ಬಾಬ್ರಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿ, ಜೋಷಿ ದೋಷಿ ಎಂದಾದರೆ 5 ವರ್ಷ ಜೈಲು

ನವದೆಹಲಿ : ಗುರುವಾರದಂದು ಸುಪ್ರೀಂ ಕೋರ್ಟ್, 1992ರಲ್ಲಿ ನಡೆದಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಂಬಂಧದ  ಅಪೀಲುಗಳಲ್ಲಿ ತೀರ್ಪನ್ನು ಕಾದಿರಿಸಿತಲ್ಲದೆ ಬಿಜೆಪಿ ನಾಯಕರುಗಳಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ ಹಾಗೂ 19 ಮಂದಿ ಇತರರ ವಿರುದ್ಧ ಇರುವ ಸಂಚು ನಡೆಸಿದ ಆರೋಪಗಳ ವಿಚಾರದಲ್ಲಿ ಲಕ್ನೋದಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಮತ್ತೆ ಜಂಟಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ. ಕಳೆದ 25 ವರ್ಷಗಳಿಂದ ಬಾಕಿಯಿರುವ  ಈ ಪ್ರಕರಣದ ವಿಚಾರಣೆಯನ್ನು ಎರಡು ವರ್ಷಗಳಲ್ಲಿ ಪೂರ್ತಿಗೊಳಿಸಲು ಲಕ್ನೋದ ನ್ಯಾಯಾಲಯಕ್ಕೆ ಆದೇಶಿಸುವುದಾಗಿಯೂ ಸುಪ್ರೀಂ ಕೋರ್ಟ್  ಹೇಳಿದೆ. ಈ ಜಂಟಿ ವಿಚಾರಣೆಯಲ್ಲಿ ಅಡ್ವಾಣಿ ಮತ್ತಿತರರ ವಿರುದ್ಧದ ಆರೋಪ ಸಾಬೀತುಗೊಂಡಲ್ಲಿ ಅವರಿಗೆ ಐದು ವರ್ಷಗಳ ತನಕ ಜೈಲು ಶಿಕ್ಷೆ ವಿಧಿಸಬಹುದಾಗಿದೆ.