ಅಮ್ಮ ನಂತರ ಈಗ ಶಶಿಕಲಾ ಮತ್ತಾಕೆಯ ಕುಟುಂಬದತ್ತ ಎಲ್ಲರ ದೃಷ್ಟಿ

ಎಐಎಡಿಎಂಕೆ ಪಕ್ಷದವರಿಂದ `ಮಣ್ಣರ್ಗುಡಿ ಮಾಫಿಯಾ’ ಎಂದೇ ಕರೆಯಲ್ಪಡುವ ಶಶಿಕಲಾ ಕುಟುಂಬದ   ಮಂದಿಯನ್ನು ಜಯಲಲಿತಾ  ತಮ್ಮ ಜೀವಿತ  ಕಾಲದಲ್ಲಿ ದೂರವೇ ಇಟ್ಟಿದ್ದರು.

ಚೆನ್ನೈ : ಎಐಎಡಿಎಂಕೆ ಅಧಿನಾಯಕಿ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪಾರ್ಥಿವ ಶರೀರ ಮಂಗಳವಾರದಂದು ರಾಜಾಜಿ ಹಾಲಿನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲ್ಪಟ್ಟಿದ್ದಾಗ ಆ ಹೂವಿನಿಂದಲಕೃತವಾಗಿದ್ದ ಶವಪೆಟ್ಟಿಗೆ ಪಕ್ಕ ದುಃಖದ ಮಡುವಿನಲ್ಲಿ ಜಯಲಲಿತಾ ಅವರ ಬಹು ಕಾಲದ ಗೆಳತಿ ಹಾಗೂ ಸಮೀಪವರ್ತಿ ಶಶಿಕಲಾ ನಟರಾಜನ್ ನಿಂತಿದ್ದರು. ಇದೇನು ಆಶ್ಚರ್ಯ ತರುವಂತಹ ವಿಚಾರವಲ್ಲವಾದರೂ, ನಿಜವಾಗಿ ಆಶ್ಚರ್ಯ ಹುಟ್ಟಿಸಿದ್ದು ಶಶಿಕಲಾ ಜತೆಗೆ ನಿಂತಿದ್ದ ಆಕೆಯ ಕೆಲ ಕುಟುಂಬ ಸದಸ್ಯರು.  ಎಐಎಡಿಎಂಕೆ ಪಕ್ಷದವರಿಂದ `ಮಣ್ಣರ್ಗುಡಿ ಮಾಫಿಯಾ’ ಎಂದೇ ಕರೆಯಲ್ಪಡುವ ಈ ಮಂದಿಯನ್ನು ಜಯಲಲಿತಾ  ತಮ್ಮ ಜೀವಿತ  ಕಾಲದಲ್ಲಿ ದೂರವೇ ಇಟ್ಟಿದ್ದರು.

ಈ ದುಃಖದ ಸಂದರ್ಭದಲ್ಲಿ ಶಶಿಕಲಾ ಅವರಿಗೆ ಆಸರೆಯಾಗಿ ಅವರು ಬಂದಿರಬಹುದು ಎಂದು ಹೇಳಬಹುದಾದರೂ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಜಯಲಲಿತಾ ಅವರಿಗೆ ಅಂತಿಮ ನಮನ ಸಲ್ಲಿಸಿದ್ದ ಸಂದರ್ಭದಲ್ಲಿ ಅವರಿಗೆ  ಶಶಿಕಲಾ ಅವರ ಪತಿ ನಟರಾಜನ್ ಅವರನ್ನು ಪರಿಚಯಿಸಲಾಗಿತ್ತೇ ವಿನಹ ಹತ್ತಿರದಲ್ಲಿಯೇ ನಿಂತಿದ್ದ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಅವರನ್ನಲ್ಲ ಎಂಬುದು ಗಮನಿಸತಕ್ಕ ಅಂಶವಾಗಿದೆ.

ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಕೂಡ ಆಲ್ಲಿಗೆ ಆಗಮಿಸಿದ್ದಾಗ ಅವರು ಪನ್ನೀರ್ ಸೆಲ್ವಂ ಅವರನ್ನು ಸಂತೈಸಿದ ಬಳಿಕ  ಪಕ್ಷದಲ್ಲಿ ಯಾವುದೇ ಅಧಿಕೃತ ಸ್ಥಾನಮಾನ ಹೊಂದಿರದ ಶಶಿಕಲಾ ಅವರ ಬಳಿ ಹೋಗಿ ಅವರ ತಲೆ ನೇವರಿಸಿದ್ದರು.

