ತಾವೇ ಮಾಡಿದರು ಕಿಂಡಿ ಅಣೆಕಟ್ಟು ದುರಸ್ತಿ

ಗ್ರಾಮಸ್ಥರ ಶ್ರಮದಾನದಿಂದಲೇ ದುರಸ್ತಿ ಕಂಡ ಶೇಕಮಲೆಯ ಕಿಂಡಿ ಅಣೆಕಟ್ಟು

ದಶಕದಿಂದ ಕಾದರೂ ಶೇಕಮಲೆ ಗ್ರಾಮಸ್ಥರಿಗೆ ಬರಲಿಲ್ಲ ಸರಕಾರಿ ಅನುದಾನ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ದಶಕದಿಂದ ಪಾಳುಬಿದ್ದ ಕಿಂಡಿ ಅಣೆಕಟ್ಟನ್ನು ಸರಕಾರ ದುರಸ್ತಿ ಮಾಡುತ್ತಿದೆ ಎಂದು ಕಾಯುತ್ತಾ ಬಂದ ಗ್ರಾಮಸ್ಥರಿಗೆ ಕೊನೆಗೂ ಸರಕಾರದಿಂದ ಯಾವುದೇ ಅನುದಾನ ದೊರೆಯುವ ಲಕ್ಷಣ ಕಾಣಲಿಲ್ಲ. ಸುಸ್ತಾದ ಗ್ರಾಮಸ್ಥರು ಬಳಿಕ ತಾವೇ ಶ್ರಮದಾನದ ಮೂಲಕ ಅಣೆಕಟ್ಟನ್ನು ದುರಸ್ತಿ ಮಾಡಿದ ಘಟನೆ ಒಳಮೊಗ್ರು ಗ್ರಾಮದ ಶೇಕಮಲೆಯಲ್ಲಿ ನಡೆದಿದೆ.

ಒಳಮೊಗ್ರು ಗ್ರಾಮದ ಶೇಕಮಲೆಯ ಹೊಳೆಗೆ ಕಳೆದ 15 ವರ್ಷಗಳ ಹಿಂದೆ ಜಿಲ್ಲಾ ಪರಿಷತ್ ಅನುದಾನದಿಂದ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿತ್ತು. ಅಣೆಕಟ್ಟು ನಿರ್ಮಾಣ ಮಾಡುವ ವೇಳೆ ಹಲಗೆಯನ್ನೂ ಹಾಕಿತ್ತು. ಪ್ರಾರಂಭದ ಒಂದು ವರ್ಷ ಮಾತ್ರ ಹಲೆಗೆ ಹಾಕಿದ್ದು, ಮಾರನೇ ವರ್ಷ ಹಲಗೆ ಉಪಯೋಗಕ್ಕೆ ಬಾರಲಿಲ್ಲ. ಆ ಬಳಿಕ ಕಿಂಡಿ ಅಣೆಕಟ್ಟಿಗೆ ಜಿಲ್ಲಾ ಪರಿಷತ್  ಆಗಲಿ ಜಲಾನಯನ ಇಲಾಖೆಯಾಗಲಿ ಹಲಗೆ ಹಾಕಲು ಅನುದಾನವನ್ನು ನೀಡಿರಲಿಲ್ಲ. ನಂತರದಲ್ಲಿ ಅಣೆಕಟ್ಟು ಬಿರುಕುಬಿಟ್ಟು ಜಖಂಗೊಂಡಿತ್ತು. ಈ ನಡುವೆ ಗ್ರಾಮಸ್ಥರು ಹಲವು ಬಾರಿ ಇಲಾಖೆಗೆ ಮನವಿ ಮಾಡಿ ಅಣೆಕಟ್ಟು ದುರಸ್ತಿ ಮಾಡಿ ಹಲಗೆ ಹಾಕುವಂತೆ ಮನವಿ ಮಾಡಿದ್ದರೂ ಅದೆಲ್ಲವೂ ವ್ಯರ್ಥವಾಗಿತ್ತು.

ಇನ್ನು ಇಲಾಖೆಯನ್ನು ನಂಬಿ ಪ್ರಯೋಜನವಿಲ್ಲ ಎಂದು ನಿರ್ಧಾರಕ್ಕೆ ಬಂದ ಗ್ರಾಮಸ್ಥರು ಸ್ಥಳೀಯ ಉದ್ಯಮಿ ಸಿದ್ದಿಕ್ ಹಾಜಿಯವರ ಮೂಲಕ ಕಿಂಡಿ ಅಣೆಕಟ್ಟು ದುರಸ್ತಿ ಮಾಡಲು ಮುಂದಾದರು. ಇದರಂತೆ ಸುಮಾರು 2 ಲಕ್ಷ ರೂ ಖರ್ಚು ಮಾಡಿ ಹೊಸ ಹಲಗೆಯನ್ನು ತಂದು ಅಣೆಕಟ್ಟಿಗೆ ಜೋಡಿಸಿದ್ದಾರೆ. ಅಣೆಕಟ್ಟನ್ನೂ ದುರಸ್ತಿ ಮಡಿದ್ದಾರೆ. ಇದರಿಂದ ಗ್ರಾಮಸ್ಥರ ಬಹುಕಾಲದ ಬೇಡಿಕೆಯೊಂದು ಈಡೇರಿದಂತಾಗಿದೆ. ನ 25ರಂದು ನವೀಕರಣಗೊಂಡ ಕಿಂಡಿ ಅಣೆಕಟ್ಟು ಕಾಮಗಾರಿಯೂ ಪೂರ್ಣಗೊಂಡಿದೆ. ಈಗ ಅಣೆಕಟ್ಟಿನ ತುಂಬಾ ನೀರು ತುಂಬಿಕೊಂಡಿದ್ದು ಗ್ರಾಮಸ್ಥರು ಸಂತಸಗೊಂಡಿದ್ದಾರೆ.

