ಮಂಗಳೂರಿನಲ್ಲಿ ಅಹಿಂದ ಸಮಾವೇಶ, ಸಂಕಿರಣ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಭಾರತ ದೇಶದಲ್ಲಿ ಸಂವಿಧಾನ ರೂಪುಗೊಂಡು 60 ವರ್ಷ ಸಂದರೂ ಶೋಷಿತ ಸಮುದಾಯ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿದೆ. ಶೋಷಿತರ ಆಶಯಗಳು ಈಡೇರದೇ ಇರುವುದು, ಸಮಾನತೆ ಸಾಧಿಸಲು ಸಾಧ್ಯವಾಗದೇ ಇರುವುದಕ್ಕೆ ಹಲವು ಕಾರಣಗಳಿವೆ. ಇದಕ್ಕೆ ಜಾಗೃತಿಯೊಂದೇ ಪರಿಹಾರ ಎಂದು ಅಹಿಂದ ಚಳುವಳಿ ದ.ಕ. ಗೌರವಾಧ್ಯಕ್ಷ ನವೀನ್ ಚಂದ್ರ ಡಿ ಸುವರ್ಣ ಅಭಿಪ್ರಾಯಪಟ್ಟರು.

ಅಹಿಂದ ಚಳುವಳಿ ವತಿಯಿಂದ ನಗರದಲ್ಲಿ ಜರುಗಿದ ಕಾನೂನು ದಿನಾಚರಣೆ, ಅಹಿಂದ ಸಮಾವೇಶ ಮತ್ತು ವಿಚಾರ ಸಂಕಿರಣವನ್ನು ಸಂವಿಧಾನದ ಪುಸ್ತಕಗಳನ್ನು ವಿತರಿಸುವ ಮೂಲಕ ಉದ್ಘಾಟಿಸಿದರು.

ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸಲೆಂದೇ ವಿವಿಧ ಸರಕಾರಗಳು ರಚಿಸಿದ ಆಯೋಗಗಳು ಶಿಫಾರಸುಗಳನ್ನು ನೀಡಿದವು. ಆದರೆ ಅವಿನ್ನೂ ಅನುಷ್ಠಾನಗೊಂಡಿಲ್ಲ. ವಿ ಪಿ ಸಿಂಗ್ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಮಂಡಲ್ ವರದಿಯ 40 ಶಿಫಾರಸುಗಳ ಪೈಕಿ ಹಿಂದುಳಿದ ವರ್ಗದ ಜನರಿಗೆ ಸರಕಾರಿ ನೌಕರಿಯಲ್ಲಿ ಶೇ.27 ನೌಕರಿ ಒದಗಿಸುವ ಒಂದು ಶಿಫಾರಸು ಜಾರಿಗೆ ಯತ್ನಿಸಿದಾಗ ಕ್ರಾಂತಿಯಾಗಿತ್ತು. ಇದೀಗ ಅಹಿಂದ ವರ್ಗ ತನ್ನ ಸಂವಿಧಾನದ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ಮಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದರು.