ಒಕ್ಕಲಿಗ ನಾಯಕರಿಂದಲೂ ಪ್ರತ್ಯೇಕ ಧರ್ಮದ ಬೇಡಿಕೆ

“ಲಿಂಗಾಯತರ ಪ್ರತ್ಯೇಕ ಧರ್ಮದ ಬೇಡಿಕೆಯನ್ನು ಸರ್ಕಾರ ಈಡೇರಿಸಿದ್ದಲ್ಲಿ, ಒಕ್ಕಲಿಗರನ್ನೂ ಪ್ರತ್ಯೇಕ ಧರ್ಮ ಎಂದು ಪರಿಗಣಿಸಬೇಕು” ಎಂದು ಮಾಜಿ ಗೃಹಸಚಿವ ಮತ್ತು ಬಿಜೆಪಿ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಕಳೆದ ಕೆಲವು ವಾರಗಳಿಂದ ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಗೆ ಬಹಳಷ್ಟು ಬೆಂಬಲ ವ್ಯಕ್ತವಾಗುತ್ತಿದೆ. ಈಗ ಒಕ್ಕಲಿಗರ ಪರವಾಗಿ ಬಿಜೆಪಿ ನಾಯಕರು ಪ್ರತ್ಯೇಕ ಧರ್ಮದ ಬೇಡಿಕೆ ಇಡುತ್ತಿದ್ದಾರೆ.

“ಒಕ್ಕಲಿಗರು ಹಿಂದೂಗಳಿಗಿಂತ ಭಿನ್ನ ಸಾಮಾಜಿಕ ಮತ್ತು ಧಾರ್ಮಿಕ ನಿಯಮಗಳನ್ನು ಪಾಲಿಸುತ್ತಾರೆ. ಹೀಗಾಗಿ ಅವರಿಗೂ ಅಲ್ಪಸಂಖ್ಯಾತ ಧರ್ಮದ ಗೌರವವನ್ನು ಕೊಡಬೇಕು. ಜೈನರು ಪ್ರತ್ಯೇಕ ಧರ್ಮವಾಗಿರುವಾಗ, ಲಿಂಗಾಯತರ ಪ್ರತ್ಯೇಕ ಧರ್ಮದ ಬೇಡಿಕೆಯನ್ನು ಸರ್ಕಾರ ಈಡೇರಿಸಿದ್ದಲ್ಲಿ, ಒಕ್ಕಲಿಗರನ್ನೂ ಪ್ರತ್ಯೇಕ ಧರ್ಮ ಎಂದು ಪರಿಗಣಿಸಬೇಕು” ಎಂದು ಕರ್ನಾಟಕದ ಮಾಜಿ ಗೃಹಸಚಿವ ಮತ್ತು ಬಿಜೆಪಿ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಆರ್ ಅಶೋಕ್ ಅಭಿಪ್ರಾಯವನ್ನು ಜೆಡಿಎಸ್ ಮಾಜಿ ಸಚಿವ ಎನ್ ಚೆಲುವನಾರಾಯಣ ಸ್ವಾಮಿ ಬೆಂಬಲಿಸಿದ್ದಾರೆ. ಆದರೆ ಅಂತಿಮ ನಿರ್ಧಾರವನ್ನು ತಮ್ಮ ಸಮುದಾಯದ ಧಾರ್ಮಿಕ ನಾಯಕರಾದ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠದ  ನಿರ್ಮಲಾನಂದ ಸ್ವಾಮಿ ತೆಗೆದುಕೊಳ್ಳಬೇಕು ಎಂದೂ ಅವರು ಹೇಳಿದ್ದಾರೆ. ನಿರ್ಮಲಾನಂದ ಸ್ವಾಮಿ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. “ಈಗಿನ ಪರಿಸ್ಥಿತಿ ಹೇಳಿಕೆ ನೀಡಲು ಸೂಕ್ತವಾಗಿಲ್ಲ. ಸಮಯ ಬಂದಾಗ ನಾನು ನನ್ನ ನಿರ್ಧಾರವನ್ನು ಹೇಳುತ್ತೇನೆ” ಎಂದು ಅವರು ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಒಕ್ಕಲಿಗ ಸ್ವಾಮಿಯನ್ನು ಭಾನುವಾರ ಭೇಟಿ ಮಾಡುವ ಕಾರ್ಯಕ್ರಮವೂ ಈ ಹಿನ್ನೆಲೆಯ ಬೆಳವಣಿಗೆಯಾಗಿರುವ ಸಾಧ್ಯತೆಯಿದೆ. ಆದರೆ ಜೆಡಿಎಸ್ ಮತಬ್ಯಾಂಕ್ ಆಗಿರುವ ಒಕ್ಕಲಿಗರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ಬಿಜೆಪಿ ಈ ಹೆಜ್ಜೆ ಇಟ್ಟಿದೆ ಎಂದೂ ಹೇಳಲಾಗುತ್ತಿದೆ.

ಸಾಮಾಜಿಕ ಸಮುದಾಯವಾಗಿ ರಾಜ್ಯದ ಜನಸಂಖ್ಯೆಯಲ್ಲಿ ಒಕ್ಕಲಿಗರ ಪ್ರಮಾಣ ಶೇ 15ರಿಂದ ಶೇ 17ರಷ್ಟಿದೆ. ಮುಖ್ಯವಾಗಿ ಈ ಸಮುದಾಯದವರು ಮಂಡ್ಯ, ಹಾಸನ, ಮೈಸೂರು, ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಿಕ್ಕಮಗಳೂರಿನಲ್ಲಿ ನೆಲೆಸಿದ್ದಾರೆ.