ಜನಪ್ರತಿನಿಧಿಗಳನ್ನು ಅರ್ಹತೆ ನೋಡಿ ಆರಿಸಿ, ಜಾತಿ ತಿರಸ್ಕರಿಸಿ

ಆರೆಸ್ಸೆಸ್ ಸಲಹೆ

ನವದೆಹಲಿ : ಐದು ರಾಜ್ಯಗಳಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳನ್ನು ಓಲೈಸುವುದರಲ್ಲಿ ನಿರತವಾಗಿದ್ದರೆ, ಆರೆಸ್ಸೆಸ್ ಮತದಾರರಿಗೆ ಮಹತ್ವದ ಸಂದೇಶವೊಂದನ್ನು ರವಾನಿಸಿದೆ. ಜನಪ್ರತಿನಿಧಿಗಳನ್ನು ಅವರ ಅರ್ಹತೆಯ ಆಧಾರದಲ್ಲಿ ಆರಿಸಿ, ಜಾತಿಯಾಧಾರದಲ್ಲಿ ಅಲ್ಲ ಎಂದು ಅದು ಹೇಳಿದೆ.

ಹಿಂದುಳಿದ ವರ್ಗಗಳ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಉತ್ತರ ಪ್ರದೇಶ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಬಿಜೆಪಿ ಈ ವರ್ಗಗಳನ್ನು ಓಲೈಸಲು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಆರೆಸ್ಸೆಸ್ಸಿನ ಸಂದೇಶ ಮಹತ್ವ ಪಡೆದುಕೊಂಡಿದೆ.

ಜಾತಿ ಆಧಾರಿತ ರಾಜಕೀಯ ನಡೆಸಿ ಈ ಮೂಲಕ ವೈಯಕ್ತಿಕ ಲಾಭ ಪಡೆದಿರುವುದೇ ಅಲ್ಲದೆ ದೇಶದಲ್ಲಿ ಜಾತೀಯತೆ ಬೇರು ಬಿಡಲು ಪ್ರಮುಖ ಕಾರಣವಾಗಿರುವ ರಾಜಕೀಯ ಪಕ್ಷಗಳನ್ನು ರವಿವಾರ ಆರೆಸ್ಸೆಸ್ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವುದೇ ರಾಜಕೀಯ ಪಕ್ಷವನ್ನು ಉಲ್ಲೇಖಿಸದ ಅವರು ಜಾತಿಯನ್ನು ಆಧರಿಸಿ ಮತ ಚಲಾಯಿಸುವುದು ಆರೋಗ್ಯವಂತ ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದಿದ್ದಾರೆ.