ಕಿಂಡಿ ಅಣೆಕಟ್ಟು ದುರಸ್ತಿ ಮಾಡುವುದಾಗಿ ಗ್ರಾಮಸ್ಥರು ಸ್ಥಳೀಯ ಗ್ರಾ ಪಂ ಗೆ ಮನವಿಯನ್ನು ಮಾಡಿದ್ದರು. ದುರಸ್ತಿ ಮಾಡುವಂತೆ ಗ್ರಾ ಪಂ ಅನುಮತಿಯನ್ನು ನೀಡಿದೆ. ಆದರೆ ಗ್ರಾ ಪಂ.ನಲ್ಲಿ ಯಾವುದೇ ಅನುದಾನ ಇಲ್ಲದ ಕಾರಣ ಗ್ರಾಮಸ್ಥರ ಮಹತ್ಕಾರ್ಯಕ್ಕೆ ಕೈ ಜೋಡಿಸಿದ್ದರೂ ಯಾವುದೇ ಹಣಕಾಸಿನ ನೆರವು ನೀಡಲು ಸಾಧ್ಯವಾಗಿಲ್ಲ. “ಅಣೆಕಟ್ಟು ದುರಸ್ತಿ ವಿಚಾರವನ್ನು ತಾಲೂಕು, ಜಿಲ್ಲಾಡಳಿತದ ಗಮನಕ್ಕೂ ತರಲಾಗಿತ್ತು. ಆದರೆ ಯಾವ ಇಲಾಖೆಯೂ ನಯಾಪೈಸೆ ನೀಡಿಲ್ಲ” ಎನ್ನುತ್ತಾರೆ ಗ್ರಾಮಸ್ಥರು.

ಈಗ ಕಿಂಡಿ ಅಣೆಕಟ್ಟು ಪೂರ್ತಿ ನೀರು ತುಂಬಿಕೊಂಡಿದ್ದು, ಮುಂದಿನ 4 ತಿಂಗಳು ಈ ನೀರು ಇರುತ್ತದೆ. ಅಣೆಕಟ್ಟು ತುಂಬಿರುವ ಕಾರಣ ಸ್ಥಳೀಯ ಕೆರೆ, ಬಾವಿಗಳಲ್ಲಿಯೂ ನೀರು ತುಂಬಿಕೊಂಡಿದೆ. ಬೇಸಿಗೆ ಕೊನೆವರೆಗೂ ನೀರು ಸಿಗದೇ ಇದ್ದರೂ ವರ್ಷದ ನಾಲ್ಕು ತಿಂಗಳಾದರೂ ನೀರು ಸಿಗಬಹುದು ಮತ್ತು ನೀರು ಇಂಗಿಸಿದ ಕಾರಣ ಕೃಷಿ ತೋಟಗಳೂ ತಂಪಿನಿಂದ ಕೂಡಿರಬಹುದು ಎಂಬ ವಾದ ಗ್ರಾಮಸ್ಥರದ್ದು.

ನೀರಿಗಾಗಿ ಬಹುತೇಕ ಮಂದಿ ಕೊಳವೆಬಾವಿ ಕೊರೆಯಲು ಹಾತೊರೆಯುವ ಈ ಸಂದರ್ಭದಲ್ಲಿ ಶೇಕಮಲೆ ನಿವಾಸಿಗಳು ಮಾತ್ರ ಪಾಳು ಬಿದ್ದ ಕಿಂಡಿ ಅಣೆಕಟ್ಟನ್ನು ದುರಸ್ತಿ ಮಾಡುವ ಮೂಲಕ ನೀರಿನ ಆಸರೆಯನ್ನು ಸಂರಕ್ಷಣೆ ಮಾಡಿದ್ದಾರೆ. ಇದೀಗ ಬಹುತೇಕ ಕೃಷಿಕರೂ ಇದರ ನೀರನ್ನೇ ಬಳಕೆ ಮಾಡುತ್ತಿದ್ದಾರೆ. ಎಲ್ಲವನ್ನೂ ಸರಕಾರವೇ ಮಾಡಲಿ ಎಂದು ಕಾದು ಕುಳಿತರೆ ಯಾವುದೇ ಕೆಲಸವೂ ಆಗುವುದಿಲ್ಲ, ಗ್ರಾಮಸ್ಥರು ಒಂದಾದರೆ ಸರಕಾರದ ಅವಶ್ಯಕತೆಯೇ ಇರುವುದಿಲ್ಲ ಎನ್ನುತ್ತಿದ್ದಾರೆ ಗ್ರಾಮಸ್ಥರು.