ಭಾರತದಲ್ಲಿ ಒಬ್ಬಳೇ ಇರಲು ಭಯವಾಗುತ್ತಿದೆ ಎಂದ ರೇಪ್ ಸಂತ್ರಸ್ತೆ ಅಮೆರಿಕನ್ ಯುವತಿ

ಸಾಂದರ್ಭಿಕ ಚಿತ್ರ

ನವದೆಹಲಿ : ಭಾರತಕ್ಕೆ ಭೇಟಿ ನೀಡುವುದು ಅಮೆರಿಕಾದ ಪೆನ್ನಿಸಿಲ್ವೇನಿಯಾದ 25 ವರ್ಷದ ಆ ಯುವತಿಯ ಬಾಲ್ಯದ ಕನಸಾಗಿತ್ತು. ಆದರೆ ಎಂಟು ತಿಂಗಳ ಹಿಂದೆ ಆಕೆ ಭಾರತಕ್ಕೆ ನೀಡಿದ ಭೇಟಿ ಆಕೆಯ ಬದುಕಿನ ಕರಾಳ ಅಧ್ಯಾಯವಾಗಿಬಿಟ್ಟಿತ್ತು. ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ  ರಾಜಧಾನಿಯ ಪಂಚತಾರ ಹೊಟೇಲ್ ಒಂದರಲ್ಲಿ ತನಗೆ ಅಮಲು ಬರಿಸುವ ಪದಾರ್ಥ ನೀಡಿ,  ತನ್ನ ಮೇಲೆ ಅತ್ಯಾಚಾರ ಹಾಗೂ ದೈಹಿಕ ಹಲ್ಲೆಯನ್ನು ಟ್ರಾವೆಲ್ ಏಜನ್ಸಿಯ  ಚಾಲಕ, ಕಂಡಕ್ಟರ್ ಮತ್ತು ಗೈಡ್ ಹಾಗೂ ಇಬ್ಬರು ಹೊಟೇಲ್ ನೌಕರರು ನಡೆಸಿದ್ದರೆಂದು ಆಕೆ ದೂರಿ ದೆಹಲ ಪೊಲೀಸರಿಗೆ ಅಮೆರಿಕಾದ ಎನ್ಜಿಒ ಒಂದರ ಮುಖಾಂತರ ಅಕ್ಟೋಬರ್ ತಿಂಗಳಲ್ಲಿ ದೂರು ನೀಡಿದ್ದರು.

ಈ ಬಗ್ಗೆ ವಿಚಾರಣೆಗಾಗಿ ಆಕೆ ಡಿಸೆಂಬರ್ 19ರಂದು ಭಾರತಕ್ಕೆ ಆಗಮಿಸಿದ್ದಾರೆ. ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಸಾಕಷ್ಟು ಶ್ರಮ ವಹಿಸುತ್ತಿಲ್ಲ ಎಂದು ಆರೋಪಿಸುವ ಆಕೆ ತನಗೆ ಈಗಲೂ ಭಾರತದಲ್ಲಿ ಒಬ್ಬಳೇ ಇರಲು ಭಯವಾಗುತ್ತದೆ ಎಂದು ಹೇಳುತ್ತಾರೆ.

ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣವೊಂದನ್ನು ದಾಖಲಿಸಿದ್ದಾರೆ. ಈ ಸಂಬಂಧ ಮೂವರು ಶಂಕಿತರನ್ನು ಪ್ರಶ್ನಿಸಲಾಗಿದೆಯಾದರೂ ಇಲ್ಲಿಯ ತನಕ ಯಾರನ್ನೂ ಬಂಧಿಸಲಾಗಿಲ್ಲ.