ರಾಜಕೀಯದಲ್ಲಿ ನೈತಿಕತೆ ನಶಿಸಿ ಹೋಗುತ್ತಿದೆಯೇ ?

ಮೇಟಿ ಕಾಮಕೇಳಿಯ ಸೀಡಿ ಹೊರಬೀಳುತ್ತಿದ್ದಂತೆಯೇ ಸಚಿವ ಸ್ಥಾನದಿಂದ ಕೆಳಗಿಳಿಯಲು ಅವರಿಗೆ ಆದೇಶ ನೀಡಿದ್ದು ಈ ಘಟನೆ ಸರಕಾರಕ್ಕೆ ಎಷ್ಟೊಂದು ಮುಜುಗರ ತಂದಿದೆಯೆಂಬುದು ಸ್ಪಷ್ಟ.

  • ಟಿ ಎಸ್ ಸುಧೀರ್

ಕಳೆದ ತಿಂಗಳು ರಾಯಚೂರಿನಲ್ಲಿ ನಡೆದ ಟಿಪ್ಪು ಜಯಂತಿ ಸಮಾರಂಭವೊಂದರಲ್ಲಿ ತಮ್ಮ ಮೊಬೈಲ್ ಫೋನಿನಲ್ಲಿ ನಗ್ನ ಚಿತ್ರ ವೀಕ್ಷಿಸುತ್ತಿದ್ದಾಗ ಶಿಕ್ಷಣ ಸಚಿವ ತನ್ವೀರ್ ಸೇಠ್ ಟೀವಿ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದು ನಂತರ ರಾಜೀನಾಮೆ ನೀಡಲು ನಿರಾಕರಿಸಿ ಸಿದ್ದರಾಮಯ್ಯ ಸರಕಾರವನ್ನು ಪೇಚಿಗೆ ಸಿಲುಕಿಸಿದ ಘಟನೆ ಇನ್ನೂ ಹಚ್ಚ ಹಸಿರಿರುವಾಗಲೇ ಅಬಕಾರಿ ಸಚಿವ 71 ವರ್ಷದ ಎಚ್ ವೈ ಮೇಟಿ ಸೆಕ್ಸ್ ಸೀಡಿಯೊಂದರಲ್ಲಿ ಕಾಣಿಸಿಕೊಂಡು ತಮ್ಮ ಹುದ್ದೆಯನ್ನು ಕಳೆದುಕೊಂಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ 16 ತಿಂಗಳುಗಳಿರುವಂತೆಯೇ ಇಂತಹ ಸೆಕ್ಸ್ ಹಗರಣಗಳು ಆಡಳಿತ ಕಾಂಗ್ರೆಸ್ ಪಕ್ಷದ ಪಾಲಿಗೆ ಬಹಳಷ್ಟು ದುಬಾರಿಯಾಗಲಿವೆಯೇ ? ರಾಜ್ಯ ರಾಜಕೀಯದಲ್ಲಿ ನೈತಿಕತೆ ನಶಿಸಿ ಹೋಗುತ್ತಿದೆಯೇ ? ಈ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ.

ಅತ್ತ ತನ್ವೀರ್ ಸೇಠ್ ತಾನು ತಪ್ಪು ಮಾಡಿಲ್ಲ, ಮೊಬೈಲಿಗೆ ಬಂದ ವಾಟ್ಸಪ್ ಸಂದೇಶ ತೆರೆಯುತ್ತಿದ್ದಂತೆಯೇ ಆ ಚಿತ್ರಗಳು ಕಂಡು ಬಂದಿವೆಯೆಂದು ಸಮಜಾಯಿಷಿ ನೀಡಿದ್ದರೆ, ಬುಧವಾರ ಸೆಕ್ಸ್ ಸೀಡಿ ದೆಹಲಿಯಲ್ಲಿ ಬಿಡುಗಡೆಗೊಂಡ ಮೂವತ್ತೇ ನಿಮಿಷಗಳಲ್ಲಿ ಮೇಟಿಗೆ ರಾಜೀನಾಮೆ ನೀಡದೆ ಅನ್ಯ ಮಾರ್ಗವಿರಲಿಲ್ಲ. ಈ ರಾಸಲೀಲೆ ಮೇಟಿಯ ವಿಧಾನ ಸೌಧ ಕಚೇರಿಯೊಳಗಡೆಯೇ ನಡೆದಿದೆಯೆಂದು ಶಂಕಿಸಲಾಗಿದೆ.

ವಿಚಿತ್ರವೆಂದರೆ ಕರ್ನಾಟಕದಲ್ಲಿ ಸದಾ ಒಂದಲ್ಲ ಒಂದು ಸೆಕ್ಸ್ ಹಗರಣ ನಡೆಯುತ್ತಲೇ ಇರುತ್ತದೆ. 2010ರಲ್ಲಿ ಅಂದಿನ ಬಿಜೆಪಿ ಸರಕಾರದಲ್ಲಿ  ಆಹಾರ ವiತ್ತ ನಾಗರಿಕ ಪೂರೈಕೆ ಸಚಿವರಾಗಿದ್ದ ಎಚ್ ಹಾಲಪ್ಪ ಕೂಡ ಇಂದು ಮೇಟಿ ಎದುರಿಸಿದಂತಹ ಪ್ರಕರಣದಲ್ಲಿಯೇ ಸಿಲುಕಿದ್ದರು. ತನ್ನ ಸ್ನೇಹಿತ ಪತ್ನಿಯ ಮೇಲೆಯೇ ಆಕೆಗೆ ಅರಿವಿಲ್ಲದಂತೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಆರೋಪ ಹಾಲಪ್ಪ ಎದುರಿಸಿದ್ದರು. ತನ್ನ ಪತ್ನಿಯನ್ನು ತನ್ನ ಮನೆಗೆ ಭೇಟಿ ನೀಡಿದ ವೇಳೆ ಸಚಿವ ಅತ್ಯಾಚಾರಗೈದ ದೃಶ್ಯಾವಳಿಯಿರುವ ವೀಡಿಯೊವನ್ನು  ಅವರ  ಸ್ನೇಹಿತ ವೆಂಕಟೇಶ್ ಮೂರ್ತಿಯೇ ಬಿಡುಗಡೆಗೊಳಿಸಿದ್ದು ಭಾರೀ ಸುದ್ದಿಯಾಗಿತ್ತು.