ತಮ್ಮ ಕುಟುಂಬದ ಮಂದಿಯೊಂದಿಗೆ ಸಂಬಂಧವಿರಿಸಿದ್ದಕ್ಕಾಗಿ ಹಾಗೂ ತಮ್ಮ ವಿರುದ್ಧ ಸಂಚು ಹೂಡುತ್ತಿರಬಹುದು ಎಂಬ ಸಂಶಯದಲ್ಲಿ 2012ರಲ್ಲಿ ಶಶಿಕಲಾ ಅವರನ್ನು ಜಯಲಲಿತಾ ಪಕ್ಷದಿಂದ ಹಾಗೂ ತಮ್ಮ ನಿವಾಸದಿಂದ ಉಚ್ಛಾಟಿಸಿದ್ದರು. ಆದರೆ ಇದಾದ 100 ದಿನಗಳಲ್ಲಿಯೇ ಶಶಿಕಲಾ ಮತ್ತೆ ಜಯಲಲಿತಾ ನಿವಾಸಕ್ಕೆ ವಾಪಸಾಗಿ ಮುಖ್ಯಮಂತ್ರಿಯ ವಿಶ್ವಾಸ ಸಂಪಾದಿಸಿದ್ದರು. “ಅಕ್ಕನೊಂದಿಗಿನ ನನ್ನ ಒಡನಾಟವನ್ನು ನನ್ನ ಸಂಬಂಧಿಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ಅವರ ನಿವಾಸದಿಂದ ಹೊರಬಂದ ನಂತರ ನನಗೆ ತಿಳಿದು ಬಂದಿತ್ತು. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ.  ಅಕ್ಕನ ವಿರುದ್ಧ ಸಂಚು ಹೂಡಿದ್ದವರು, ಅವರು ಯಾರೇ ಇರಬಹುದು, ಅವರೊಂದಿಗೆ ಇನ್ನು ಮುಂದೆ ನಾನು ಯಾವ ಸಂಬಂಧವನ್ನೂ ಇಟ್ಟುಕೊಳ್ಳುವುದಿಲ್ಲ” ಎಂದು ಶಶಿಕಲಾ ಪತ್ರ ಬರೆದಿದ್ದರು.

ಆದರೆ ಇದೀಗ ಆ ಸಂಬಂಧವೇ ಇಲ್ಲದ ಜನ ಮತ್ತೆ ಶಶಿಕಲಾ ಅವರಿಗೆ ಹತ್ತಿರವಾಗಿದ್ದಾರೆ. “ಎಂಜಿಆರ್ ಮತ್ತು ಜಯಲಲಿತಾ ಅವರ ಉತ್ತಮ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದು” ಎಂದು ಶಶಿಕಲಾ ಇತ್ತೀಚೆಗೆ ಹೇಳಿದ್ದಾರೆ. ಆದರೆ  ಅದನ್ನು ಯಾರು ಮುಂದುವರಿಸಿಕೊಂಡು ಹೋಗುತ್ತಾರೆ ಎಂಬುದೇ ಈಗಿನ ಪ್ರಶ್ನೆಯಾಗಿದೆ.

ಜಯಲಲಿತಾ ಅವರ ಅಕ್ರಮ ಆಸ್ತಿ ಪ್ರಕರಣದಲ್ಲಿ ಶಶಿಕಲಾ ಅವರ ಹೆಸರೂ ಉಲ್ಲೇಖಗೊಂಡಿರುವ ಹೊರತಾಗಿಯೂ ಶಶಿಕಲಾ ಎಐಎಡಿಎಂಕೆಯ ಉನ್ನತ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆಂದು ಹೇಳಲಾಗುತ್ತಿದೆ. ಜಯಲಲಿತಾ ಅಂತ್ಯಕ್ರಿಯೆ ಸಂದರ್ಭ ಶಶಿಕಲಾ ಅವರ ವಿರುದ್ಧ ಘೋಷಣೆ ಕೂಗುತ್ತಿದ್ದ ಪಕ್ಷ ಕಾರ್ಯಕರ್ತರು ಶಶಿಕಲಾ ಮತ್ತವರ ಕುಟುಂಬಕ್ಕೆ ಎಐಎಡಿಎಂಕೆಯನ್ನು ಮುನ್ನಡೆಸಲು ಅವಕಾಶ ನೀಡಬಹುದೇ ಎಂಬುದು ಈಗಿನ ಪ್ರಶ್ನೆಯಾಗಿದೆ.