ಉಡುಪಿ ಜಿಲ್ಲೆಯ ಹೆಚ್ ಐ ವಿ ಸೋಂಕಿತರಿಗೆ ವಿವಿಧ ಸವಲತ್ತು

ಉಡುಪಿ : ಜಿಲ್ಲೆಯ ಸುಮಾರು 604 ಹೆಚ್ ಐ ವಿ ಸೋಂಕಿತರಿಗೆ ಬಿಪಿಎಲ್ ಕಾರ್ಡುಗಳನ್ನು ವಿತರಿಸಲಾ ಗುವುದು, ಅವರಲ್ಲಿ ಕೆಲವು ಮಂದಿ ಅತಿ ಬಡವರನ್ನು ಗುರುತಿಸಿ ಅಂತ್ಯೋದಯ ಕಾರ್ಡುಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ ವೆಂಕಟೇಶ್ ಹೇಳಿದ್ದಾರೆ.

ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಸುಮಾರು 632 ಎಚ್ ಐ ವಿ ಸೋಂಕಿತರಿಗೆ ಬಸ್ಸು ಪಾಸುಗಳನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ.

ಜಿಲ್ಲೆಯ ಸುಮಾರು 247 ಮಂದಿ ಎಚ್ ಐ ವಿ ಸೋಂಕಿತರಿಗೆ ವಿಶೇಷ ಪೋಷಕಾಂಶ ಮತ್ತು ನೈರ್ಮಲ್ಯಯುತ ಆಹಾರ ಕಿಟ್ ಜಿಲ್ಲಾಧಿಕಾರಿಗಳ ವಿಶೇಷ ನಿಧಿಯಿಂದ ಒದಗಿಸಲಾಗುವುದು, ವಿದ್ಯಾರ್ಥಿ ಸ್ಕಾಲರಶಿಪ್ ಕೂಡ ವಿತರಿಸಲಾಗುವುದು, ಜಿಲ್ಲೆಯಾದ್ಯಂತದ ಸುಮಾರು 80 ಹೆಚ್ ಐ ವಿ ಕೇಂದ್ರಗಳು ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಸರ್ಕಾರಿ ಆಸ್ಪತ್ರೆಗಳು, ಜಿಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಸಮಗ್ರ ಸಲಹೆ ಮತ್ತು ಪರೀಕ್ಷಾ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 2008ರ ಜುಲೈ ತಿಂಗಳಿಂದ ಆ್ಯಂಟಿ ರೆಟ್ರೋವೈರಲ್ ಥೆರಪಿ (ಎ ಆರ್ ಟಿ) ಸೌಲಭ್ಯಗಳು ಕೂಡ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ  ಮತ್ತು ಕುಂದಾಪುರ ತಾಲೂಕು ಆಸ್ಪತ್ರೆಗಳಲ್ಲಿ 2012ರಿಂದ ಲಭ್ಯವಿದೆ.

ಆರ್ಟ್ ಚಿಕಿತ್ಸೆ ಮತ್ತು ಔಷಧಿಗಳನ್ನು ಇದೇ ಸ್ಥಳಗಳಲ್ಲಿ ಬಡ ರೋಗಿಗಳಿಗೆ ನೀಡಲು ಆರಂಭಿಸಲಾಗುವುದು. ಆರ್ಟ್ ಚಿಕಿತ್ಸೆಯು ಹೆಚ್ಚು ಜನರಿಗೆ ಲಭ್ಯವಾಗುವಂತೆ ಮಾಡಲು ಲಿಂಕ್ ಆರ್ಟ್ ಕೇಂದ್ರಗಳನ್ನು ಬ್ರಹ್ಮಾವರ, ಬೈಂದೂರು, ಹೆಬ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಕಾರ್ಕಳದ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಅಸ್ಥಿತ್ವಕ್ಕೆ ತರಲಾಗುವುದು. ವಿವಿಧ ಸರ್ಕಾರೇತರ ಸಂಸ್ಥೆಗಳು ಹೆಚ್‍ಐವಿ/ಏಡ್ಸ್ ಅರಿವು ಕಾರ್ಯಕ್ರಮಗಳನ್ನು ನಡೆಸಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿವೆ.

ಪರಿಶೀಲನಾ ಸಭೆ

ಹೆಚ್‍ಐವಿ ಸೋಂಕಿತರಿಗೆ ಒದಗಿಸುತ್ತಿರುವ ವಿವಿಧ ಸೌಲಭ್ಯಗಳ ಪರಿಶೀಲನೆ ಮತ್ತು ಮೇಲ್ವಿಚಾರಣೆಗಾಗಿ ಮೂರು ತಿಂಗಳಿಗೊಮ್ಮೆ ವಿವಿಧ ಸರ್ಕಾರಿ ಇಲಾಖೆಗಳ ಪರಿಶೀಲನಾ ಸಭೆ ನಡೆಸಲಾಗುತ್ತಿದೆ.

ಜಿಲ್ಲೆಯಲ್ಲಿ 2008ರಿಂದ 2016ರ ಅಕ್ಟೋಬರ್ ತಿಂಗಳ ಅವಧಿಯಲ್ಲಿ 16 ಮಂದಿ ಪುರುಷರು, 4 ಮಂದಿ ಮಹಿಳೆಯರು ಮತ್ತು ಒಂದು ಹೆಣ್ಣು ಮಗು  ಸೇರಿದಂತೆ 21 ಮಂದಿ  ಹೆಚ್ ಐ ವಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಪ್ರತಿ ವರ್ಷ ವಿಶ್ವ ಏಡ್ಸ್ ದಿನವನ್ನು ಡಿಸೆಂಬರ್ 1ರಂದು ವಿಶೇಷ ಥೀಮಿನೊಂದಿಗೆ ಆಚರಿಸಲಾಗುತ್ತಿದ್ದು, ಈ ಬಾರಿ `ಏಡ್ಸ್ ತಡೆಗೆ ಕೈಗಳನ್ನು ಎತ್ತೋಣ’ ಎಂಬ ಥೀಮಿನೊಂದಿಗೆ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.