ಮುಂದೆ ಫೆಬ್ರವರಿ 2012ರಲ್ಲಿ ಬಿಜೆಪಿಯ ಅಂದಿನ ಸದಾನಂದ ಗೌಡ ಸರಕಾರದ  ಮೂವರು ಸಚಿವರಾದ ಕೃಷ್ಣ ಪಾಲೆಮಾರ್, ಸಿ ಸಿ ಪಾಟೀಲ್ ಹಾಗೂ ಲಕ್ಷ್ಮಣ ಸವದಿ ಸದನದಲ್ಲಿಯೇ  ನೀಲಿ ಚಿತ್ರ ವೀಕ್ಷಿಸುವಾಗ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದು ರಾಜೀನಾಮೆ ನೀಡಬೇಕಾಗಿ ಬಂದಿತ್ತು.

ಆದರೆ ಈ ಎಲ್ಲಾ ಪ್ರಕರಣಗಳಿಗಿಂತ ಮೇಟಿ ಪ್ರಕರಣ ಭಿನ್ನ. ಅವರು ವರ್ಗಾವಣೆಯೊಂದನ್ನು ಮಾಡುವ ಸಲುವಾಗಿ ಮಹಿಳೆಯಿಂದ ಸೆಕ್ಸ್ ಫೇವರ್ ಬಯಸಿದ್ದರೆಂದು ತಿಳಿದುಬಂದಿದೆ.

ಮೇಲಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿರುವ ಕುರುಬ ಜಾತಿಗೇ ಮೇಟಿ ಕೂಡ ಸೇರಿದವರಾಗಿರುವುದು ಕೂಡ ಇಲ್ಲಿ ಗಮನಿಸತಕ್ಕ ಅಂಶ. ಸೀಡಿ ಹೊರಬೀಳುತ್ತಿದ್ದಂತೆಯೇ ಸಚಿವ ಸ್ಥಾನದಿಂದ ಕೆಳಗಿಳಿಯಲು ಅವರಿಗೆ ಆದೇಶ ನೀಡಿದ್ದು ಈ ಘಟನೆ ಸರಕಾರಕ್ಕೆ ಎಷ್ಟೊಂದು ಮುಜುಗರ ತಂದಿದೆಯೆಂಬುದು ಸ್ಪಷ್ಟ. ಈ ಮೂಲಕ ಈ ಘಟನೆಯಿಂದ ಸರಕಾರಕ್ಕೆ ತಟ್ಟಬಹುದಾದ ಕಳಂಕವನ್ನು ಕಡಿಮೆಗೊಳಿಸುವ ಪ್ರಯತ್ನವನ್ನೂ ಮಾಡಲಾಗಿದೆಯೆಂದು ಹೇಳಬಹುದು.

ಇತ್ತೀಚೆಗೆ ಭಾರೀ ಸಂಖ್ಯೆಯ ಹೊಸ ನೋಟುಗಳೂ ಸೇರಿದಂತೆ ರೂ 152 ಕೋಟಿ ಅಕ್ರಮ ಹಣವನ್ನು ಇಬ್ಬರು ಹಿರಿಯ ಅಧಿಕಾರಿಗಳಿಂದ ವಶಪಡಿಸಿಕೊಂಡ ಘಡನೆ ಈಗಾಗಲೇ ಸಿದ್ದರಾಮಯ್ಯ ಸರಕಾರಕ್ಕೆ ಸಾಕಷ್ಟು ಇರಿಸುಮುರಿಸು ಉಂಟುಮಾಡಿದೆ.

ರಾಜ್ಯದ ಕಾಂಗ್ರೆಸ್ಸಿನ ಮೂರು ತಲೆಗಳು ಸದ್ಯದಲ್ಲಿಯೇ ಉರುಳಲಿವೆಯೆಂದು ಕೆಲ ದಿನಗಳ ಹಿಂದೆಯಷ್ಟೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪ ಭವಿಷ್ಯ ನುಡಿದಿದ್ದರು. ಇದೀಗ ಮೇಟಿ ತಲೆದಂಡವಾಗಿದೆ. ಇನ್ನು ಖಂಡಿತವಾಗಿಯೂ ಸರಕಾರ ಯಡ್ಡಿಯೂರಪ್ಪ ಹೇಳಿದ ಮಾತುಗಳನ್ನು ಗಂಭೀರವಾಗಿ ಪರಿಗಣಿಸಲಿದೆಯೆಂಬ ಗುಸುಗುಸು ಕೇಳಿಬರುತ್ತಿವೆ.