ ವ್ಯಾಪ್ತಿಯ ಪೆರ್ಗುಂಡಿ ಬಳಿ ಅಕ್ರಮ ಹೊಯಿಗೆ ಮಾಫಿಯಾ ನಡೆಯುತ್ತಿದ್ದರೂ ಪಂಚಾಯತಿ ಮೌನವಹಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದಾಗ ಅಕ್ರಮ ಮರಳುಗಾರಿಕೆಗೂ ಪಂಚಾಯತಿಗೂ ಸಂಬಂದವಿಲ್ಲ ಎಂದು ಪಂಚಾಯತಿ ಅಧ್ಯಕ್ಷ ಉತ್ತರಿಸಿದರು.

“ಮರಳುಗಾರಿಕೆ  ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಂಬಂದಪಟ್ಟದ್ದು. ಅಕ್ರಮ ಮರಳುಗಾರಿಕೆಯಲ್ಲಿ ಅವರ ಪಾಲೂ ಇದೆ” ಎಂದು ಅಧ್ಯಕ್ಷರು ಗಂಭೀರ ಆರೋಪ ಮಾಡಿದರು. ಅಕ್ರಮ ಮರಳುಗಾರಿಕೆ ಬಗ್ಗೆ ಪಂಚಾಯತಿಯಿಂದಲೂ ಸಂಬಂದಪಟ್ಟ ಇಲಾಖೆಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದರು.

ಐಕಳ ಪಂಚಾಯತಿ ಅಧ್ಯಕ್ಷರ ವಾರ್ಡು ಉಳೆಪಾಡಿ ಪಲ್ಲದಕಳ ಎಂಬಲ್ಲಿ ಕಳೆದ 8 ವರ್ಷದಿಂದ ಪೈಪು ಲೈನು ಮಾಡಿದರೂ ನೀರಿಲ್ಲ, ಆದರೆ ಬಿಲ್ಲು 1920 ರೂ ಬಂದಿದೆ ಎಂದು ಗ್ರಾಮಸ್ಥ ಸತೀಶ್ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.

“ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರುಕಾವೇರಿಯಿಂದ ಸಂಕಲಕರಿಯ ಪಟ್ಟೆ ಕ್ರಾಸಿನವರೆಗೆ ಹಾದುಹೋಗುವ ರಾಜ್ಯ ಹೆದ್ದಾರಿಯ ಎರಡೂ ಬದಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಹಾಗೂ ದುರಸ್ತಿ ಯಾಕೆ ಮಾಡುತ್ತಿಲ್ಲ ? ಮಳೆಗಾಲದಲ್ಲಿ ರಸ್ತೆಯಲ್ಲಿಯೇ ನೀರು ಹರಿದು ಹೋಗುತ್ತಿದೆ. ಶಾಲಾ ಮಕ್ಕಳಿಗೆ, ಪಾದಚಾರಿಗಳಿಗೆ ಇದರಿಂದ ತೀವ್ರ ಸಮಸ್ಯೆ ಆಗಿದೆಯಾದರೂ ಇಲಾಖೆ ಯಾಕೆ ಮೌನವಾಗಿದೆ ? ನಮ್ಮ ಮನವಿ ಏನಾಯಿತು ?” ಎಂದು ಸುಧಾಮ ಶೆಟ್ಟಿ ಕೇಳಿದಾಗ ಪಂಚಾಯಿತಿ ಅಧ್ಯಕ್ಷ  ದಿವಾಕರ ಚೌಟ ಮಾತನಾಡಿ “ನಾವು ಗ್ರಾ. ಪಂ. ವತಿಯಿಂದ ಈಗಾಗಲೇ ಮನವಿ ನೀಡಿದ್ದೇವೆ” ಎಂದರು.

24ikala2

“ಸರಕಾರಿ ಜಾಗವಿದ್ದರೂ ವಸತಿ ನಿವೇಶನಗಳನ್ನು ಯಾಕೆ ನೀಡಿಲ್ಲ ? ಪ್ರತಿ ಗ್ರಾಮ ಸಭೆಯಲ್ಲಿ ಈ ಬಗ್ಗೆ ಕೇಳಿ ಕೇಳಿ ಸಾಕಾಗಿ ಹೋಗಿದೆ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

“ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ. ಇನ್ನೂ ಕೂಡಾ ಹಲವು ಪ್ರದೇಶಗಳಿಗೆ ನೀರು ಬರುತ್ತಿಲ್ಲ. ನೀರು ಶುದ್ಧಿಕರಣಗೊಳ್ಳದೆ ಕೆಲವು ಕಡೆ ಸರಬರಾಜು ಆಗುತ್ತಿದೆ”  ಎಂದು ಗ್ರಾಮಸ್ಥರು ಆಕ್ಷೇಪಿಸಿದಾಗ ಜಿ ಪಂ ಸದಸ್ಯ ವಿನೋದ್ ಬೊಳ್ಳೂರು ಮಾತನಾಡಿ, “ಕಾಮಗಾರಿ ಬಿಲ್ಲು ನೀಡಿಲ್ಲದ ಕಾರಣ ಕಾಮಗಾರಿ ವಿಳಂಬವಾಗಿದೆ. ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಚರ್ಚೆ ನಡೆದಿದ್ದು ಕಾಮಗಾರಿ ತ್ವರಿತವಾಗಿ ಮುಗಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ 10 ಗ್ರಾಮಗಳ ಗ್ರಾಮ ಸಮಿತಿ ರಚಿಸಲಾಗಿದೆ”  ಎಂದರು. “ಐಕಳ ಗ್ರಾಮದಲ್ಲಿ ಸರಕಾರಿ ಸ್ಥಳವಿದ್ದರೂ ಸ್ಮಶಾನವಿಲ್ಲ. ಶೀಘ್ರ ಇದರ ವ್ಯವಸ್ಥೆ ಆಗಬೇಕು”  ಎಂದು ಗ್ರಾಮಸ್ಥರು ಆಗ್ರಹಿಸಿದರು.

ಸಂಸದರ ಸಾದನೆ ಶೂನ್ಯ

ಸಂಸದ ನಳಿನ್ ಕುಮಾರ್ ಕಟೀಲುರವರು ಸಂಸದರಾಗಿ ಇದುವರೆಗೂ ಐಕಳ ಗ್ರಾಮಕ್ಕೆ ಅನುದಾನ ದೊರಕಿಸಿಲ್ಲ ಯಾಕೆ ಎಂದು ಪ್ರಶ್ನಿಸಿದ ಗ್ರಾಮಸ್ಥರು ಐಕಳ ಆಸುಪಾಸಿನ ಸಭೆ ಸಮಾರಂಭಗಳಿಗೆ ಯಾವಾಗಲೂ ಭರ್ಜರಿಯಾಗಿಯೇ ಬಂದು ಹೋಗುತ್ತಾರೆ ವಿನಹ ಅನುದಾನ ಯಾಕಿಲ್ಲ ಎಂದಾಗ ಪಂಚಾಯತಿ ಅಧ್ಯಕ್ಷರು ಕಸಿವಿಸಿಗೊಂಡು ಮೌನಕ್ಕೆ ಶರಣಾದರು.

ಪಂಚಾಯತಿ ಸಭೆಯಲ್ಲಿ ಬೆರಳೆಣಿಕೆಯಷ್ಟು ಗ್ರಾಮಸ್ಥರು ಭಾಗವಹಿಸಿದ್ದರೆ ಅನೇಕ ಅಧಿಕಾರಿಗಳು ಗೈರಾಗಿದ್ದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸಭೆ ಬೆಳಗ್ಗೆ 10.30ಗೆಶುರುವಾಗಬೇಕಾಗಿದ್ದರೂ ಗ್ರಾಮಸ್ಥರ ಕೊರತೆಯಿಂದ ಸಭೆ ಶುರುವಾದಾಗ  11.30 ಮೀರಿತ್ತು.