ಹದಗೆಟ್ಟ ಆಗುಂಬೆ ಘಾಟ್ ರಸ್ತೆಯ ದುರಸ್ತಿ ಆರಂಭ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಹೆಬ್ರಿ-ಸೋಮೇಶ್ವರ ಮಾರ್ಗವಾಗಿ ಆಗುಂಬೆ ಘಾಟಿ ಮೂಲಕ ಶಿವಮೊಗ್ಗ-ತೀರ್ಥಹಳ್ಳಿ ಸಂಪರ್ಕಿಸುವ ಘಾಟಿಯ ತಿರುವುಗಳುಳ್ಳ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಡಿ 1ರಿಂದ ದುರಸ್ತಿ ಕಾರ್ಯ ಆರಂಭಗೊಂಡಿದೆ.

ಕರಾವಳಿ ಮಲೆನಾಡ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಮಲ್ಪೆ ಮೊಳಕಾಲ್ಮೂರು 169 ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಒಂದು ತಿಂಗಳು ಸಂಪೂರ್ಣ ಸ್ಥಗಿತಗೊಂಡಿದೆ. ಉಡುಪಿ-ಮಣಿಪಾಲ-ಮಂಗಳೂರಿನಿಂದ ಹೆಬ್ರಿ ಮೂಲಕ ಶಿವಮೊಗ್ಗಕ್ಕೆ ಹತ್ತಿರದ ಮಾರ್ಗ ಇದಾಗಿದ್ದು, ಶಿವಮೊಗ್ಗ-ತೀರ್ಥಹಳ್ಳಿ ಸುತ್ತಮುತ್ತಲಿನ ಪ್ರದೇಶದಿಂದ ಮಣಿಪಾಲ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ಸರಾಸರಿ 50ರಷ್ಟು ಅಂಬುಲೆನ್ಸುಗಳು, ಹಲವಾರು ಖಾಸಗಿ ಬಸ್ಸುಗಳು ಹಾಗೂ ಪ್ರವಾಸಿ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತದೆ. ಇಂತಹ ಮುಖ್ಯ ಘಾಟಿ ರಸ್ತೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಸುಮಾರು 7 ಕಿ ಮೀ ಸಂಪೂರ್ಣ ಹದಗೆಟ್ಟಿದ್ದು, ಡಿ 31ರವರೆಗೆ ದುರಸ್ತಿ ಕಾರ್ಯ ನಡೆಯುವುದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಇದರಿಂದಾಗಿ ಹೆಬ್ರಿ ಹಾಗೂ ಸೋಮೇಶ್ವರದ ಹೋಟೆಲ್ ಉದ್ಯಮಗಳಿಗೆ ಕೂಡ ಹೊಡೆತ ಬಿದ್ದಿದ್ದು, ಈ ಮಾರ್ಗವಾಗಿ ಸಂಚರಿಸುವ ಪ್ರವಾಸಿಗರನ್ನೇ ನಂಬಿಕೊಂಡು ನಿತ್ಯ ಜನಜಂಗುಳಿಯಿಂದ ತುಂಬಿರುತ್ತಿದ್ದ ಹೋಟೆಲುಗಳು ಈಗ ಬಿಕೋ ಎನ್ನುತ್ತಿವೆ.

ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಬದಲಿ ಮಾರ್ಗದ ವ್ಯವಸ್ಥೆಯನ್ನು ಸೂಚಿಸಲಾಗಿದೆ. ಉಡುಪಿ, ಕಾರ್ಕಳ, ಮಂಗಳೂರು ಮೊದಲಾದ ಪ್ರದೇಶಗಳಿಂದ ಸಂಚರಿಸುವ ವಾಹನಗಳು ಕಾರ್ಕಳದಿಂದ ಬಜಗೋಳಿ-ಶೃಂಗೇರಿ-ಕೊಪ್ಪ ಮೂಲಕ ಹಾಗೂ ಕುಂದಾಪುರ ಸುತ್ತಮುತ್ತಲಿನ ಪ್ರದೇಶದವರು ಸಿದ್ಧಾಪುರ ಬಾಳೆಬರೆ ಘಾಟಿ ಮೂಲಕ ಸಂಚರಿಸಬಹುದಾಗಿದೆ.